ಢಾಕಾ: ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ ಆಟದ ನೆರವಿನಿಂದ ಭಾರತದ ವನಿತೆಯರ ತಂಡವು ಬಾಂಗ್ಲಾ ವನಿತೆಯರ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ. ಇದರೊಂದಿಗೆ ಹರ್ಮನ್ ಪಡೆ ಪ್ರವಾಸಲ್ಲಿ ಶುಭಾರಂಭ ಮಾಡಿದೆ.
ಢಾಕಾದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಬಾಂಗ್ಲಾ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 114 ರನ್ ಮಾಡಿದರೆ, ಭಾರತವು ಮೂರು ವಿಕೆಟ್ ನಷ್ಟಕ್ಕೆ 16.2 ಓವರ್ ಗಳಲ್ಲಿ ಗುರಿ ತಲುಪಿತು.
ಬಾಂಗ್ಲಾ ಪರ ಶೋರ್ನಾ ಅಖ್ತರ್ ಗರಿಷ್ಠ 28 ರನ್, ಸೊಭಾನಾ ಮೊಸ್ತರಿ 23 ರನ್ ಮತ್ತು ಶತಿ ರಾಣಿ 22 ರನ್ ಗಳಿಸಿದರು. ಭಾರತದ ಪರ ಪೂಜಾ ವಸ್ತ್ರಾಕರ್, ಮಿನ್ನು ಮನಿ ಮತ್ತು ಶಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದರು. ಎರಡು ವಿಕೆಟ್ ಗಳು ರನೌಟ್ ರೂಪದಲ್ಲಿ ಬಂತು.
ಇದನ್ನೂ ಓದಿ:Uneducated ರಾಜಕೀಯ ನಾಯಕರು; ಶಿಕ್ಷಣದ ಬಗ್ಗೆ ಗಮನಸೆಳೆದಿದ್ದೇನೆ: ಕಾಜೋಲ್ ಸ್ಪಷ್ಟನೆ
ಸುಲಭ ಗುರಿ ಬೆನ್ನತ್ತಿದ ಭಾರತವು ಶೂನ್ಯಕ್ಕೆ ಶಫಾಲಿ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಜೆಮಿಮಾ ಕೂಡಾ 11 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ವಿಕೆಟ್ ಗೆ ನಾಯಕಿ ಹರ್ಮನ್ ಮತ್ತು ಉಪ ನಾಯಕಿ ಸ್ಮೃತಿ ಮಂಧನಾ 70 ರನ್ ಜೊತೆಯಾಟವಾಡಿದರು.
ಮಂಧನಾ 38 ರನ್ ಮಾಡಿ ಔಟಾದರೆ, ನಾಯಕಿ ಹರ್ಮನ್ ಅಜೇಯ 54 ರನ್ ಗಳಿಸಿದರು. ಹರ್ಮನ್ ಇನ್ನಿಂಗ್ಸ್ ನಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿತ್ತು. ಅರ್ಹವಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.