ವಿಜಯಪುರ: ಮಕ್ಕಳು ಮಾನವ ಲೋಕದ ಸುಂದರ ಕುಸುಮಗಳು. ಹೀಗಾಗಿ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಿ ಅವರ ಸಾಹಿತ್ಯದ ಪರಿಮಳ ಬೀರುವಂತೆ ಶಿಕ್ಷಕರು ಶ್ರಮಿಸಬೇಕು ಎಂದು ಪಿ.ಎಸ್. ತಳಕೇರಿ ಹೇಳಿದರು.
ತಾಲೂಕಿನ ಐನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವುದರಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಲೋಕ ಇನ್ನೂ ಶ್ರೀಮಂತಗೊಳ್ಳಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಚಿದಾನಂದ ಶಾಸ್ತ್ರಿಗಳು ಮಾತನಾಡಿ, ಗಡಿಯಾರದ ಟನ್ ಟನ್ ಎಂಬ ಶಬ್ಧವೂ ಕೂಡ ಮಗುವಿನಲ್ಲಿ ಶಬ್ಧಗಳನ್ನು ಹುಟ್ಟು ಹಾಕುವ ಜತೆಗೆ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಸಾಹಿತಿ ರಂಗನಾಥ ಅಕ್ಕಲಕೋಟ ಮಾತನಾಡಿ, ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಸಾಹಿತ್ಯದ ಆಸಕ್ತಿ ಹಾಗೂ ಅಭಿರುಚಿ ಬೆಳೆಸಿಕೊಳ್ಳಲು ಸಹಕಾರಿ ಆಗಲಿದೆ. ಅಲ್ಲದೇ ಸಾಹಿತ್ಯದ ಸಮೃದ್ಧಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು.
ಶ್ರೀದೇವಿ ಉತ್ಲಾಸರ ಮಾತನಾಡಿ, ಹುಟ್ಟಿದ ಮನುಷ್ಯ ತನ್ನನ್ನು ತಾನು ಹೊಟ್ಟೆ ತುಂಬಿಸುವ ಭತ್ತ ಬೆಳೆಯುವ ಗದ್ದೆಗಳಾಗಬೇಕೇ ವಿನಃ ಭತ್ತದ ಹೊಟ್ಟು ತುಂಬುವ ಗೋಣಿ ಚೀಲಗಳಾಗಬಾರದು. ಉತ್ತಮ ಪುಸ್ತಕ ಸಮಯ ಪಾಲನೆ, ಶಿಸ್ತುಗಳಂಥ ನೈತಿಕ ಮೌಲ್ಯಗಳನ್ನು ಪುಸ್ತಕಗಳ ಓದು ಮನುಷ್ಯನಲ್ಲಿ ತನ್ನಿಂತಾನೇ ಸೃಷ್ಟಿಯಾಗುತ್ತದೆ. ಶಿಕ್ಷಣದ ಜತೆಗೆ ಸಾಹಿತ್ಯದ ಓದು ಮಕ್ಕಳಲ್ಲಿ ವಿಮರ್ಶಕ ಬುದ್ದಿ, ಚಿಕಿತ್ಸಕ ದೃಷ್ಟಿ ಹುಟ್ಟು ಹಾಕುತ್ತದೆ ಎಂದು ಹೇಳಿದರು. ಕುವೆಂಪು, ಬೇಂದ್ರೆ ಅವರಂಥ ಖ್ಯಾತನಾಮ ಸಾಹಿಹಿತಿಗಳೆಲ್ಲ ಬಾಲ್ಯದಲ್ಲೇ ಓದಿನ ಹವ್ಯಾಸ ಬೆಳೆಸಿಕೊಂಡು, ಆಗಲೇ ಪದ್ಯಗಳನ್ನು ಬರೆಯುತ್ತಿದ್ದರು. ಇಂದಿನ ಮಕ್ಕಳು ಕೂಡ ಅದನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾಂತು ಇಂಚಗೇರಿ, ಡಾ| ವಿಜಯಕುಮಾರ ಪೂಜಾರಿ, ಜಿ.ಎಂ. ಕನ್ನೂರ, ಡಿ.ಎನ್. ನಲ್ಲೂರ, ಜೆ.ಎಸ್. ಮೊಗಲಿ, ಎಫ್.ಎಂ. ತಮದಡ್ಡಿ, ಝಡ್.ಐ. ಇಂಡಿಕರ, ಪಿ.ಜೆ. ಇನಾಮದಾರ, ವಿ.ವಿ. ಚವ್ಹಾಣ, ಮುಜೀಬಖಾನ್, ಚನ್ನಯ್ಯ ಮಠ ಇದ್ದರು.
ಎಸ್.ಎನ್. ಸಿಂಧೆ ಸ್ವಾಗತಿಸಿದರು. ಬಿ.ಎಚ್. ಸೂಳಿಕೇರಿ, ಎಸ್.ಎಂ. ಲಿಂಗದಳ್ಳಿ ನಿರೂಪಿಸಿದರು. ರತ್ನಮಾಲಾ ಪೂಜಾರಿ ಗೀತೆಗಳನ್ನು ಹಾಡಿದರು. ಎಸ್.ಐ. ಪಟ್ಟಣದ ವಂದಿಸಿದರು.