Advertisement

ಅಂತೂ ಕೊನೆಯಾಯಿತು ಚೀನಾ-ಭಾರತ ಮುನಿಸು

06:05 AM Aug 29, 2017 | |

ನವದೆಹಲಿ/ಬೀಜಿಂಗ್‌: ಭೂತಾನ್‌ಗೆ ಸೇರಿರುವ ಡೋಕ್ಲಾಂ ಗಡಿ ವಿವಾದ ಸಂಬಂಧಪಟ್ಟಂತೆ ಭಾರತ ಮತ್ತು ಚೀನಾದ ನಡುವಿನ ಮುಸುಕಿನ ಸಮರ ಅಂತ್ಯಗೊಂಡಿದೆ. ಗಡಿಯಿಂದ ಸೇನೆ ವಾಪಸ್‌ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.

Advertisement

ಇನ್ನೊಂದು ವಾರದಲ್ಲಿ ಚೀನಾದಲ್ಲೇ ಬ್ರಿಕ್ಸ್‌ ಶೃಂಗಸಭೆ ನಡೆಯುತ್ತಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನವೇ ಎರಡು ದೇಶಗಳ ನಡುವಿನ ವಿರಸವನ್ನು ಕೊನೆಗಾಣಿಸಲು ನಿರ್ಧರಿಸಲಾಗಿದೆ.
ಸೋಮವಾರ ಬೆಳಗ್ಗೆ ಹೇಳಿಕೆ ಹೊರಡಿಸಿದ ವಿದೇಶಾಂಗ ಸಚಿವಾಲಯ, ಎರಡೂ ದೇಶಗಳು ರಾಜತಾಂತ್ರಿಕ ಸಂಪರ್ಕವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುವ ಬಗ್ಗೆ ನಿರ್ಧರಿಸಿವೆ. ಭಾರತ ಮತ್ತು ಚೀನಾ ತಮ್ಮ ನಡುವಿನ ಭಾವನೆಗಳು, ಆತಂಕಗಳು ಮತ್ತು ಹಿತಾಸಕ್ತಿಗಳ ಕುರಿತಂತೆ ಚರ್ಚಿಸಿ ವಿವಾದ ಬಗೆಹರಿಸಿಕೊಳ್ಳಲು ತೀರ್ಮಾನಿಸಿವೆ ಎಂದಿದೆ.

ಈ ಬೆಳವಣಿಗೆಯ ಗಡಿಯಲ್ಲಿ ನಿಯೋಜಿತರಾಗಿದ್ದ 350 ಯೋಧರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸೇನಾ ಮೂಲಗಳು ಹೇಳಿವೆ. ಅಲ್ಲದೆ ವಿದೇಶಾಂಗ ಇಲಾಖೆ ಪ್ರಕಾರ ಚೀನಾ ಕೂಡ ಸೇನೆಯನ್ನು ವಾಪಸ್‌ ಪಡೆಯುತ್ತಿದೆ.

ಜೂನ್‌ 16 ರಂದು ಡೋಕ್ಲಾಂ ಗಡಿಯ ವಿವಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಹೊರಟಿದ್ದ ಚೀನಾ ಯೋಧರನ್ನು ಭಾರತದ ಯೋಧರು ಅಡ್ಡಗಟ್ಟಿದ್ದರು. ಆ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ತೀರಾ ಕೆಳಹಂತಕ್ಕೆ ಹೋಗಿ, ಇನ್ನೇನು ಯುದ್ಧ ನಡೆದೇ ಬಿಡುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿನ ಸರ್ಕಾರಿ ನಿಯಂತ್ರಣದಲ್ಲಿರುವ ಪತ್ರಿಕೆಗಳು ಭಾರತವನ್ನು ಹೀಯಾಳಿಸಿ ಬರೆದದ್ದು ಅಲ್ಲದೇ, 1962ರಲ್ಲಿನ ಸೋಲು ನೆನಪಿರಬೇಕಲ್ಲವೇ ಎಂದು ಕೆಣಕಿದ್ದವು. ಇದಕ್ಕೆ ಅಷ್ಟೇ ಪರಿಣಾಮಕಾರಿಯಾಗಿ ಉತ್ತರ ನೀಡಿದ್ದ ರಕ್ಷಣಾ ಸಚಿವ ಅರುಣ್‌ ಜೇಟಿÉ ಅವರು, ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ತುಂಬಾನೇ ವ್ಯತ್ಯಾಸವಿದೆ ಎಂದಿದ್ದರು. ಅಲ್ಲದೆ ಭಾರತ ಈಗ ಎಂಥ ಆತಂಕವನ್ನೂ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ತಿರುಗೇಟು ನೀಡಿದ್ದರು.

ಈ ಮಧ್ಯೆ, ಚೀನಾ ಕಡೆಯಿಂದ ಹೇಳಿಕೆ ಹೊರಬಿದ್ದಿದ್ದು, ಭಾರತವಷ್ಟೇ ಯೋಧರನ್ನು ವಾಪಸ್‌ ಕರೆಸಿಕೊಳ್ಳುತ್ತಿದೆ. ನಮ್ಮ ಯೋಧರು ಇನ್ನೂ ಅಲ್ಲೇ ಇದ್ದಾರೆ ಎಂದಿದೆ. ಅವರು ಸದ್ಯದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಚೀನಾ ದೇಶದ ಸಾರ್ವಭೌಮತ್ವ ರಕ್ಷಣೆ ಸಲುವಾಗಿ ಎಂಥದ್ದೇ ಕ್ರಮ ತೆಗೆದುಕೊಳ್ಳಲು ಸಿದ್ಧವಿದೆ ಎಂದಿದೆ. ಅಲ್ಲದೆ ಮುಂದಿನ ಬದಲಾವಣೆಗೆ ಹೊಂದಿಕೊಂಡು ಹೋಗಲೂ ಸಿದ್ಧವಿದೆ ಎಂದು ಹೇಳಿದೆ.

Advertisement

ಅಲ್ಲದೆ ಚೀನಾ ಈ ವಿಚಾರದಲ್ಲಿ ಯಾವುದೇ ರಾಜಿಯಾಗಿಲ್ಲ. ಭಾರತವೇ ಲಗುಬಗನೇ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಬಗ್ಗೆ ಮಾತನಾಡಿತು ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿದೆ.

ಜೂನ್‌ 16 ರಿಂದ ಇಲ್ಲಿವರೆಗೆ
ಜೂ. 16 – ಚೀನಾದಿಂದ ಡೋಕ್ಲಾಂ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ಶುರು
ಜೂ. 28 – ನಮ್ಮ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಹೊರಟ ಚೀನಾದ ಯೋಧರಿಗೆ ಭಾರತದಿಂದ ಅಡ್ಡಿಯಾಗಿದೆ ಎಂದ ಚೀನಾ
ಜು.5 – ಭೂತಾನ್‌ನಿಂದ ಹೇಳಿಕೆ ಬಿಡುಗಡೆ, ಡೋಕ್ಲಾಂನಲ್ಲಿ ಯಥಾಸ್ಥಿತಿ ಕಾಪಾಡಲು ಸೂಚನೆ
ಜು.6 – ಜಿ20 ಶೃಂಗದಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಜಿಂಗ್‌ಪಿಂಗ್‌ ಉದ್ದೇಶಿತ ಮಾತುಕತೆ ರದ್ದು
ಜು.11 – ಹಿಂದಿನ ವಿವಾದಗಳಂತೆಯೇ ಈ ವಿವಾದವೂ ಬಗೆಹರಿಯಲಿದೆ ಎಂದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್‌
ಜು.12 – ಹಿಂದಿನ ವಿವಾದಗಳೇ ಬೇರೆ, ಇದೇ ಬೇರೆ. ಮಾತುಕತೆ ಮೂಲಕ ವಿವಾದ ಬಗೆಹರಿಯುವುದು ಕಷ್ಟ ಸಾಧ್ಯವೆಂದ ಚೀನಾ ವಿದೇಶಾಂಗ ಸಚಿವಾಲಯ
ಜು. 15 – ಚೀನಾ-ಭಾರತದ ನಡುವಿನ ವಿವಾದದ ಬಗ್ಗೆ ಸತತ ಮೂರು ದಿನ ಪ್ರತಿಪಕ್ಷಗಳಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ
ಜು. 16 – ಟಿಬೆಟ್‌ನಲ್ಲಿ ಸಮರಭ್ಯಾಸ ನಡೆಸಿದ ಚೀನಾದ ಸೇನೆ. ಸಾವಿರಾರು ಕೆಜಿ ತೂಕದ ಶಸ್ತ್ರಾಸ್ತ್ರ, ಮದ್ದು ಗುಂಡು ರವಾನೆ
ಜು. 19 – ಚೀನಾ ಡೋಕ್ಲಾಂ ಗಡಿಯಲ್ಲಿ ಯಥಾಸ್ಥಿತಿ ಕಾಪಾಡಲು ಒಪ್ಪದಿದ್ದರೆ ನಮ್ಮ ಭದ್ರತೆಗೆ ಧಕ್ಕೆ ತರುತ್ತಿದೆ ಎಂದೇ ಅರ್ಥ ಎಂದು ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‌ ಹೇಳಿಕೆ
ಜು. 24 – ಚೀನಾ ಅಧ್ಯಕ್ಷರಿಂದ ಮಿಲಿಟರಿ ಪರೇಡ್‌ ಉದ್ದೇಶಿಸಿ ಭಾಷಣ – ಎಂಥಾ ಶತ್ರುಗಳನ್ನಾದರೂ ಎದುರಿಸಿ ಗೆಲ್ಲುವ ತಾಕತ್ತು ನಮ್ಮ ಸೇನೆಗೆ ಇದೆ ಎಂದ ಜಿನ್‌ಪಿಂಗ್‌
ಆ. 8 – ಡೋಕ್ಲಾಂನಿಂದ ಸೇನೆ ವಾಪಸಾತಿಗೆ ಚೀನಾ ನಕಾರ. ಉತ್ತರಾಖಂಡದ ಕಾಲಾಪಾನಿಗೆ ಪ್ರವೇಶಿಸಿದರೆ ನೀವು ಏನು ಮಾಡುತ್ತೀರಿ ಎಂಬ ಉದ್ಧಟತನದ ಪ್ರಶ್ನೆ
ಆ.10 – ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಂದ ಭೂತಾನ್‌ ವಿದೇಶಾಂಗ ಸಚಿವರ ಭೇಟಿ. ಭಾರತದಿಂದ ಗಡಿಗೆ ಮತ್ತಷ್ಟು ಯೋಧರ ರವಾನೆ
ಆ.15 – ಭಾರತ ಕೂಡ ಎಂಥದ್ದೇ ಬಾಹ್ಯ ಶಕ್ತಿಗಳಿರಲಿ, ಅವರನ್ನು ಎದುರಿಸಿ ಗೆಲ್ಲುವ ತಾಕತ್ತು ಭಾರತಕ್ಕೆ ಇದೆ ಎಂದು ಭಾಷಣ ಮಾಡಿದ ಪ್ರಧಾನಿ ಮೋದಿ. ಅಂದೇ ಜಮ್ಮು ಕಾಶ್ಮೀರ ನುಗ್ಗಲು ಯತ್ನಿಸಿದ ಚೀನಾದ ಇಬ್ಬರು ಯೋಧರನ್ನು ವಾಪಸ್‌ ಕಳುಹಿಸಿದ ಭಾರತದ ಸೇನೆ
ಆ. 16 – ಭಾರತ-ಚೀನಾ ಕುಳಿತು ಮಾತನಾಡಿ ವಿಷಯ ಬಗೆಹರಿಸಿಕೊಳ್ಳಲಿ ಎಂದ ಅಮೆರಿಕ. ಅಂದೇ ಭಾರತದ ಯೋಧರನ್ನು ಅಣಕಿಸಿದ ಸೇನೆ. ಕೀಳು ಅಭಿರುಚಿಯ ವಿಡಿಯೋ ಬಿಟ್ಟು ಭಾರತವನ್ನು ಸೆವೆನ್‌ ಸಿನ್ಸ್‌ ಎಂದು ಲೇವಡಿ
ಆ.17 – ಭಾರತಕ್ಕೆ ಬೆಂಬಲ ನೀಡುವ ಕುರಿತಂತೆ ಸುಳಿವು ನೀಡಿದ ಜಪಾನ್‌
ಆ.20 – ಚೀನಾದ ಪಶ್ಚಿಮ ಭಾಗದಲ್ಲಿ ಮತ್ತೂಮ್ಮೆ ಸೇನೆಯಿಂದ ಪಥಸಂಚಲನ. ಭಾರತವನ್ನು ಎದುರಿಸಲು ಈ ಸಿದ್ಧತೆ ಎಂದ ಅಲ್ಲಿನ ವಿದೇಶಾಂಗ ಕಾರ್ಯಾಲಯ
ಆ.28 – ಎರಡು ದೇಶಗಳ ಡೋಕ್ಲಾಂ ಗಡಿ ವಿವಾದ ಅಂತ್ಯ ಎಂದು ಹೇಳಿಕೆ ಹೊರಡಿಸಿದ ಭಾರತ – ಸೇನೆ ವಾಪಸ್‌ಗೆ ನಿರ್ಧಾರ.

ಚೀನಾ ಜತೆಗಿನ ಗಡಿ ವಿವಾದ ಅಂತ್ಯವಾಗಿದ್ದು ಸ್ವಾಗತಾರ್ಹ ಬೆಳವಣಿಗೆ. ಕೇಂದ್ರ ಸರ್ಕಾರ ಆ ದೇಶದ ಜತೆಗೆ ಉತ್ತಮ ಸಂಬಂಧ ಏರ್ಪಡಿಸಿಕೊಳ್ಳಲಿ ಎಂಬುದು ನಮ್ಮ ಆಶಯ. ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಸೆ.3 ರಿಂದ ಬ್ರಿಕ್ಸ್‌ ಶೃಂಗ
ಎರಡೂ ದೇಶಗಳ ನಡುವಿನ ಗಡಿ ವಿವಾದ ಇತ್ಯರ್ಥಕ್ಕೆ ಸದ್ಯದಲ್ಲೇ ಆರಂಭವಾಗಲಿರುವ ಬ್ರಿಕ್ಸ್‌ ಶೃಂಗಸಭೆಯೇ ಕಾರಣ ಎಂದು ಹೇಳಲಾಗುತ್ತಿದೆ. ಸೆ.3 ರಿಂದ 5ರ ವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಕ್ಲಿಜಿಂಗ್‌ಪಿಂಗ್‌, ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಬೀಜಿಂಗ್‌ನಲ್ಲೇ ಈ ಸಮಾವೇಶ ನಡೆಯಲಿದ್ದು, ಭಾರತ-ಚೀನಾ ನಡುವಿನ ಇರುಸು ಮುರುಸು ಮಾತುಕತೆಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ವಿವಾದ ಕೊನೆಗಾಣಿಸಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next