Advertisement

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

02:11 AM May 21, 2022 | Team Udayavani |

ಬೆಂಗಳೂರು/ಹುಬ್ಬಳ್ಳಿ: ಮೂರ್‍ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳ ಒಳಹರಿವು ಹೆಚ್ಚಳವಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, 14 ವರ್ಷಗಳ ಬಳಿಕ ಮೇ ತಿಂಗಳಲ್ಲಿಯೇ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ನೂರಡಿ ದಾಟಿದೆ.

Advertisement

ಕೆಆರ್‌ಎಸ್‌ ಜಲಾಶಯದಲ್ಲಿ ಶುಕ್ರವಾರ ನೀರಿನ ಮಟ್ಟ 103.22 ಅಡಿ ಇತ್ತು. 15,989 ಕ್ಯೂಸೆಕ್‌ ಒಳ ಹರಿವು ಹೆಚ್ಚಾಗಿದ್ದು, ಹೊರ ಹರಿವು 1,098 ಕ್ಯೂಸೆಕ್‌ ಇತ್ತು. ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವಿನ ನೀರಿನ ಪ್ರಮಾಣದಲ್ಲಿ ಏರಿಕೆ ಆಗಿದೆ. ಶುಕ್ರವಾರ ಕಬಿನಿ ಜಲಾಶಯದಲ್ಲಿ 3,481 ಕ್ಯೂಸೆಕ್‌ ಒಳಹರಿವು, 1,000 ಕ್ಯೂಸೆಕ್‌ ಹೊರಹರಿವು ಇತ್ತು. ಹಾರಂಗಿ ಜಲಾಶಯದಲ್ಲಿ 2,310 ಕ್ಯೂಸೆಕ್‌ ಒಳಹರಿವು, 250 ಕ್ಯೂಸೆಕ್‌ ಹೊರಹರಿವು ದಾಖಲಾಗಿದೆ.

ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ರೈತರು ಬೆಳೆದಿದ್ದ ಹುರುಳಿ, ಅಲಸಂಡೆ, ಉದ್ದು, ಎಳ್ಳು, ತೊಗರಿ ಸೇರಿ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಬೆಳೆಗಳು ನೆಲಕಚ್ಚಿವೆ. ಮನೆಗಳು, ವಿದ್ಯುತ್‌ ಕಂಬಗಳು ನೆಲಕ್ಕುರಳಿವೆ. ರಸ್ತೆಗಳು, ಸೇತುವೆ ಗಳು ಕುಸಿದಿವೆ.

ಧಾರವಾಡದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಎರಡು ದಿನಗಳಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಯಾಗಿದೆ. ಕುಂದಗೋಳ ತಾಲೂಕಿನಲ್ಲಿ ಬೆಣ್ಣಿಹಳ್ಳ ಹಾಗು ಗೂಗಿ ಹಳ್ಳ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಹಿರೇನರ್ತಿ-ಯರಗುಪ್ಪಿ ಮಧ್ಯದ ಗೂಗಿ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಚಾಕಲಬ್ಬಿ, ಕಮಡೊಳ್ಳಿ, ಯರಗುಪ್ಪಿ ಸಾರಿಗೆ ಸಂಪರ್ಕ ಸ್ಥಗಿತಗೊಂಡಿದೆ. ಕಾರವಾರ ಮೀನುಗಾರಿಕೆ ಬಂದರು ಸಹಿತ ಹೊನ್ನಾವರ, ಭಟ್ಕಳ, ಕುಮಟಾ, ಬೇಲೇಕೇರಿ ಬಂದರಿನಲ್ಲಿ ಮೀನುಗಾರಿಕೆ ದೋಣಿಗಳು ಆಯಾ ಬಂದರುಗಳಲ್ಲಿ ಲಂಗುರ ಹಾಕಿವೆ. ಮುಂಡಗೋಡದಲ್ಲಿ 9, ಕುಮಟಾದಲ್ಲಿ 4, ಭಟ್ಕಳದಲ್ಲಿ 3 ಸಹಿತ ಒಟ್ಟು 35 ಮನೆಗಳಿಗೆ ಹಾನಿಯಾಗಿದೆ.

ಸುಪಾ ಡ್ಯಾಂ ಭರ್ತಿಗೆ 31 ಮೀಟರ್‌ ಬಾಕಿ
ಉತ್ತರ ಕನ್ನಡದ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಕದ್ರಾ, ಕೊಡಸಳ್ಳಿ ಅಣೆಕಟ್ಟುಗಳು ಭರ್ತಿಗೆ 3 ಮೀಟರ್‌, ಸುಪಾ ಡ್ಯಾಂ ಭರ್ತಿಗೆ 31 ಮೀಟರ್‌ ಬಾಕಿಯಿದೆ. ಕೊಪ್ಪಳದಲ್ಲೂ ಭಾರೀ ಮಳೆಯಾಗುತ್ತಿದ್ದು, ಯಲಬುರ್ಗಾ ತಾಲೂಕಿನ ಕಿನ್ನಾಳದ ಬಳಿ ಇರುವ ಹಿರೇಹಳ್ಳ ಮಿನಿ ಜಲಾಶಯ ಭರ್ತಿಯಾಗಿದ್ದು, 17,290 ಕ್ಯೂಸೆಕ್‌ ನೀರು ನದಿ ಪಾತ್ರಗಳಿಗೆ ಬಿಡಲಾಗಿದೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿಗೆ 946 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿಗೆ 11,125 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಟಿಬಿ ಡ್ಯಾಂಗೆ 36,272 ಕ್ಯೂಸೆಕ್‌ ಒಳ ಹರಿವಿದೆ.

Advertisement

ಶೀಘ್ರ ಯಗಚಿ ಭರ್ತಿ
ಹಾಸನ ಬೇಲೂರು ಸಮೀಪದ ಯಗಚಿ ಜಲಾ ನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದಲ್ಲಿ ಭರ್ತಿಯಾಗು ತ್ತಿದೆ. ಯಗಚಿ ತುಂಬಲು ಅರ್ಧ ಅಡಿಯಷ್ಟೇ ಬಾಕಿಯಿದೆ. ಈ ವರ್ಷ ಜಲಾಶಯ ಬಹುತೇಕ ಭರ್ತಿಯಾಗುವ ಸಾಧ್ಯತೆಯಿದೆ. 4 ದಿನಗಳಿಂದ ಮಳೆಯಿಂದ ಯಗಚಿ ಜಲಾಶಯದ ಒಳ ಹರಿವು ಹೆಚ್ಚುತ್ತಿದೆ. 3.603 ಟಿಎಂಸಿ ನೀರು ಸಂಗ್ರಹದ ಸಾಮ ರ್ಥ್ಯದ ಜಲಾಶಯದಲ್ಲಿ 3.456 ಟಿಎಂಸಿ ನೀರು ಸಂಗ್ರಹವಾಗಿದೆ. 872 ಕ್ಯೂಸೆಕ್‌ ನೀರು ಒಳ ಹರಿವಾಗಿದ್ದು, 500 ಕ್ಯೂಸೆಕ್‌ ಹೊರ ಹರಿಸಲಾಗುತ್ತಿದೆ.

ತೀರ ಪ್ರದೇಶದಲ್ಲಿ ನೆರೆ ಭೀತಿ
ವರದಾ, ಗಂಗಾವಳಿ, ಘಟಪ್ರಭಾ ಸೇರಿ ಪ್ರಮುಖ ನದಿಗಳು ಉಕ್ಕಿದ್ದು, ತೀರ ಪ್ರದೇಶದಲ್ಲಿ ನೆರೆ ಭೀತಿ ಎದುರಾಗಿದೆ. ತುಂಗಾ, ಭದ್ರಾ, ಹೇಮಾವತಿ, ಕೃಷ್ಣಾ, ಮಲಪ್ರಭಾ ನದಿಗಳ ಒಳ ಹರಿವು ಹೆಚ್ಚಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸವಣೂರು-ದೇವಗಿರಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಬೆಳಗಾವಿಯಲ್ಲಿ ಭಾರೀ ಗಾಳಿ-ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ವಡಗಾವಿ. ಯಳ್ಳೂರು, ಹಲಗಾ, ಮಚ್ಛೆ, ಬಸವನ ಕುಡಚಿ, ಹಿಂಡಲಗಾ, ಸಾಂಬ್ರಾ, ಮುತಗಾ, ಮಾರೀಹಾಳ, ಸುಳೇಭಾವಿ, ಸುಳಗಾ, ಉಚಗಾಂವಿ, ಕಂಗ್ರಾಳಿ ಮುಂತಾದ ಪ್ರದೇಶಗಳು ಜಲಾವೃತವಾಗಿದೆ. ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಅಪಾರ ನೀರು ಹರಿದು ಬರುತ್ತಿದ್ದು, ಮೂಡಲಗಿ ತಾಲೂಕಿನ ಸುಣಧೋಳಿ, ಕಮಲದಿನ್ನಿ, ಹುಣಶ್ಯಾಳ ಪಿ. ವೈ, ಅವರಾದಿ, ಢವೇಳಶ್ವರ ಸಹಿತ ಐದು ಸೇತುವೆಗಳು ಮುಳುಗಿವೆ.

Advertisement

Udayavani is now on Telegram. Click here to join our channel and stay updated with the latest news.

Next