ಜಮಖಂಡಿ: ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಹಾರ ತಜ್ಞ ಡಾ|ಖಾದರ ಹೇಳಿದರು. ಸತ್ಯಕಾಮ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮ್ಮನೆ ಸಭಾಭವನದಲ್ಲಿ ರವಿವಾರ ನಡೆದ ಕೃಷಿಮೇಳ ಹಾಗೂ ಸತ್ಯಕಾಮ ಜನ್ಮಸ್ಮರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
1ಕೆಜಿ ಸಕ್ಕರೆ ಉತ್ಪಾದಿಸಲು 28 ಸಾವಿರ ಲೀಟರ್ ನೀರು ಬೇಕು. ಹೀಗಾಗಿ ರೈತ ಬೇರೆ ಬೆಳೆ ಬೆಳೆಯಬೇಕೆಂದು ಹೇಳಲು ಸರ್ಕಾರದ ಕೃಷಿ ಇಲಾಖೆ ಸಿದ್ಧವಿಲ್ಲ ಅವರೆಲ್ಲ ವಿದೇಶಿ ಕಂಪನಿಗಳ ಕಪಿಮುಷ್ಠಿಯಲ್ಲಿದ್ದಾರೆ ಎಂದರು. ವಿದೇಶಿ ಕಂಪನಿಗಳ ರಾಸಾಯನಿಕ ಗೊಬ್ಬರಗಳ ಪ್ರಭಾವದಿಂದ ರೈತ ಸದ್ಯ ಸಂಪೂರ್ಣ ತನ್ನ ಭೂಮಿ ಸತ್ವ ಕಳೆದುಕೊಳ್ಳುತ್ತಿದ್ದಾನೆ. ಹೆಚ್ಚಿನ ಪ್ರಮಾಣದ ನೀರು, ರಸಗೊಬ್ಬರ ಬಳಕೆಯಿಂದ ಭೂಮಿ ಸವಳು ಜವುಳು ಆಗುತ್ತಿದೆ. ಆಧುನಿಕ ಕೃಷಿ ಪದ್ಧತಿಯಿಂದ ರೈತ ಹಾಳಾಗುತ್ತಿದ್ದಾನೆ ಎಂದರು. ನಾವಿಂದು ಶೇ.12.5 ನಾರಿನಾಂಶವಿರುವ ದವಸ ಧಾನ್ಯ ಸೇವಿಸಬೇಕು. ಆಗ ಮಾತ್ರ ನಿರೋಗಿಗಳಾಗಿರಲು ಸಾಧ್ಯ ಎಂದರಲ್ಲದೇ ಸಾವಯುವ ಪದಾರ್ಥ ಸೇವನೆ ಹೆಚ್ಚಿಸಿಕೊಳ್ಳಬೇಕು ಎಂದರು.
ಸಹಜ-ಸ್ವಾಭಾವಿಕವಾಗಿ ಸಿಗುವ ಪದಾರ್ಥ ಸ್ವೀಕರಿಸಿ ಆರೋಗ್ಯ ಉತ್ತಮಗೊಳಿಸಿಕೊಳ್ಳಬೇಕು. ಪ್ರತಿ ದಿನ ಒಂದೂವರೆ ಗಂಟೆ ವಾಯುವಿಹಾರ ನಡೆಸಿದರೆ ದೇಹಕ್ಕೆ ಶೇ.12 ಗುಕ್ಲೋಜ್ ಸಿಗುತ್ತದೆ ಎಂದರು. ದೊಡ್ಡಬಳ್ಳಾಪುರದ ಸಾವಯವ ಕೃಷಿಕ, ನಾಡೋಜ ಪುರಸ್ಕೃತ ಎಲ್.ನಾರಾಯಣ ರೆಡ್ಡಿ ಮಾತನಾಡಿ, ಸಕ್ಕರೆ ಮಾಲೀಕರು ಕಬ್ಬು ನುರಿಸಿ ಸಾರಾಯಿ ಉತ್ಪಾದಿಸಲು ಆದ್ಯತೆ ನೀಡುತ್ತಾರೆ. ವಿನಃ ಸಕ್ಕರೆ ತಯಾರಿಕೆಗಲ್ಲ. ಹೀಗಾಗಿ ಕಾರ್ಖಾನೆಗಳು ರೈತರ ರಕ್ತ ಹೀರುತ್ತಿದ್ದಾರೆ. ರೈತ ನೀರಿನ ಬವಣೆ ನೀಗಿಸಲು ಯೋಗ್ಯ ಬೆಳೆ ಬೆಳೆಯಬೇಕು. ಬೇವಿನ ಬೀಜ ಕೀಟನಾಶಕ ಬಗ್ಗೆ ಸರ್ಕಾರ ರೈತರಿಗೆ ಹೆಚ್ಚಿನ ತರಬೇತಿ ನೀಡುವ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದರು. ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಪೂರ್ಣಗೊಂಡ ಕಲ್ಲಳ್ಳಿ ಕೆರೆ, ವೆಂಕಟೇಶ್ವರ ಏತ ನೀರಾವರಿ ಯೋಜನೆಯಡಿ ಕಾಲುವೆ ಮೂಲಕ ಭರ್ತಿ ಮಾಡುವ ಕಾರ್ಯ ಶೀಘ್ರದಲ್ಲೇ ಪ್ರಾರಂಭಿಸಿ, ಕೆರೆಗೆ ನಿರಂತರ ನೀರು ಸಂಗ್ರಹಿಸಿ, ಸತ್ಯಕಾಮರು ಕಂಡ ಕನಸನ್ನು ನನಸಾಗಿ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ಎಲ್. ಶಂಕರ ಅಧ್ಯಕ್ಷತೆ ವಹಿಸಿದ್ದರು. ಶೇಷಗಿರಿ, ಕೃಷಿ ಇಲಾಖೆ ಅಧಿಕಾರಿ ಕೆ.ಎಸ್. ಅಗಸಿನಾಳ, ಬಿ.ಜಿ. ಮಾಳೇದ, ರಮಣಶ್ರೀ ಸಮೂಹ ಸಂಸ್ಥೆ ಎಸ್.ಷಡಕ್ಷರಿ, ಆಳ್ವಾಸ ಶಿಕ್ಷಣ ಸಂಸ್ಥೆಯ ಡಾ|ಮೋಹನ ಆಳ್ವಾ, ಚಿತ್ರನಟಿ ವಿನಯಪ್ರಸಾದ, ನಟ ಪ್ರೇಮ್ ಸಹಿತ ಹಲವರು ಇದ್ದರು. ಕವಿತಾ ಉಡುಪಿ ಪ್ರಾರ್ಥಿಸಿದರು. ಹುಲ್ಯಾಳದ ಹಂಸಧ್ವನಿ ಕಲಾತಂಡ ರೈತ ಗೀತೆ ಹಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ವೀಣಾ ಬನ್ನಂಜೆ ನಿರೂಪಿಸಿದರು.