Advertisement

‘ಇಂಗ್ಲೀಷ್ ಕಲಿಕೆಯಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ’

04:06 PM Aug 18, 2018 | |

ಕೊಳ್ನಾಡು: ಈ ವರ್ಷ ಎಲ್ಲ ಸರಕಾರಿ ಪ್ರಾ. ಶಾಲೆಗಳಲ್ಲಿ ಗ್ರಾ.ಪಂ. ವಿಶೇಷ ಪ್ರೋತ್ಸಾಹದಿಂದ ಇಂಗ್ಲಿಷ್‌ ಕಲಿಕೆಗೆ ಒತ್ತು ನೀಡಿದ ಫಲವಾಗಿ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕಾಗಿ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ಅಭಿನಂದನಾರ್ಹರು ಎಂದು ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

Advertisement

ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಇಲಾಖೆಗಳ ತ್ತೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಸುರಿಬೈಲು, ಸೆರ್ಕಳ, ನಾರ್ಶ, ಕುಳಾಲು, ಕಾಡುಮಠ, ತಾಳಿತ್ತನೂಜಿ, ಕಟ್ಟತ್ತಿಲಮಠ ಶಾಲೆಯ ಮುಖ್ಯೋ ಪಾಧ್ಯಾಯರು ಮಕ್ಕಳ ಸಂಖ್ಯೆ ಹೆಚ್ಚಳ ಆಗಿರುವುದನ್ನು ಗಮನಕ್ಕೆ ತಂದಾಗ ಅವರು, ಇಂಗ್ಲಿಷ್‌ ಕಲಿಕೆ ಆರಂಭಿಸಿದರೆ ಸ. ಶಾಲೆ ಮುಚ್ಚುವ ಸಾಧ್ಯತೆ ಇಲ್ಲ ಎಂಬುದು ನಮ್ಮ ಗ್ರಾಮದಲ್ಲಿ ಸಾಬೀತಾಗಿದೆ ಎಂದರು. ಶಾಲೆಗಳಲ್ಲಿ ಅಕ್ಷರ ಕೈತೋಟ, ಕಾಂಪೌಂಡ್‌ ಹಾಗೂ ತ್ಯಾಜ್ಯ ಗುಂಡಿ, ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಅನುಷ್ಠಾನ ಮಾಡಲು ಸೂಚಿಸಲಾಯಿತು.

ಪಶು ಆಸ್ಪತ್ರೆ
ಕುಡ್ತಮುಗೇರು ಪಶು ಆಸ್ಪತ್ರೆಯ ವೈದ್ಯಾ ಧಿಕಾರಿ ಮಂದಾರ ಜೈನ್‌, ಪಶು ಆಸ್ಪತ್ರೆ ಜಾಗವನ್ನು ಪಂ. ಅನುದಾನದಿಂದ ಸಮತಟ್ಟುಗೊಳಿಸಲಾಗಿದೆ. ಶಂಕುಸ್ಥಾಪನೆ ಆಗಿರುವ ರೂ. 35 ಲಕ್ಷದ ಕಟ್ಟಡ ನಿರ್ಮಿತಿ ಕೇಂದ್ರಕ್ಕೆ ವಹಿಸಿರುತ್ತಾರೆ. ಹಣ ಬಿಡುಗಡೆ ಹಂತದಲ್ಲಿದೆ ಎಂದರು. ರೇಬಿಸ್‌ ನಿರೋಧಕ ಲಸಿಕೆ ಕಾರ್ಯಕ್ರಮ ಅಕ್ಟೋಬರ್‌ ಒಳಗೆ ಮಾಡಲು ಸೂಚಿಸಲಾಯಿತು.

ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೇಣುಕಾ, ಎಲ್‌ಕೆಜಿ ಆರಂಭಿಸಿದರೆ ಅಂಗನವಾಡಿ ಮಕ್ಕಳ ಸಂಖ್ಯೆ ಕಡಿಮೆಯಾಗುವ ಆತಂಕ ತಿಳಿಸಿದಾಗ, ಅಧ್ಯಕ್ಷರು ಯುಕೆಜಿಯಿಂದ ಆರಂಭಿಸಲು ಶಾಲೆಯವರಿಗೆ ಸೂಚಿಸಿ ದರು. ಪಾಣಾಜೆ ಕೋಡಿ ಅಂಗನವಾಡಿ ಕಟ್ಟಡ ಶಿಥಿಲಗೊಂಡಿರುವುದರಿಂದ ನೂತನ ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದು, ಜಮೀನು ಗುರುತಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿ ರಾಧಾ, ತಾ| ಶಿಕ್ಷಣಾಧಿಕಾರಿ ಮೂಲಕ ಪ್ರಥಮ ಚಿಕಿತ್ಸಾ ಕಿಟ್‌ಗೆ ಬೇಡಿಕೆ ಸಲ್ಲಿಸಿದಲ್ಲಿ ಇಲಾಖೆಗಳಿಂದ ಒದಗಿಸಲಾಗುವುದು. ಕುಡ್ತ ಮುಗೇರು ಆಸ್ಪತ್ರಗೆ ವೈದ್ಯಾಧಿಕಾರಿ ನೇಮಕ ಶೀಘ್ರದಲ್ಲಿ ಆಗಲಿದೆ. ಆಸಕ್ತರಿದ್ದಲ್ಲಿ ಸ್ಥಳೀಯರಿಗೆ ಅವಕಾಶವಿದೆ ಎಂದರು.

Advertisement

ಕಂದಾಯ, ಮೆಸ್ಕಾಂ ಇಲಾಖೆ
ಜಿ.ಪಂ. ಎಂಜಿನಿಯರ್‌ ನಾಗೇಶ್‌ ಅವರು ಪ್ರಗತಿಯ ವಿವರ ನೀಡಿದರು. ಕಂದಾಯ ಇಲಾಖೆ, ಮೆಸ್ಕಾಂ ಇಲಾಖೆಯ ಕೊರತೆಗಳನ್ನು ದಾಖಲಿಸಲಾಯಿತು. ಮಳೆ ಹಾನಿ ಬಗ್ಗೆ ಬಂದ ವರದಿಗಳನ್ನು ಸಂಬಂಧ ಪಟ್ಟವರಿಗೆ ಶಿಫಾರಸು ಮಾಡುವುದೆಂದು ನಿರ್ಣಯಿಸಲಾಯಿತು. ಸರ್ವೇಕ್ಷಣ- 2018 ಬಗ್ಗೆ ಪಂ. ಅಭಿವೃದ್ಧಿ ಅಧಿಕಾರಿ ಸುಧೀರ್‌ ವಿವರಿಸಿದರು. ಪ್ರತಿ ಶನಿವಾರ ಕಡತಗಳ ವಿಲೇವಾರಿ ಮತ್ತು ಸ್ಥಳ ಪರಿಶೀಲನೆ ದಿನ ಮೀಸಲು ಇಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದೆ. ಆದ್ದರಿಂದ ಸಾರ್ವಜನಿಕರು ತುರ್ತು ಕೆಲಸಕ್ಕೆ ಮಾತ್ರ ಆ ದಿನ ಸಂಪರ್ಕಿಸಬಹುದೆಂದು ಹೇಳಿದರು.

ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌, ಇಂತಹ ಸಭೆ ಪರಿಣಾಮಕಾರಿ ಎಂದರು. ತಾ.ಪಂ. ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಗ್ರಾ.ಪಂ. ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಪಂ. ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸೌಮ್ಯಾ ನಾಡಗೀತೆ ಹಾಡಿದರು. ಪಂ. ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ, ವಂದಿಸಿದರು.

ಶ್ಮಶಾನ ಅಭಿವೃದ್ಧಿ 
ಉದ್ಯೋಗ ಖಾತ್ರಿ ಎಂಜಿನಿಯರ್‌ ಗುರುಕಿರಣ್‌ ಶೆಟ್ಟಿ, ಈ ವರ್ಷ ಕಾಮಗಾರಿಗಳ ಅಂದಾಜು ಪಟ್ಟಿ ಆದ್ಯತೆ ಮೇರೆಗೆ ತಯಾರಿಸಲಾಗಿದೆ. ಶ್ಮಶಾನ ಅಭಿವೃದ್ಧಿ ಆವಶ್ಯಕತೆ ತಿಳಿಸಿದಾಗ ಸಾಲೆತ್ತೂರು ಮೈದಾನ ರುದ್ರಭೂಮಿ ಈಗಾಗಲೇ ನಿರ್ಧರಿಸಲಾಗಿದ್ದು, ಬೊಳ್ಪಾದೆ ನಿವೇಶನ ಸೇರಿ ಎರಡಕ್ಕೂ ನಾಗರಿಕ ಸಮಿತಿ ರಚನೆ ಮಾಡಿ ಉತ್ತಮ ವ್ಯವಸ್ಥೆಯ ರುದ್ರ ಭೂಮಿ ನಮ್ಮ ಅವಧಿಯಲ್ಲೇ ಮಾಡಲಾಗುವುದೆಂದು ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಪುರಸ್ಕಾರ
ಸಮುದಾಯದ ಭಾಗವಹಿಸುವಿಕೆಯಿಂದ ಗ್ರಾಮದ ಅಭಿವೃದ್ಧಿಗೂ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸರಕಾರದ ನಮ್ಮ ಗ್ರಾಮ ನಮ್ಮ ಯೋಜನೆ ರಾಜ್ಯ ಪ್ರಶಸ್ತಿ ಹಾಗೂ 10 ಲಕ್ಷ ರೂ. ಪ್ರೋತ್ಸಾಹ ಪುರಸ್ಕಾರ ನಮಗೆ ಲಭಿಸಿದೆ. ಈ ಅನುದಾನವನ್ನು ಶೇ. 50 ಸಮುದಾಯ ಕಾಮಗಾರಿಗಳಿಗೆ ಒತ್ತು ನೀಡಿ ಕ್ರಿಯಾಯೋಜನೆ ತಯಾರಿಸಲಾಗುವುದು.
– ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷರು, ಕೊಳ್ನಾಡು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next