ಹುಬ್ಬಳ್ಳಿ: ಮಹಾಪೌರ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಮುಂದುವರಿದಿದೆ. ಶುಕ್ರವಾರ ಸಂಜೆ ಪಕ್ಷದ ನಾಯಕರು ಪಾಲಿಕೆ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಹಾಪೌರ ಗೌನ್ ಧರಿಸಲು ಡಿ.ಕೆ.ಚವ್ಹಾಣ, ರಾಮಣ್ಣ ಬಡಿಗೇರ ನಡುವೆ ತೀವ್ರ ಪೈಪೋಟಿ ನಡೆದಿದೆ ಎನ್ನಲಾಗಿದ್ದು, ಇವರಿಬ್ಬರಲ್ಲಿ ಒಬ್ಬರು ಅಥವಾ ಇಬ್ಬರು ಹೊರತಾಗಿ ಇತರೆ ಆಕ್ಷಾಂಕ್ಷಿಗಳ್ಳೋ ಎಂಬುದು ಶನಿವಾರ ಬೆಳಿಗ್ಗೆಯಷ್ಟೇ ಗೊತ್ತಾಗಲಿದೆ.
ಮಹಾಪೌರ ಸ್ಥಾನಕ್ಕೆ ಈ ಬಾರಿ ಆರೇಳು ಜನ ಆಕ್ಷಾಂಕ್ಷಿಯಾಗಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪೈಪೋಟಿ ಹಾಗೂ ಒತ್ತಡ ಹೆಚ್ಚಿರುವುದಕ್ಕೆ ನಾಯಕರಿಗೂ ನಿರ್ಧಾರ ಕೈಗೊಳ್ಳಲು ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕರಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಅವರು ಶುಕ್ರವಾರ ಸಂಜೆ ವೇಳೆ ನಡೆಸಿದ ಸಭೆಯಲ್ಲಿ ಪಕ್ಷದ ಪಾಲಿಕೆ ಸದಸ್ಯರಿಂದ ಮಹಾಪೌರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಮಾಹಿತಿ ಪಡೆದಿದ್ದಾರೆ.
ಪಕ್ಷದ ಪ್ರಮುಖ ಪದಾಧಿಕಾರಿಗಳು, ಮುಖಂಡರಿಂದಲೂ ಸಲಹೆ ಪಡೆದುಕೊಂಡಿದ್ದು, ಯಾವುದೇತೀರ್ಮಾನ ಪ್ರಕಟಿಸಿಲ್ಲವಾಗಿದೆ. ಈ ಬಾರಿ ಮಹಾಪೌರ ಸ್ಥಾನವನ್ನು ತಮ್ಮದೇ ಸಮಾಜಕ್ಕೆ ನೀಡಬೇಕೆಂದು ಅನೇಕ ಸಮಾಜದವರು ನಾಯಕರ ಮೇಲೆ ಒತ್ತಡ ತಂದಿರುವುದು ಸಹಜವಾಗಿಯೇ ನಾಯಕರಿಗೆ ತಲೆಬಿಸಿ ಮಾಡುವಂತೆಮಾಡಿದೆ.
ಸರಳವಾಗಬೇಕಿದ್ದ ಆಯ್ಕೆ ಒಂದಿಷ್ಟು ಜಟಿಲತೆ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಮಹಾಪೌರ ಸ್ಥಾನ ನೀಡಬೇಕು ಎಂಬ ಒತ್ತಡವೂ ಹೆಚ್ಚಿದೆ.ಬಿಜೆಪಿ ಸಂಸ್ಕೃತಿಗೆ ಒಂದಿಷ್ಟು ವಿರುದ್ಧ ಎನ್ನುವಂತೆ ಒಂದಿಬ್ಬರು ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸಿ ನಾನೇ ಮಹಾಪೌರ ಎಂಬಂತೆ ಹೇಳಿಕೊಂಡಿದ್ದು, ಇದಕ್ಕೆ ಪಕ್ಷದ ನಾಯಕರ ಬೆಂಬಲ ತಮಗಿದೆ.
ಮಹಾಪೌರ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿರುವುದು, ಒಂದಿಷ್ಟು ಜನರನ್ನು ಮೆರವಣಿಗೆ ಮೂಲಕ ಕರೆದೊಯ್ದು ನಾಯಕರಿಗೆ ಮನವಿ ಸಲ್ಲಿಸಿರುವುದು ಬಿಜೆಪಿ ನಾಯಕರಿಗೆ ಮುಜುಗರ ತರಿಸುವಂತಾಗಿದೆ ಎಂದು ಹೇಳಲಾಗಿದೆಯಲ್ಲದೆ ಒತ್ತಡವೂ ಹೆಚ್ಚುವಂತೆ ಮಾಡಿದೆಎನ್ನಲಾಗಿದೆ.
ಕೋರ್ ಕಮಿಟಿ ಸಭೆಯಲ್ಲಿ ಅಂತಿಮ: ಶನಿವಾರ ಬೆಳಿಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಮಹಾಪೌರ ಸ್ಥಾನಕ್ಕೆ ಯಾರು ಎಂಬುದನ್ನು ಅಂತಿಮಗೊಳಿಸಿ ಅವರನ್ನು ನಾಮಪತ್ರ ಸಲ್ಲಿಕೆಗೆ ಕಳಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಮಹಾಪೌರ ಗೌನ್ ಧರಿಸುವವರು ಯಾರು ಎಂಬ ಕುತೂಹಲವಂತೂ ಹೆಚ್ಚಿದ್ದು, ಆಕಾಂಕ್ಷಿಗಳ ಎದೆಬಡಿತ ಹೆಚ್ಚುವಂತೆ ಮಾಡಿದೆ. ನಿರೀಕ್ಷೆಯಂತೆ ತೀವ್ರ ಪೈಪೋಟಿಯಲ್ಲಿದ್ದವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೋ, ಇತರೆ ಆಕಾಂಕ್ಷಿಗಳ್ಳೋ ಅಥವಾ ಅಚ್ಚರಿಯ ಆಯ್ಕೆಗೆ ಮುಂದಾಗುತ್ತಾರೋ ಎಂಬುದಕ್ಕೆ ಕೋರ್ ಕಮಿಟಿ ಸಭೆ ನಿರ್ಧಾರ ಪ್ರಕಟಿಸಲಿದೆ.