ನವಲಗುಂದ: ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದದಂತೆ ಪುರಸಭೆ ಅಧ್ಯಕ್ಷೆ ಅನಸೂಯಾ ಭೋವಿ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ಜರುಗಿದ್ದು, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಶಿರೇಖಾ ಈರಪ್ಪ ಶಿಡಗಂಟಿ ಅವಿರೋಧವಾಗಿ ಆಯ್ಕೆಯಾದರು.
ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಶಶಿರೇಖಾ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ನಂತರ ಶಶಿರೇಖಾ ಹೊರತು ಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಕೆ.ಬಿ. ಕೋರಿಶೆಟ್ಟರ ಘೋಷಿಸಿದರು.
ಪುರಸಭೆಯ ಒಟ್ಟು 23 ಸದಸ್ಯ ಬಲದಲ್ಲಿ 12 ಕಾಂಗ್ರೆಸ್, 7 ಬಿಜೆಪಿ, 3 ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಪಕ್ಷೇತರ ಅಭ್ಯರ್ಥಿ ಶಶಿರೇಖಾ ಶಿಡಗಂಟಿ ಅವರನ್ನು ಧ್ಯಕ್ಷರನ್ನಾಗಿ ಮಾಡುವ ಮೂಲಕ ಪಕ್ಷವು ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಈ ಹಿಂದೆ ಇದೇ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಶಿಡಗಂಟಿ ಅವರ ಸೊಸೆಯೇ ಇಂದು ಅಧ್ಯಕ್ಷೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಶಶಿರೇಖಾಗೆ ಹಿಂದಿನ ಅಧ್ಯಕ್ಷೆ ಅನಸೂಯಾ ಭೋವಿ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು. ಕಾಂಗ್ರೆಸ್‌ನ ವಿನೋದ ಅಸೂಟಿ, ಆರ್.ಎಚ್. ಕೋನರಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ತಾಪಂ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ, ವಿದ್ಯಾಧರ ಪಾಟೀಲ, ಉಸ್ಮಾನ್ ಬಬರ್ಚಿ, ನಿಂಗಪ್ಪ ಅಸುಂಡಿ, ಬಸವರಾಜ ಮುಧೋಳ, ಅರ್ಜುನ ಹಳೆಮನಿ, ರಾಜು ನಡುವಿನಮನಿ, ಶಿವಾನಂದ ಭೂಮಣ್ಣವರ,ಶೀವಾನಂದ ಪಾಚಂಗಿ, ಮಂಜು ಜಾಧವ್ ಮತ್ತಿತರರು ಸತ್ಕರಿಸಿದರು.