ಚೆನ್ನೈ: ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳನ್ನು ಸೇರ್ಪಡೆಗೊಳಿಸಲು ಕೋರಿ ಕೇಂದ್ರಗೃಹ ಸಚಿವ ಅಮಿತ್ ಶಾ ಅವರಿಗೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪತ್ರ ಬರೆದಿದ್ದಾರೆ. ಪರೀಕ್ಷೆ ಸೂಚನೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದರಿಂದ ತಮಿಳುನಾಡಿನಿಂದ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ, ಇಂಥ ನಿರ್ಣಯಗಳು ಏಕಪಕ್ಷೀಯ ಹಾಗೂ ತಾರತಮ್ಯವೆಂದು ತೋರುತ್ತವೆ ಎಂದು ಆಕ್ಷೇಪಿಸಿದ್ದಾರೆ. ಜತೆಗೆ 100 ಅಂಕದ ಪರೀಕ್ಷೆಯಲ್ಲಿ 25 ಅಂಕಗಳನ್ನು ಹಿಂದಿ ಗ್ರಹಿಕೆ ಕೌಶಲಕ್ಕೆ ಮೀಸಲಿಟ್ಟಿದ್ದು, ಇದು ಹಿಂದಿ ಭಾಷಿಕರಿಗೆ ಮಾತ್ರ ಲಾಭವಾಗಲಿದೆ. ಈ ಹಿನ್ನೆಲೆ ಸ್ಥಳೀಯ ಭಾಷೆಗಳನ್ನೂ ಸೇರ್ಪಡೆಗೊಳಿಸುವಂತೆ ಆಗ್ರಹಿಸಿದ್ದಾರೆ.