Advertisement

Govt ಅನಿರ್ದಿಷ್ಟಾವಧಿ ಮುಷ್ಕರ; ಅಧಿವೇಶನ ಸಂದರ್ಭ ಪ್ರತಿಭಟನೆ

12:11 AM Dec 06, 2023 | Team Udayavani |

ಕುಂದಾಪುರ: ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ರಾಜ್ಯದಲ್ಲಿ ಸಂಜೀವಿನಿ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಒಕ್ಕೂಟ ರಚಿಸಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂಬಿಕೆ, ಎಲ್‌ಸಿಆರ್‌ಪಿಗಳು ಡಿ. 1ರಿಂದ ರಾಜ್ಯಾದ್ಯಂತ ಕೆಲಸ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 6 ಸಾವಿರ ಎಂಬಿಕೆಗಳು, 12 ಸಾವಿರ ಎಲ್‌ಸಿಆರ್‌ಪಿಗಳು ಕೆಲಸ ನಿಲ್ಲಿಸಿದ ಕಾರಣ ಸ್ವಸಹಾಯ ಸಂಘಗಳಿಗೆ ಸಾಲ, ಕಂತು ಪಾವತಿ, ತರಬೇತಿ, ಉತ್ಪನ್ನಗಳ ಮಾರಾಟ ಸೇರಿ ದಂತೆ ಒಟ್ಟು ವ್ಯವಸ್ಥೆಯಲ್ಲಿ ಸಮಸ್ಯೆ ಯಾಗಿದೆ.

ಗ್ರಾಮೀಣ ಪ್ರದೇಶದ ಸ್ವ-ಸಹಾಯ ಗುಂಪುಗಳು ಮತ್ತು ಸದಸ್ಯರಿಗೆ ಸುಲಭವಾಗಿ ಜೀವನ ಪೋಷಣೆ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯುವಂತೆ ಮಾಡು ವ ಯೋಜನೆಯನ್ನು ಗ್ರಾಮಗಳಲ್ಲಿ ಅನುಷ್ಠಾನ ಮಾಡುವವರೇ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಎಲ್‌ಸಿಆರ್‌ಪಿ). ಇವರು ಸ್ತ್ರೀಶಕ್ತಿ, ಸಂಜೀವಿನಿ ಸೇರಿದಂತೆ ಸ್ವಸಹಾಯ ಸಂಘಗಳನ್ನು ರಚಿಸಿ ಅಗತ್ಯವಿದ್ದವರಿಗೆ ಬ್ಯಾಂಕ್‌ಗಳಿಂದ ಸಾಲದ ನೆರವು ಕೊಡಿಸಿ, ಬ್ಯಾಂಕ್‌ಗಳಿಗೆ ಮರುಪಾವತಿಗೆ ಸದಸ್ಯರಿಂದ ಕಂತು ಸಂಗ್ರಹಿಸುತ್ತಾರೆ. ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಅಥವಾ ನೇರ ಮಾರಾಟಕ್ಕೆ ನೆರವಾಗುತ್ತಾರೆ. ತರಬೇತಿ ಕೊಡಿಸುತ್ತಾರೆ.

40ಕ್ಕೂ ಹೆಚ್ಚು ಕೆಲಸ
ಉದ್ಯೋಗ ಖಾತರಿಯ ಸೌಲಭ್ಯ ಸದಸ್ಯರಿಗೆ ತಲುಪಿಸುವುದು, ಕಿರು ಆಹಾರ ಉದ್ಯಮ ಮಾಹಿತಿ ಪಡೆದು ಸಾಲ ಸೌಲಭ್ಯ ಒದಗಿಸುವುದು, ಉತ್ಪಾದಕ ಗುಂಪುಗಳ ರಚನೆ ಮತ್ತು ನಿರ್ವಹಣೆ, ಬ್ಯಾಂಕ್‌, ಪಶು ಹೀಗೆ ಬೇರೆ ಬೇರೆ ಸಖೀಗಳ ಮತ್ತು ಮಹಿಳಾ ಪ್ಲಂಬರ್‌ಗಳ ಆಯ್ಕೆ, ಉನ್ನತಿ ಯೋಜನೆಯ ಫಲಾನುಭವಿಗಳಿಗೆ ತರಬೇತಿ ಕೊಡಿಸುವುದು, ಹಳ್ಳಿ ಸಂತೆ ಆಯೋಜನೆ ಮಾಡುವುದು, ಘನತ್ಯಾಜ್ಯ ನಿರ್ವಹಣೆ ಜವಾಬ್ದಾರಿ, ಲಕ್‌ ಪತಿ ದೀದೀ, ಲೋಕೋಸ್‌ ಮೂಲಕ ಸದಸ್ಯರ ಸಂಪೂರ್ಣ ಮಾಹಿತಿ ಅಪ್ಲೋಡ್‌ ಮಾಡುವುದು, ಒಕ್ಕೂಟಗಳ ನೋಂದಣಿ ಮಾಡಿಸುವುದು, ಒಕ್ಕೂಟ ಸಭೆಗಳ ಆಯೋಜನೆ ಹೀಗೆ 40ಕ್ಕೂ ಅಧಿಕ ಕೆಲಸಗಳನ್ನು ಪ್ರತೀ ತಿಂಗಳು ನಿರ್ವಹಿಸುವ ಜವಾಬ್ದಾರಿ ಹೊಂದಿದ್ದಾರೆ.

ಬೇಡಿಕೆಗಳು
ಪ್ರಸ್ತುತ ಎಂಬಿಕೆಗೆ 5 ಸಾವಿರ ರೂ., ಎಲ್‌ಸಿಆರ್‌ಪಿಗೆ 2,500 ರೂ. ಮಾಸಿಕ ಗೌರವಧನ ಮಾತ್ರ ಇದ್ದು ಇತರ ಯಾವುದೇ ಭತ್ತೆ, ವೇತನ ಇರುವುದಿಲ್ಲ. ಒಂದು ದಿನಕ್ಕೆ 161 ರೂ. ನೀಡುತ್ತಿದ್ದಾರೆ. ನರೇಗಾ ಯೋಜನೆಯ ಕೂಲಿ ಕೂಡ 309 ರೂ. ಇದೆ. ಅರೆಕಾಲಿಕ ಕೆಲಸ ಮಾಡಲು ಅವಕಾಶ ಇಲ್ಲ. ಪಂಚಾಯತ್‌ ವ್ಯಾಪ್ತಿಯ 4ರಿಂದ 5 ಗ್ರಾಮಗಳ ಎಲ್ಲ ಸಂಘಗಳಿಗೆ ಭೇಟಿ ನೀಡಬೇಕಾಗುತ್ತದೆ. ಅದಕ್ಕಾಗಿಯೇ ನೂರಾರು ರೂ. ವ್ಯಯಿಸ ಬೇಕಾಗುತ್ತದೆ. ಎಂಬಿಕೆಗಳಿಗೆ 20 ಸಾವಿರ ರೂ., ಎಲ್‌ಸಿಆರ್‌ಪಿಗಳಿಗೆ 15 ಸಾವಿರ ರೂ.ಗೆ ಏರಿಕೆ, ಎಲ್ಲೆಡೆ ಏಕರೂಪದ ವೇತನ ಶ್ರೇಣಿ ನಿಗದಿಪಡಿಸುವುದು, ಸೇವಾ ಹಿರಿತನದ ಮೇಲೆ ವೇತನ ನಿಗದಿಪಡಿಸುವುದು, ಟಿಎ, ಡಿಎ ಸೌಲಭ್ಯ ಒದಗಿಸುವುದು, ಕಚೇರಿಗೆ ಕಂಪ್ಯೂಟರ್‌, ಪ್ರಿಂಟರ್‌ ಒದಗಣೆ ಮೊದಲಾದ ಬೇಡಿಕೆಗಳಿವೆ.

Advertisement

ಪ್ರತಿಭಟನೆ
ಡಿ. 14ರಂದು ಬೆಳಗಾವಿಯಲ್ಲಿ ಸುವರ್ಣ ಅಧಿವೇಶನ ಸಂದರ್ಭ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್‌ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದಿಂದ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಎಂಬಿಕೆ, ಎಲ್‌ಸಿಆರ್‌ಪಿಗಳು ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯಲಿದೆ.

ಗೌರವಧನ ಏರಿಕೆ ಸೇರಿದಂತೆ ನಮ್ಮ ಬೇಡಿಕೆ ಈಡೇರಿಕೆ ಕುರಿತು ಸರಕಾರದಿಂದ ಸ್ಪಷ್ಟ ಭರವಸೆ ಬೇಕು. ಅಲ್ಲಿವರೆಗಂತೂ ಕೆಲಸ ಮಾಡುವುದಿಲ್ಲ. ಅಧಿವೇಶನ ಸಂದರ್ಭ ನಡೆಸುವ ಪ್ರತಿಭಟನೆಯಲ್ಲಿ ದೊರೆಯುವ ಭರವಸೆ ಮೇಲೆ ಮುಂದಿನ ಹೋರಾಟದ ನಿರ್ಧಾರ ಮಾಡಲಿದ್ದೇವೆ.
– ರುದ್ರಮ್ಮ ಶಿವಮೊಗ್ಗ,
ರಾಜ್ಯಾಧ್ಯಕ್ಷೆ, ಎಂಬಿಕೆ ಎಲ್‌ಸಿಆರ್‌ಪಿಗಳ ಮಹಾ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next