Advertisement

ಪುಂಡರೇ ನಷ್ಟ ತುಂಬಲಿ; ಗಲಭೆಕೋರರಿಂದಲೇ ದಂಡ ವಸೂಲಿಗೆ ಹೆಚ್ಚಿದ ಒತ್ತಡ

08:21 AM Apr 21, 2022 | Team Udayavani |

ಬೆಂಗಳೂರು: ಕೋಮು ಸಹಿತ ಎಲ್ಲ ಗಲಭೆ ಸಂದರ್ಭಗಳಲ್ಲಿ ಸಾರ್ವಜನಿಕ ಮತ್ತು ಸರಕಾರದ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ಅದರ ನಷ್ಟ ವಸೂಲಿಯನ್ನು ಗಲಭೆಕೋರರಿಂದಲೇ ಮಾಡುವ ಪ್ರಕ್ರಿಯೆ ಚುರುಕಾಗಬೇಕು ಎಂಬ ಆಗ್ರಹ ರಾಜ್ಯದಲ್ಲಿ ತೀವ್ರವಾಗತೊಡಗಿದೆ.

Advertisement

ಹುಬ್ಬಳ್ಳಿ ಗಲಭೆ ಬೆನ್ನಲ್ಲೇ ಈ ಬೇಡಿಕೆ ಹೆಚ್ಚಿದೆ. ಸಾರ್ವಜನಿಕ ಹಾಗೂ ಸರಕಾರದ ಆಸ್ತಿಗೆ ನಷ್ಟ ವುಂಟಾದರೆ ಗಲಭೆಕೋರರು ಮತ್ತು ಪ್ರತಿ ಭಟನಕಾರರಿಗೆ ದಂಡ ವಿಧಿಸಬೇಕು. ಇದಕ್ಕೆ ಪೂರಕವಾಗಿ ಚಾಲ್ತಿಯಲ್ಲಿರುವ ಕಾನೂನನ್ನು ಮತ್ತಷ್ಟು ಕಠಿನಗೊಳಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಈ ಕಾನೂನಿನಡಿ ರಚನೆಯಾದ ಕ್ಲೇಮ್‌ ಕಮಿಷನ್‌ಗಳು ರಾಜ್ಯದ ವಿವಿಧ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

ಈ ನಡುವೆ, ವಿಶ್ವ ಹಿಂದೂ ಪರಿಷತ್‌ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಗಲಭೆ ಯಿಂದಾಗುವ ಆಸ್ತಿ ನಷ್ಟವನ್ನು ಗಲಭೆಕೋರ ರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಮಾದರಿಯಲ್ಲಿ ಕಠಿನ ಕಾನೂನನ್ನು ಜಾರಿಗೆ ತರಬೇಕು ಎಂದು ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಆಗ್ರಹಿಸಿದ್ದಾರೆ.

ಇತ್ತೀಚೆಗಿನ ಕೆಲವು ಕೋಮು ಗಲಭೆಗಳಲ್ಲಿ ಒಂದು ನಿರ್ದಿಷ್ಟ ಕೋಮಿನವರು ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಸರಕಾರದ ಆಸ್ತಿಗಳಿಗೆ ಅಪಾರ ಹಾನಿಯನ್ನುಂಟು ಮಾಡಿದ್ದಾರೆ. ಠಾಣೆಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಪೊಲೀಸರ ಮೇಲೆ ಕಲ್ಲುತೂರಿದ್ದರು. ಬಸ್‌ಗಳಿಗೆ ಕಿಚ್ಚಿಟ್ಟು, ಸಾರ್ವ ಜನಿಕರ ವಾಹನಗಳಿಗೂ ಹಾನಿ ಮಾಡಿದ್ದರು. ಸರಕಾರವು ಈ ನಿಟ್ಟಿನಲ್ಲಿ ಕಠಿನ ಕ್ರಮಗಳನ್ನು ಕೈಗೊಳ್ಳಲು ವಿಳಂಬಿಸುತ್ತಿದೆ. ಆದರೆ ಜಾಗೃತ ಹಿಂದೂ ಸಮಾಜ ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ. ಹಿಂದೂ ಸಮಾಜಕ್ಕೆ ಆಗುತ್ತಿರುವ ಅಪಮಾನ, ನೋವು, ಸಾವುಗಳಿಗೆ ಪ್ರತೀಕಾರ ತೀರಿಸಲು ಹಿಂದೂ ಸಮಾಜ ಸಿದ್ಧವಾಗುವ ಮುನ್ನವೇ ಹಿಂದುತ್ವನಿಷ್ಠ ತಮ್ಮ ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗುವಂತೆ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಕೋರಿದ್ದಾರೆ.

ಇದನ್ನೂ ಓದಿ:ತೋಕೂರು : 800 ವರ್ಷಗಳ ಇತಿಹಾಸವಿರುವ ದೇವಳದ ಗರ್ಭ ಗುಡಿಯಲ್ಲಿ ಚಿನ್ನದ ಜೋಡಿ ಮಯೂರ ಪತ್ತೆ

Advertisement

ಸುಪ್ರೀಂ ಕೋರ್ಟ್‌ ತಡೆಯಾಜ್ಞೆ
ಹಿಂಸಾಚಾರಕ್ಕೆ ಒಳಗಾಗಿದ್ದ ‌ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಉತ್ತರ ದಿಲ್ಲಿ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಎನ್‌ಡಿಎಂಸಿಯು ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದೆ ಎಂಬ ಬಗ್ಗೆ ಮುಖ್ಯ ನ್ಯಾ| ಎನ್‌.ವಿ.ರಮಣ, ನ್ಯಾ| ಕೃಷ್ಣ ಮುರಾರಿ, ನ್ಯಾ| ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದ್ದು, ಕೂಡಲೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪಾಲಿಕೆಗೆ ಆದೇಶ ನೀಡಿತು.

ಬೆಂಗಳೂರು ಗಲಭೆ: 90 ಕ್ಲೇಮುಗಳು
ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ 2020ರ ಆ.11ರಂದು ನಡೆದ ಗಲಭೆ ಪ್ರಕರಣ ಸಂಬಂಧ ಕ್ಲೇಮ್‌ ಕಮಿಷನ್‌ ಹೇಳಿಕೆಗಳನ್ನು ದಾಖಲಿಸುವ ಹಂತದಲ್ಲಿದೆ. ಈವರೆಗೆ 90 ಕ್ಲೇಮ್‌ ಅರ್ಜಿಗಳು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ನೇತೃತ್ವದ ಕ್ಲೇಮ್‌ ಕಮಿಷನರ್‌ ಮುಂದಿದೆ. ಹೇಳಿಕೆ ದಾಖಲೆ ಬಳಿಕ, ಆಗಿರುವ ನಷ್ಟ ಎಷ್ಟು ಹಾಗೂ ಅದಕ್ಕೆ ಯಾರು ಹೊಣೆ ಎಂಬ ವರದಿಯನ್ನು ಕ್ಲೇಮ್‌ ಕಮಿಷನರ್‌ ಸಲ್ಲಿಸಲಿದ್ದಾರೆ ಎಂದು ಕಮಿಷನ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಮಿಷನ್‌ 2021ರ ಫೆಬ್ರವರಿಯಿಂದ ಕಾರ್ಯಾಚರಣೆ ಆರಂಭಿಸಿತ್ತು.

ಇನ್ನೆರಡು ಕ್ಲೇಮ್‌ ಕಮಿಷನ್‌
ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ 2018 ಹಾಗೂ ಜಾರಿ ನಿರ್ದೇಶನಾಲಯದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ 2019ರಲ್ಲಿ ನಡೆದ ಪ್ರತ್ಯೇಕ ಬಂದ್‌ಗಳಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟ ಪ್ರಕರಣಕ್ಕೆ ಸಂಬಂಧಿಸಿದ ನಷ್ಟ ಅಂದಾಜಿಸಲು ಎರಡು ಪ್ರತ್ಯೇಕ ಕ್ಲೇಮ್‌ ಕಮಿಷನರ್‌ಗಳನ್ನು ಸರಕಾರ ನೇಮಿಸಿದ್ದು, ಅವು ಕೂಡ ನಷ್ಟ ಅಂದಾಜು ಕಾರ್ಯದಲ್ಲಿ ತೊಡಗಿವೆ.

ತೆಲಂಗಾಣ ರಚನೆ ವೇಳೆ ಉಂಟಾಗಿದ್ದ ಗಲಭೆ ವೇಳೆ ಆಸ್ತಿ ನಷ್ಟವಾದ ಬಗ್ಗೆ 2 ಸಮಿತಿಗಳ ವರದಿ ಆಧರಿಸಿ ಸುಪ್ರೀಂಕೋರ್ಟ್‌ 10 ಮಾರ್ಗಸೂಚಿಗಳನ್ನು ಹೊರಡಿಸಿದೆ. ಕ್ಲೇಮ್‌ ಕಮಿಷನ್‌ ಅನ್ನು ನೇರವಾಗಿ ಸರಕಾರ ಅಥವಾ ಹೈಕೋರ್ಟ್‌ ಕೂಡ ಮಾಡಬಹುದು. ಹೈಕೋರ್ಟ್‌ ಮೇಲ್ವಿಚಾರಣೆ ಯಲ್ಲಿ ಕ್ಲೇಮ್‌ ಕಮಿಷನ್‌ಗಳು ಪರಿಣಾಮಕಾರಿ ಮತ್ತು ಕಾಲಬದ್ಧವಾಗಿ ಕೆಲಸ ಮಾಡುತ್ತವೆ. ಇಲ್ಲಿ ತ್ವರಿತ ನ್ಯಾಯ ನಿರೀಕ್ಷಿಸಬಹುದು.
– ಶ್ರೀಧರ್‌ ಪ್ರಭು, ಹೈಕೋರ್ಟ್‌ ನ್ಯಾಯವಾದಿ

ಕ್ಲೇಮ್‌ ಕಮಿಷನ್‌ಗಳು ನಷ್ಟ ಅಂದಾಜಿಸಿ ಅದಕ್ಕೆ ಕಾರಣ ಯಾರು ಅನ್ನುವುದನ್ನು ಶಿಫಾರಸು ಮಾಡಬಹುದಷ್ಟೇ. ಅವುಗಳನ್ನು ಒಪ್ಪಿ ನಷ್ಟ ವಸೂಲಿ ಮಾಡುವ ಪ್ರಕ್ರಿಯೆ ಸರಕಾರ ನಡೆಸಬೇಕಾಗುತ್ತದೆ. ಒಂದೊಮ್ಮೆ ಹೈಕೋರ್ಟ್‌ ಕ್ಲೇಮ್‌ ಕಮಿಷನ್‌ ನೇಮಕ ಮಾಡಿದ್ದರೆ, ಅದರ ವರದಿ ಸರಕಾರಕ್ಕೆ ಸಲ್ಲಿಕೆಯಾದರೂ, ಕೋರ್ಟ್‌ ಮಧ್ಯ ಪ್ರವೇಶಿಸಬಹುದು.
-ಜಿ.ಆರ್‌. ಮೋಹನ್‌, ನ್ಯಾಯವಾದಿ

ಸಾರ್ವಜನಿಕ ಆಸ್ತಿ ನಷ್ಟ ಮಾಡು ವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಜಾರಿಯಲ್ಲಿದೆ. ನಾವು ಅದನ್ನು ಅನುಷ್ಠಾನಕ್ಕೆ ತಂದಿರಲಿಲ್ಲ. ಆದರೆ ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರಕಾರ ಗಂಭೀರವಾಗಿ ಆಲೋಚಿಸಲಿದೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next