Advertisement

ಭಾರತ 2047 ನೀಲನಕ್ಷೆ: ಕೃಷಿ ಯೋಜನೆಗೆ ಸಿದ್ಧ

02:06 PM Jun 12, 2022 | Team Udayavani |

ಬೆಂಗಳೂರು: ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ಜಗತ್ತಿನ ಮೊದಲ ಮೂರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸುತ್ತಿರುವ “ಭಾರತ 2047′ ನೀಲನಕ್ಷೆಗೆ ಪೂರಕವಾಗಿ ರಾಜ್ಯ ಕೂಡ ಮುಂದಿನ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಕೃಷಿ ಯೋಜನೆಗೆ ಸಿದ್ಧತೆ ನಡೆಸಿದೆ.

Advertisement

ಇದಕ್ಕಾಗಿ ಭೂ ಆಧಾರಿತ ಚಟುವಟಿಕೆಗಳು ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನೂ ಒಂದೇ ಸೂರಿನಡಿ ತಂದು, ಮುಂದಿನ ಎರಡೂವರೆ ದಶಕಗಳಲ್ಲಿ ಕೃಷಿ ಹಾಗೂ ಪೂರಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ಯೋಜನೆಯ ನೀಲನಕ್ಷೆ ಸಿದ್ಧಪಡಿಸುವಲ್ಲಿ ನಿರತವಾಗಿದೆ. ರಾಜ್ಯದ ರೈತರ ಆದಾಯವನ್ನು ಮೂರರಿಂದ ನಾಲ್ಕುಪಟ್ಟು ಹೆಚ್ಚಿಸುವ ಗುರಿಯನ್ನೂ ಈ ಯೋಜನೆ ಒಳಗೊಂಡಿದೆ.

“ಭಾರತ 2047’ಗೆ ಪೂರಕವಾಗಿ ಆಯಾ ರಾಜ್ಯಗಳಿಂದ ಸಮಗ್ರ ಯೋಜನೆ ಸಿದ್ಧಪಡಿಸಿ ಕಳುಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಿಗೆ ಸೂಚಿಸಿದೆ. ಅದರಂತೆ ಕೃಷಿ ಇಲಾಖೆಗೂ ನಿರ್ದೇಶನ ನೀಡಲಾಗಿದ್ದು, ರಾಜ್ಯ ಕೃಷಿ ಯೋಜನೆ ಹಾಗೂ ಜಿಲ್ಲಾಮಟ್ಟದ ಕೃಷಿ ಯೋಜನೆ ಸಿದ್ಧತೆಯಲ್ಲಿ ಸರ್ಕಾರ ಸಕ್ರಿಯವಾಗಿದೆ. ಇದು ನೀರಾವರಿ, ಕೃಷಿ ಮಾರುಕಟ್ಟೆ, ಸಹಕಾರ, ಜಲಾನಯನ, ಅಗತ್ಯಬಿದ್ದರೆ ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳು ಒಂದೇ ವೇದಿಕೆಯಲ್ಲಿ ಬಂದು ಕೆಲಸ ಮಾಡಲಿವೆ. ನೀಲನಕ್ಷೆ ರೂಪಿಸುವ ಕಾರ್ಯ ಇನ್ನೂ ಆರಂಭಿಕ ಹಂತದಲ್ಲಿದ್ದು, 2-3 ಸಭೆಗಳೂ ನಡೆದಿವೆ. ಶೀಘ್ರ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.

ಮುಂದಿನ 25 ವರ್ಷಗಳಲ್ಲಿ ಕೃಷಿ ಪಾತ್ರ ಏನಾಗಿರಬೇಕು? ಜಾಗತಿಕ ಮಟ್ಟದಲ್ಲಿ ಸ್ವಾವಲಂಬನೆ ಜತೆಗೆ ಆಹಾರ ರಫ್ತು, ಪೌಷ್ಟಿಕ ಆಹಾರ, ಪಾಳುಬಿದ್ದ ಜಮೀನು ಎಷ್ಟು? ಅದರ ಫ‌ಲವತ್ತತೆ ಕೈಗೊಳ್ಳಬೇಕಾದ ಕ್ರಮಗಳು ಏನು? ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂಬ ಕೂಗು ಇದೆ. ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಏನು? ರಾಜ್ಯದ ವಿವಿಧ ಹವಾಮಾನ ವಲಯಗಳಿದ್ದು, ಒಂದೊಂದು ಕಡೆ ಕೃಷಿ ಚಟುವಟಿಕೆಗಳು ಭಿನ್ನವಾಗಿವೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ರಾಜ್ಯವೂ ಸೇರಿ ನೆರೆ ರಾಜ್ಯಗಳ ಕೃಷಿ ಸಂಬಂಧಿತ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕೃಷಿ ತಜ್ಞರು, ಪ್ರಗತಿಪರ ರೈತರು ಹೀಗೆ ವಿವಿಧ ವಲಯಗಳಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲಾಗುವುದು ಎಂದು ವಿವರಿಸಿದರು.

ಇದಲ್ಲದೆ, ನಗರೀಕರಣದ ಪರಿಣಾಮ ಕೃಷಿ ಭೂಮಿ ಪ್ರಮಾಣ ಕಡಿಮೆಯಾಗಿದೆ. 86 ಲಕ್ಷ ಕೃಷಿ ಕುಟುಂಬಗಳಿದ್ದು, ಸರಾಸರಿ 1.25 ಎಕರೆ ಕೃಷಿ ಭೂಮಿ ಇದೆ. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರ ಪ್ರಮಾಣ ರಾಜ್ಯದಲ್ಲಿ ಶೇ. 75ರಿಂದ 80ರಷ್ಟಿದ್ದರೂ, ಉತ್ಪಾದಕತೆ ಕೇವಲ ಶೇ.40ರಿಂದ 45ರಷ್ಟಿದೆ. ಮುಂದಿನ 25 ವರ್ಷಗಳಲ್ಲಿ ಈ ಭೂಮಿ ಇನ್ನೂ ಕಡಿಮೆಯಾಗಬಹುದು. ಆದ್ದರಿಂದ ತಂತ್ರಜ್ಞಾನ ಬಳಸಿ, ಉತ್ಪಾದಕತೆ ಹೆಚ್ಚಿಸಲು ಇರುವ ಅವಕಾಶಗಳ ಬಗ್ಗೆಯೂ ವರದಿ ಬೆಳಕು ಚೆಲ್ಲಲಿದೆ ಎಂದು ಮಾಹಿತಿ ನೀಡಿದರು.

Advertisement

ಇನ್ನೂ ಚರ್ಚೆ ಕೂಡ ಆಗಿಲ್ಲ!? ಈ ಮಧ್ಯೆ, ರಾಜ್ಯ ಕೃಷಿ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ನಿರ್ದೇಶಿಸಿ ಹಲವು ತಿಂಗಳು ಕಳೆದರೂ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಈ ಬಗ್ಗೆ ಇಲಾಖೆಯು ಇನ್ನೂ ಚರ್ಚೆ ಕೂಡ ನಡೆಸಿಲ್ಲ! ರಾಜ್ಯ ಮತ್ತು ಜಿಲ್ಲಾ ಕೃಷಿ ಯೋಜನೆಯನ್ನು ಸಲ್ಲಿಸದಿರುವ ಈಚೆಗೆ ಸ್ವತಃ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಶಿವಯೋಗಿ ಕಳಸದ ಅವರನ್ನು ಕೇಳಿದಾಗ, “ಸಿದ್ಧತೆಗಳು ನಡೆದಿದ್ದು, ಈಗಾಗಲೇ ಒಂದೆರಡು ಸಭೆಗಳು ಆಗಿವೆ. ವಾರದಲ್ಲಿ ಮತ್ತೂಂದು ಸುತ್ತಿನ ಸಭೆ ಕರೆಯಲಾಗಿದೆ. ಶೀಘ್ರ ಸಲ್ಲಿಸಲಾಗುವುದು’ ಎಂದರು. “ಯೋಜನಾ ವರದಿ ಸಲ್ಲಿಕೆಗೆ ಯಾವುದೇ ಗಡುವು ವಿಧಿಸಿಲ್ಲ. ಆದರೆ, ಆದಷ್ಟು ಬೇಗ ಸಲ್ಲಿಸುವಂತೆ ಸೂಚಿಸಲಾಗಿದೆ. ಇದುವರೆಗೆ ಯಾವುದೇ ರಾಜ್ಯಗಳಿಂದ ಯೋಜನಾ ವರದಿ ಸಲ್ಲಿಕೆಯಾಗಿಲ್ಲ. ಅಗತ್ಯಬಿದ್ದರೆ ಈ ಸಂಬಂಧ ಮತ್ತೂಮ್ಮೆ ಪತ್ರ ಬರೆಯಲಾಗುವುದು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಆಯೋಗ (ಎನ್‌ಆರ್‌ಎಎ)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅಶೋಕ ದಳವಾಯಿ ತಿಳಿಸುತ್ತಾರೆ.

-ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next