Advertisement

ರಸ್ತೆ ಕಾಮಗಾರಿ ಅಪೂರ್ಣ; ಓಡಾಟಕ್ಕೆ ತೊಂದರೆ

03:42 PM Mar 08, 2021 | Team Udayavani |

ಅರಸೀಕೆರೆ: ನಗರದ ಹೃದಯ ಭಾಗ ಬಸವನಗುಡಿ ಹಿಂಭಾಗದ ಎಂ.ಎನ್‌.ನಾಗಪ್ಪ ಗಲ್ಲಿಯ ಕಾಂಕ್ರೀಟ್‌ ಕಾಮಗಾರಿ ಅಪೂರ್ಣಗೊಂಡಿದ್ದು, ಕಳಪೆ ಕೂಡ ಆಗಿದೆ. ಕೂಡಲೇ ನಗರಸಭೆ ಆಡಳಿತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ನಗರದ ಬಸ್‌, ರೈಲ್ವೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಬಸವನಗುಡಿ ದೇಗುಲ ಹಿಂಭಾಗದ ಎಂ.ಎನ್‌.ನಾಗಪ್ಪಗಲ್ಲಿಯ ಹಾಸುಕಲ್ಲಿನ ರಸ್ತೆಯನ್ನು ಅಭಿವೃದ್ಧಿ. 18 ತಿಂಗಳ ಹಿಂದೆಯೇ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿ, ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಗುತ್ತಿಗೆದಾರರು ಹಿಂದೆ ಹಾಕಿದ್ದ ಹಾಸುಕಲ್ಲುಗಳನ್ನು ಕಿತ್ತುಕೊಂಡು ಬೇರೆ ಕಡೆಗೆ ಸಾಗಿಸಿದ ಪರಿಣಾಮ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆ ಒಂದು ಬದಿಗೆ ಮಾತ್ರ ಬಾಕ್ಸ್‌ ಚರಂಡಿ ನಿರ್ಮಿಸಿ, ಅರ್ಧಕ್ಕೆ ಕೈಬಿಟ್ಟ ಗುತ್ತಿಗೆದಾರರು, ಇದುವರೆಗೂ ಕಾಂಕ್ರೀಟ್‌ ರಸ್ತೆ ಕಾಮಗಾರಿ ಕೈಗೊಳ್ಳದಿದ್ದ ಕಾರಣ, ನಾಗರಿಕರು ಓಡಾಡಲು ಪರದಾಡುವಂತಾಗಿದೆ.

ಕಳೆದ ಒಂದು ವರ್ಷದಿಂದ ನಾಗರಿಕರು ನಗರ ಸಭೆ ಆಡಳಿತಕ್ಕೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ವಾರದ ಹಿಂದೆ ಸಾರ್ವಜನಿಕರುಮತ್ತೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಕಾಂಕ್ರೀಟ್‌ರಸ್ತೆಯನ್ನು ನಿರ್ಮಿಸಿರುವ ಗುತ್ತಿಗೆದಾರರು, ಕಳಪೆ ಕಾಮಗಾರಿ ಮಾಡಿದ್ದಾರೆ. ಅವೈಜ್ಞಾನಿಕವಾಗಿ ಕಾಂಕ್ರೀಟ್‌ ಹಾಕಿರುವ ಕಾರಣ, ಮಳೆ ಬಂದರೆನೀರು ಮನೆಯೊಳಗೆ ನುಗ್ಗುತ್ತದೆ. ರಸ್ತೆಯ ಒಂದು ಬದಿಗೆ ಇಳಿಜಾರು ಮಾಡಲಾಗಿದೆ. ಮತ್ತೂಂದು ಬದಿಯ ಚರಂಡಿಯಲ್ಲಿ ನೀರು ಹರಿಯಲು ಸಾಧ್ಯವಾಗದಂತೆ ತ್ಯಾಜ್ಯ ವಸ್ತುಗಳನ್ನು ತುಂಬಲಾಗಿದೆ.

ಮನೆಯಲ್ಲಿ ಬಳಸಿದ್ದು ಮತ್ತು ಮಳೆಯ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೇ, ನಿಂತು ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ವಾಸ ಸ್ಥಾನವಾಗಿದೆ. ಅಲ್ಲದೆ, ರಸ್ತೆ ನಿರ್ಮಾಣಕ್ಕೆ ಅಡ್ಡಿ ಆಗಿದ್ದ ಎರಡು ಬೃಹತ್‌ ಮರ ತೆರವುಗೊಳಿಸಿದ್ದ ನಗರಸಭೆಆಡಳಿತ, ಅದೇ ಜಾಗದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಅರ್ಧಕ್ಕೆ ಬಿಟ್ಟು ಹೋಗಿದ್ದು, ಸಂಚಾರಕ್ಕೆ ತೊಂದರೆ ಆಗಿದೆ.

Advertisement

ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಮತ್ತು ಸಂಬಂಧಪಟ್ಟ ಅಭಿಯಂತರರಿಗೆ ಸಾರ್ವಜನಿಕರು ಮನವಿ ಮಾಡಿ, ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಕೋರಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿ, ಸಮಸ್ಯೆಗೆ ಶಾಶ್ವತ ಪರಿಹಾರದೊರಕಿಸಬೇಕಾಗಿದೆ. ಅಲ್ಲಿಯವರೆಗೆ ಯಾವುದೇಕಾರಣಕ್ಕೂ ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾಮಗಾರಿಗೆ ಬಿಲ್ಲು ಪಾವತಿ ಮಾಡಬಾರದು ಎಂದು ಜನ ಒತ್ತಾಯಿಸಿದ್ದಾರೆ.

18 ತಿಂಗಳಿಂದ ಹದಗೆಟ್ಟ ರಸ್ತೆಯಲ್ಲಿ ತಿರುಗಾಡದ ಪರಿಸ್ಥಿತಿ ಇದೆ. ಅಕ್ಕಪಕ್ಕದ ಮನೆಗಳ ವಾಸಿಗಳು ಮಳೆ ನೀರು ಎಲ್ಲಿನುಗ್ಗುತ್ತದೆ ಎಂಬ ಆತಂಕದಲ್ಲೇ ಬದುಕುವಂತಾಗಿದೆ. ದೇವಸ್ಥಾನದ ಹಿಂಭಾಗದಲ್ಲಿ ಮರಗಳನ್ನು ತೆರವುಗೊಳಿಸಿದ್ದರೂ, ಈಭಾಗದ ರಸ್ತೆ ನಿರ್ಮಿಸದೇ ತೊಂದರೆ ಆಗಿದೆ.ಬಸವರಾಜು, ಸ್ಥಳೀಯ ವಾಸಿ

ಯಾವುದೇ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸುವಂತಿಲ್ಲ, ಅಲ್ಲದೆ, ಕಾಮಗಾರಿಗಳ ಗುಣಮಟ್ಟವನ್ನು ಕ್ರಿಯಾ ಯೋಜನೆಗೆ ಅನುಗುಣವಾಗಿ ಪೂರೈಸಬೇಕಾಗಿದೆ. ಒಂದು ವೇಳೆ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣವಾಗಿ ಮಾಡದಿದ್ದರೇ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಜಗದೀಶ್‌, ನಗರಸಭೆ ಅಭಿಯಂತರ

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಮತ್ತು ಸಂಬಂಧಪಟ್ಟ ಅಭಿಯಂತರಿಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಕಾಂತರಾಜ್‌, ನಗರಸಭೆ ಪೌರಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next