Advertisement

ಗಡಿದಾಟಿದ ಬಾಂಧವ್ಯ

06:00 AM Oct 12, 2018 | |

ಕೆಲವು ದಿನಗಳ ಹಿಂದೆ ಯಶ್‌ ಅವರ “ಕೆಜಿಎಫ್’ ಚಿತ್ರದ ಟ್ರೇಲರ್‌ ರಿಲೀಸ್‌ ಡೇಟ್‌ ಅನ್ನು ತಮಿಳು ನಟ ವಿಶಾಲ್‌ ತಮ್ಮ ಟ್ವೀಟರ್‌ ಮೂಲಕ ಅನೌನ್ಸ್‌ ಮಾಡಿದ್ದರು. ಕಟ್‌ ಮಾಡಿದರೆ, ವಿಶಾಲ್‌ ಅವರ “ಸಂಡೆಕೋಳಿ 2′ ಚಿತ್ರಕ್ಕೆ ಯಶ್‌ ಶುಭಕೋರಿದರು. ಕೇವಲ ಯಶ್‌ ಅಷ್ಟೇ ಸುದೀಪ್‌ ಕೂಡಾ ವಿಶಾಲ್‌ಗೆ ಶುಭಕೋರಿದರು. ಚಿತ್ರದ ಮುಹೂರ್ತವೊಂದಕ್ಕೆ ಬಂದ ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್‌, ನೇರವಾಗಿ ದರ್ಶನ್‌ ಅವರ “ಒಡೆಯ’ ಸೆಟ್‌ಗೆ ಭೇಟಿಕೊಟ್ಟು, ಅವರನ್ನು ಭೇಟಿಯಾಗಿ ಹೋದರು. ಅಷ್ಟೇ ಯಾಕೆ, ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಅನೇಕ ಪರಭಾಷೆ ನಟರು ಶುಭಕೋರಿದ್ದರು. 

Advertisement

ಇದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಪರಭಾಷೆಯ ನಟರ, ಕಲಾವಿದರ ಜೊತೆ ಹೆಚ್ಚುತ್ತಿರುವ ಬಾಂಧವ್ಯ. ಈ ಮೂಲಕ ಕನ್ನಡ ನಟ-ನಟಿಯರು ಕೂಡ ಗಡಿಯಾಚೆಯೂ ಸದ್ದು ಮಾಡುತ್ತಿರುವುದು. ಕನ್ನಡ ಚಿತ್ರರಂಗ ಬೆಳೆಯುತ್ತಿರುವ, ಗಡಿಯಾಚೆ ವಿಸ್ತಾರಗೊಳ್ಳುತ್ತಿರುವ ಈ ಸಂದರ್ಭಗಳಲ್ಲಿ ಪರಭಾಷಾ ಕಲಾವಿದರ ಜೊತೆಗಿನ ಬಾಂಧವ್ಯ ಕೂಡಾ ತುಂಬಾ ಮುಖ್ಯವಾಗುತ್ತದೆ. ಈ ತರಹದ ಬಾಂಧವ್ಯ ಕನ್ನಡ ಚಿತ್ರರಂಗದ ಮಾರುಕಟ್ಟೆ ದೃಷ್ಟಿಯಿಂದಲೂ ಪ್ಲಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೇಲ್ನೋಟಕ್ಕೆ ಇದು ಆಯಾ ನಟ-ನಟಿಯರ ಅಥವಾ ಯಾವುದೋ ಒಂದು ತಂಡದ ವೈಯಕ್ತಿಕ ಸಂಬಂಧದಂತೆ ಕಂಡರೂ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಇದರಿಂದ ಲಾಭವಾಗುವುದರಲ್ಲಿ ಎರಡು ಮಾತಿಲ್ಲ. ಹಿಂದೆ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ರಂತಹ ನಟರಿಗೆ ಪರಭಾಷೆ ನಟರ ಜೊತೆಗೆ ಆತ್ಮೀಯ ಒಡನಾಟವಿತ್ತು. ಆ ನಂತರದ ದಿನಗಳಲ್ಲಿ ಈ ತರಹದ ಆತ್ಮೀಯತೆ ಕೊಂಚ ಕಡಿಮೆಯಾಗಿದ್ದು ಸುಳ್ಳಲ್ಲ. ಆದರೆ, ಈಗ ಮತ್ತೆ ಯುವ ನಟರ, ಸ್ಟಾರ್‌ ನಟರ ಮೂಲಕ ಆ ತರಹದ ಒಂದು ಆತ್ಮೀಯತೆ ಕಾಣುತ್ತಿದೆ. ನಾವಾಯಿತು, ನಮ್ಮ ಪರಿಸರವಾಯಿತು ಎಂದು ಕೂರದೇ ಹೊಸ ಹೊಸ ಪ್ರಯೋಗಕ್ಕೆ, ಪ್ರಯತ್ನಕ್ಕೆ ಕೈ ಹಾಕುತ್ತಾ ಹೋದಂತೆ, ಈ ತರಹದ ಆತ್ಮೀಯತೆ ಬೆಳೆಯುತ್ತಾ ಹೋಗುತ್ತದೆ ಮತ್ತು ವೈಯಕ್ತಿಕವಾಗಿ ಆ ಕಲಾವಿದ ಕೂಡಾ ಬೆಳೆಯುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯ ಆ ತರಹದ ಒಂದು ಅವಕಾಶ ಕನ್ನಡದ ಅನೇಕ ನಟ-ನಟಿಯರಿಗೆ ಸಿಕ್ಕಿದೆ. ಇವತ್ತು ಗಡಿದಾಟಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಎಲ್ಲಾ ಭಾಷೆಗಳಲ್ಲೂ ಸಾಕಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ. ಇನ್ನೂ ಅನೇಕ ನಟರು ತಮ್ಮ ಪ್ರಯತ್ನಗಳ ಮೂಲಕ ತಮ್ಮ ಛಾಪನ್ನು ಮಾಡಿಸುತ್ತಿದ್ದಾರೆ. 

ಕನ್ನಡದಲ್ಲಿ ಈಗ ಮಲ್ಟಿಲಾಂಗ್ವೇಜ್‌ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸ್ಟಾರ್‌ಗಳು ಈ ತರಹದ ಒಂದು ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಪರಭಾಷೆಗೂ ನಮ್ಮ ಕನ್ನಡದ ಶೈಲಿಯನ್ನು ಮುಟ್ಟಿಸುವ ಕೆಲಸ ಕನ್ನಡದಲ್ಲಿ ಈಗ ಹೆಚ್ಚು ನಡೆಯುತ್ತಿವೆ. “ದಿ ವಿಲನ್‌’, “ಕೆಜಿಎಫ್’, “ಐ ಲವ್‌ ಯೂ’, “ಉದ್ಗರ್ಷ’ ಸೇರಿದಂತೆ ಅನೇಕ ಸಿನಿಮಾಗಳು ಕನ್ನಡವಷ್ಟೇ ಅಲ್ಲದೇ ತೆಲುಗು, ತಮಿಳಿನಲ್ಲೂ ಸೇರಿದಂತೆ ಇತರ ಭಾಷೆಗಳಲ್ಲೂ ತಯಾರಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಸ್ಟಾರ್‌ ನಟರ ಪರಭಾಷಾ ಸಂಬಂಧಗಳು ಕೂಡಾ ಬೆಳೆಯುತ್ತಿವೆ. ಒಂದು ಸಮಯದಲ್ಲಿ ಕೇವಲ ಪರಭಾಷೆಯಿಂದ ಕಲಾವಿದರನ್ನು ಕರೆತರುವುದಕ್ಕಷ್ಟೇ ಸೀಮಿತವಾಗಿದ್ದ ಬಾಂಧವ್ಯ ಈಗ ಅದರಾಚೆಗೂ ವಿಸ್ತರಿಸಿರುವುದು, ಪರಸ್ಪರ ಗೌರವ ಸೂಚಕವಾಗಿ ನಡೆದುಕೊಳ್ಳುತ್ತಿರುವುದು ಖುಷಿಯ ವಿಚಾರವೇ ಸರಿ. ಇಂತಹ ಪ್ರಯತ್ನಗಳು ಹೆಚ್ಚೆಚ್ಚು ಆದರೆ, ಕನ್ನಡ ಸಿನಿಮಾಗಳು ನಿಧಾನವಾಗಿ ಪರಭಾಷೆಯಲ್ಲೂ ತಮ್ಮ ಅಸ್ತಿತ್ವ ಕಾಯ್ದುಕೊಳ್ಳಬಹುದು. 

ನಟ ಯಶ್‌ ಅವರು ಹೇಳುವಂತೆ, ಈ ತರಹದ ಸಂಬಂಧ, ಬಾಂಧವ್ಯ ಇನ್ನಷ್ಟು ಹೆಚ್ಚಬೇಕು. “ಪ್ರತಿಯೊಬ್ಬ ನಟರು ಈ ತರಹದ ಬಾಂಧವ್ಯ ಬೆಳೆಸಿಕೊಳ್ಳಬೇಕು. ಹಾಗಂತ ಇದು ತೋರಿಕೆಗೆ ಮಾಡುವ ಕೆಲಸವಲ್ಲ. ನಮ್ಮ ಗಡಿ ಇಷ್ಟೇ ಎಂದು ಕೂತರೆ ನಾವು ಹಾಗೇ ಇರುತ್ತೇವೆ. ಆ ಗಡಿ ದಾಟಿ ನಾವು ಸಾಗಬೇಕು. ಈ ತರಹದ ಬದಲಾವಣೆ ಯಂಗ್‌ಸ್ಟಾರ್ನಿಂದ ಆಗಬೇಕು. ಪರಸ್ಪರ ಗೌರವದಿಂದ ನಡೆದುಕೊಂಡು ಸಾಗಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ಆದರೆ, ಈ ತರಹದ ಬಾಂಧವ್ಯದಲ್ಲಿ ರಾಜಕೀಯ ಬಂದರೆ ಕಷ್ಟ’ ಎನ್ನುವ ಯಶ್‌, ವಿಶಾಲ್‌ನನ್ನ ಕ್ಲೋಸ್‌ಫ್ರೆಂಡ್‌ ಎನ್ನಲು ಮರೆಯುವುದಿಲ್ಲ. “ವಿಶಾಲ್‌, ನಾನು ಒಳ್ಳೆಯ ಸ್ನೇಹಿತರು. ನಮ್ಮ ಸ್ನೇಹ ಹಲವು ವರ್ಷಗಳದು. ಆತ ಬೆಂಗಳೂರಿಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಾನೆ, ನಾನು ಚೆನ್ನೈಗೆ ಹೋದರೆ ಅವನನ್ನು ಭೇಟಿ ಮಾಡುತ್ತೇವೆ. ನಾನು, ವಿಶಾಲ್‌, ಆರ್ಯ ಒಳ್ಳೆಯ ಫ್ರೆಂಡ್ಸ್‌. ಇಲ್ಲಿನ ಚಿತ್ರರಂಗಕ್ಕೆ ಆತನ ಕಡೆಯಿಂದ ಏನು ಸಹಾಯಬೇಕೋ ಅದನ್ನು ಮಾಡಲು ಆತ ಮುಂದಾಗಿದ್ದಾನೆ. ಕಳೆದ ಬಾರಿ ನಾನು ಚೆನ್ನೈಗೆ ಹೋಗಿದ್ದಾಗಲೂ ಅಲ್ಲಿನ ಅನೇ ಕರು ಬಂದು ಮಾತನಾಡಿಸಿ ಆತ್ಮೀಯತೆ ತೋರಿದರು’ ಎಂದು ತಮ್ಮ ಹಾಗೂ ವಿಶಾಲ್‌ ಸ್ನೇಹದ ಬಗ್ಗೆ ಹೇಳುತ್ತಾರೆ ಯಶ್‌. 

ಯಶ್‌ ಮಾತಿನಲ್ಲೂ ಅರ್ಥವಿದೆ. ಈ ತರಹದ ಸಂಬಂಧದಿಂದ ಅನಾವಶ್ಯಕ, ವೈಮನಸ್ಸುಗಳು, ಜಿದ್ದಾಜಿದ್ದಿಗಳು ದೂರವಾಗುತ್ತವೆ. ಭಾಷೆಗಳನ್ನು ಗೌರವದಿಂದ ಕಾಣುವ, ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ, ಸಹಕಾರದಿಂದ ಸಾಗುವ ಮನೋಭಾವ ಬೆಳೆಯುತ್ತದೆ. ಸಿನಿಮಾಗಳು ಕೂಡಾ ಇವತ್ತು ಭಾಷೆಯ ಬೇಲಿ ದಾಟಿವೆ. ಕನ್ನಡ, ತೆಲುಗು, ತಮಿಳು, ಹಿಂದಿ … ಎನ್ನುವ ಕಾಲ ಬದಲಾಗುತ್ತಿದೆ. ಈಗೇನಿದ್ದರೂ ಭಾರತೀಯ ಚಿತ್ರ ಎಂದು ಗುರುತಿಸಿಕೊಳ್ಳಲಾರಂಭಿಸುತ್ತಿರುವ ಈ ಸಂದರ್ಭದಲ್ಲಿ ಕಲಾವಿದರ ನಡುವಿನ ಪರಸ್ಪರ ಬಾಂಧವ್ಯ ಕೂಡಾ ಮುಖ್ಯವಾಗುತ್ತದೆ.  

Advertisement

ರವಿ ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next