ಅಕ್ಕಿಆಲೂರು: ಹಾವೇರಿ ತಾಲೂಕಿನ ವರದಹಳ್ಳಿ ಬ್ರಿಡ್ಜ್ ಬಳಿ ಶವವಾಗಿ ಪತ್ತೆಯಾಗಿದ್ದ ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಶನಿವಾರ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನರಸಿಂಗರಾವ್ ದೇಸಾಯಿ ಪಪೂ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ನಂತರ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯ ಮುಖ್ಯಸ್ಥೆ ರೇಷ್ಮಾ ಬ್ಯಾತನಾಳ ಮಾತನಾಡಿ, ಸಂತ ಮಹಾಂತರನಾಡು, ಇಂತಹ ಘನಟೆಗಳು ಮೇಲಿಂದ ಮೇಲೆ ಮರುಕಳಿಸುತ್ತಿರುವುದು ನಾಗರಿಕ ಸಮಾಜ ತೆಲೆ ತಗ್ಗಿಸುವಂತಾಗಿದೆ. ಮಾನವೀಯ ಮೌಲ್ಯ ಮರೆಯಾಗಿ ಮೃಗಿಯ ವರ್ತನೆ ಮಾನವ ಕುಲಂಕ್ಕೆ ಕಳಂಕ ತರುವಂತಹದ್ದು. ಆತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿ ಸಬೇಕು. ಇಂತಹ ಪಾಪಿಗಳಿಗೆ ಸಮಾಜದಲ್ಲಿ ಬದುಕುವ ಯಾವ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಕ ಮಂಡಳಿಯ ವೀರೇಶ ನೆಲುವಿಗಿ ಮಾತನಾಡಿ, ಪ್ರತಿ ಹೆಣ್ಣನ್ನು ತಾಯಿ ಸ್ವರೂಪದಲ್ಲಿ ಕಂಡು ಆರಾಧಿಸುವ ಈ ನಾಡಿನಲ್ಲಿ ಹೆಣ್ಣನ್ನು ಕೇವಲವಾಗಿ ನಡೆಸಿಕೊಳ್ಳುತ್ತಿರುವ ವಿಕೃತ ಮನಸ್ಥಿತಿ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಸಾರ್ವಜನಿಕರ ಎದುರೇ ಗಲ್ಲಿಗೇರಿಸುವ ಕಠಿಣ ಶಿಕ್ಷೆಯೊಂದನ್ನು ರೂಪಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಡೆಯದಂತೆ ಪ್ರತಿಯೊಬ್ಬರು ಜಾಗ್ರತರಾಗಬೇಕು ಎಂದರು.
ಉಪತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಪಂ ಸದಸ್ಯ ಟಾಕನಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ, ಮುಖಂಡರಾದ ರಾಜಣ್ಣ ಗೌಳಿ, ಕೃಷ್ಣ ಈಳಿಗೇರ, ವಿಶ್ವನಾಥ ಭಿಕ್ಷಾವರ್ತಿಮಠ, ಗಿರೀಶ ಕರಿದ್ಯಾವಣ್ಣನವರ, ಪವನ ಜಾಬೀನ್, ಮಂಜುನಾಥ ಪಾವಲಿ, ಇಂಧೂದರ ಸಾಲಿಮಠ, ಅಮರ ಬೆಲ್ಲದ, ಸಂಜಯ ಓರಲಗಿ, ಹರೀಶ ಹಾನಗಲ್ಲ, ಕಷ್ಣಾ ಕೊರಚರ, ಶಿವಯೋಗಿ ಪಾಟೀಲ, ಶಂಭುಲಿಂಗ ಹಿರೇಮಠ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ಗಂಟೆ ನಡೆದ ಪ್ರತಿಭಟನೆಯಿಂದ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿ, ಪ್ರಯಾಣಿಕರಿಗೆ ತೊಂದರೆ ಉಂಟಾಗಿತು.