Advertisement
ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್ ಕೂಟವನ್ನು ಮರಳಿ ಸಂಘಟಿಸಲು ಅನುಕೂಲವಾಗುವಂತೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಒಂದು ವಾರ ಮುಂಚಿತವಾಗಿ ಆರಂಭಿಸುವಂತೆ ಇಸಿಬಿ ಜತೆ ಬಿಸಿಸಿಐ ವಿನಂತಿಸಿಕೊಂಡಿದೆ ಎಂದು ಕೆಲವು ಇಂಗ್ಲಿಷ್ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಕುರಿತು ಮಾಹಿತಿ ನೀಡಿದ ಇಸಿಬಿ, “ನಾವು ಬಿಸಿಸಿಐ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಇಂತಹ ಯಾವುದೇ ವಿಷಯದ ಕುರಿತು ಚರ್ಚಿಸಿಲ್ಲ. ಅಲ್ಲದೇ ಬಿಸಿಸಿಐ ನಮ್ಮ ಬಳಿ ಟೆಸ್ಟ್ ಸರಣಿಯನ್ನು ಮುಂಚಿವಾಗಿ ನಡೆಸುವ ಪ್ರಸ್ತಾವವನ್ನೂ ಮುಂದಿಟ್ಟಿಲ್ಲ. ಇದು ಕೇವಲ ಊಹಾಪೋಹ. ಪೂರ್ವನಿಗದಿತ ವೇಳಾಪಟ್ಟಿಯಂತೆ ಈ ಟೆಸ್ಟ್ ಸರಣಿ ನಡೆಯಲಿದೆ’ ಎಂದಿದೆ. ಬಿಸಿಸಿಐ ಕೂಡ ಇದನ್ನೇ ಹೇಳಿದೆ. ಅಂದರೆ ಆಗಸ್ಟ್ 4ರಿಂದಲೇ ಸರಣಿ ಆರಂಭವಾಗಲಿದೆ. ಅಕಸ್ಮಾತ್ ಸರಣಿ ಒಂದು ವಾರ ಮೊದಲೇ ಶುರುವಾದರೆ ಆಗ ಇಂಗ್ಲೆಂಡಿನ ಅತ್ಯಂತ ಮಹತ್ವಾಕಾಂಕ್ಷೆಯ “ದಿ ಹಂಡ್ರೆಡ್’ ಸರಣಿ ಹಾಗೂ ಪಾಕಿಸ್ಥಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ ಮೇಲೆ ಇದು ಪರಿಣಾಮ ಬೀರಲಿದೆ. ಪಾಕ್ ಎದುರಿನ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಜು. 8ರಿಂದ 20ರ ತನಕ, “ದಿ ಹಂಡ್ರೆಡ್’ ಸರಣಿ ಜು. 23ರಿಂದ ಆ. 22ರ ತನಕ ನಡೆಯಲಿದೆ.
Related Articles
“ಟೆಸ್ಟ್ ಸರಣಿಯನ್ನು ಒಂದು ವಾರ ಮುಂಚಿತವಾಗಿ, ಅಂದರೆ ಜುಲೈ ಕೊನೆಯ ವಾರದಲ್ಲಿ ಆರಂಭಿಸುವಂತೆ ಬಿಸಿಸಿಐ ಇಸಿಬಿಯಲ್ಲಿ ವಿನಂತಿಸಿತ್ತು. ಇದರಿಂದ ಉಳಿದ ಐಪಿಎಲ್ ಪಂದ್ಯಗಳ ಆಯೋಜನೆಗೆ ಇಂಗ್ಲೆಂಡ್‌ನಲ್ಲಿ ಸೂಕ್ತ ಅವಕಾಶ ಸಿಗುತ್ತದೆ ಎಂಬುದು ಇದರ ಉದ್ದೇಶ’ ಎಂಬುದಾಗಿ ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿದ್ದವು. ಇಂಗ್ಲೆಂಡಿನ ಮಾಜಿ ನಾಯಕ ಮೈಕ್ ಆಥರ್ಟನ್ ಕೂಡ ತಮ್ಮ ಅಂಕಣವೊಂದರಲ್ಲಿ ಈ ಅಂಶವನ್ನು ಉಲ್ಲೇಖೀಸಿದ್ದರು.
Advertisement
ಐಪಿಎಲ್ ಮುಗಿಸದೇ ಹೋದರೆ ಬಿಸಿಸಿಐ ಸುಮಾರು 2,500 ಕೋಟಿ ರೂ. ನಷ್ಟಕ್ಕೊಳಗಾಗಲಿದೆ.