ಬೆಂಗಳೂರು: ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದಿಂದ ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ ಸಿಗುತ್ತಿದೆ. 2020ರ ಜನವರಿ 1ರಿಂದ ಪ್ರತಿ ಲೀಟರ್ ಹಾಲಿಗೆ 2ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡುತ್ತಿರುವುದಾಗಿ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ಬೆಂಗಳೂರು ಡೈರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ , ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಮೂಲ್ ಹಾಲು ಪೂರೈಕೆ ಮಾಡುತ್ತಿದ್ದು, ಉತ್ಪಾದಕರಿಗೆ ಕಳೆದ ಸೆಪ್ಟೆಂಬರ್‌ನಿಂದ ಪ್ರತಿ ಲೀಟರ್‌ಗೆ 26 ರೂ ನೀಡುತ್ತಾ ಬಂದಿದೆ. 2020ರ ಜ.1 ರಿಂದ ಪ್ರತಿ ಲೀಟರ್ ಹಾಲಿಗೆ (3.5 ಫ್ಯಾಟ್ ಮತ್ತು 8.5 ಎಸ್.ಎನ್.ಎಫ್) 2 ರೂ. ಹೆಚ್ಚಳ ಮಾಡಿ ಹಾಲಿ ನೀಡುತ್ತಿರುವ ದರ 26 ರೂ ರಿಂದ 28 ರೂಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಸುಗಳ ಆಹಾರದ ಬೇಡಿಕೆ ಹೆಚ್ಚಾಗುತ್ತಿದೆ. ಮಳೆೆಯ ಕೊರತೆಯಿಂದಾಗಿ ಒಣ ಮತ್ತು ಹಸಿರುವ ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಮುಂಬರುವ ಬೇಸಿಗೆಯಲ್ಲಿ ಹೈನುಗಾರಿಕಾ ಕೃಷಿಕರಿಗೆ ಹೆಚ್ಚಿನ ಸವಾಲು ಎದುರಾಗಲಿದ್ದು, ಹಸುಗಳ ನಿರ್ವಹಣೆ ದುಬಾರಿಯಾಗಲಿದೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ರೈತರ ಹಿತದೃಷ್ಟಿಯಿಂದ ಹಾಲು ಖರೀದಿ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹಾಲಿನ ದರ ಏರಿಕೆಗೆ ಪ್ರಸ್ತಾವನೆ: ಸರ್ಕಾರ ಕಳೆದ ಮೂರು ವರ್ಷಗಳಿಂದ ಹಾಲಿನ ಬೆಲೆ ಏರಿಕೆ ಮಾಡಿಲ್ಲ. ಹೀಗಾಗಿ, ಪ್ರತಿ ಲೀಟರ್ ಮೇಲೆ ಕನಿಷ್ಟ ಮೂರು ರೂ. ಬೆಲೆ ಏರಿಕೆ ಮಾಡಲು ಹಾಲು ಉತ್ಪಾದಕರ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಕುರಿತು ಪಶು ಸಂಗೋಪನೆ ಇಲಾಖೆ, ಸಹಕಾರ ಇಲಾಖೆ ಮತ್ತು ಕೆಎಂಎಫ್ ಸರ್ಕಾರದ ಜತೆ ಚರ್ಚೆ ನಡೆಸಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಒಕ್ಕೂಟಗಳು ಪತ್ರ ಬರೆದಿವೆ. ಇನ್ನೂ ಸರ್ಕಾರ ಏರಿಕೆ ಮಾಡುವ ದರದಲ್ಲಿ ಶೇ.75ರಷ್ಟು ರೈತರಿಗೆ ಮತ್ತು ಶೇ.25 ಒಕ್ಕೂಟದ ನಿರ್ವಹಣೆ ಮತ್ತು ಅಭಿವೃದ್ಧಿಗೆ ಬಳಸುವುದಾಗಿ ಒಕ್ಕೂಟದ ಅಧ್ಯಕ್ಷರು ತಿಳಿಸಿದರು.
ನಕಲಿ ನಿಯಂತ್ರಣಕ್ಕೆ ಸಿಬ್ಬಂದಿ ಬೇಕು: ನಗರದಲ್ಲಿ ನಂದಿನಿ ಹೆಸರನ್ನು ಬಳಸಿ ನಕಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದರಿಂದಾಗಿ ಕೆಎಂಎಫ್ ಉತ್ಪನ್ನಗಳ ಬ್ರಾಂಡ್ ಮೌಲ್ಯ ದುರ್ಬಳಕೆಯಾಗುತಿದ್ದು, ಕೆಎಂಎಫ್ ಉತ್ಪನ್ನಗಳ ಗ್ರಾಹಕರು ಮೋಸಕ್ಕೆ ಬಲಿಯಾಗುತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಹೆಚ್ಚಿನ ವಿಜಿಲೆಂನ್ಸ್ ತಂಡಗಳನ್ನು ನಿಯೋಜನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು, ಆಹಾರ ಇಲಾಖೆ ಮತ್ತು ಆರೋಗ್ಯ ಇಲಾಖೆ ನಕಲಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹೋಗಲಾಡಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ನಕಲಿ ತುಪ್ಪ ಮಾರಾಟ – ಎಫ್ಐಆರ್: ಇತ್ತೀಚೆಗೆ ಕೆಎಂಎಫ್ ವಿಜಿಲೆನ್ಸ್ ತಂಡದಿಂದ ನಗರದ ಹಲವು ಹಾಲು ಉತ್ಪನ್ನಗಳ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಎರಡು ಮಳಿಗೆಗಳಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ಮಳಿಗೆಯ ಮಾಲೀಕರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಬೇರೆ ಉತ್ಪನ್ನ ಮಾರಿದರೆ ಪರವಾನಗಿ ರದ್ದು: ಕೆಎಂಎಫ್ನಿಂದ ಕೆಲ ಖಾಸಗಿ ಫ್ರಾಂಚೈಸಿಗಳಿಗೆ ನಂದಿನಿ ಉತ್ಪನ್ನಗಳನ್ನು ಮಾರಲು ಅನುಮತಿ ನೀಡಲಾಗಿದ್ದು, ಈ ಮಳಿಗೆಗಳಲ್ಲಿ ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳನ್ನು ಹೊರತುಪಡಿಸಿ ಬೇರೆ ಖಾಸಗಿ ಕಂಪನಿಗಳ ಉತ್ಪನ್ನ ಮಾರಾಟ ಮಾಡುವುದು ಕಂಡು ಬಂದರೆ ಮಾಲಿಕತ್ವ ಮತ್ತು ಪರವಾನಗಿ ರದ್ದು ಪಡಿಸುವು ದಾಗಿ ಬಮೂಲ್ ಅಧ್ಯಕ್ಷ ಎಚ್ಚರಿಕೆ ನೀಡಿದರು.