Advertisement

ನಿಲ್ಲದ ಚೀನಿ ಕುತಂತ್ರಗಳು, ಪ್ರತ್ಯುತ್ತರವೇ ಪಾಠವಾಗಲಿ

11:15 PM Dec 02, 2020 | mahesh |

ತಿಂಗಳುಗಳು ಉರುಳಿದರೂ ಗಡಿ ಭಾಗದಲ್ಲಿ ಚೀನದೊಂದಿಗೆ ಸೃಷ್ಟಿಯಾಗಿರುವ ಬಿಕ್ಕಟ್ಟು ಮುಗಿದಿಲ್ಲ. ಎಷ್ಟೇ ಮಾತುಕತೆಗಳ ಅನಂತರವೂ ಚೀನ ತನ್ನ ಉದ್ಧಟತನ ನಿಲ್ಲಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ಭಾರತೀಯ ಸೇನೆಯೂ ಚೀನಕ್ಕೆ ಸವಾಲೊಡ್ಡುವ ರೀತಿಯಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿ ಸರ್ವಸನ್ನದ್ಧವಾಗಿ ನಿಂತಿದೆ. ಈ ಬಿಕ್ಕಟ್ಟಿನ ಆರಂಭಿಕ ಹಂತದಲ್ಲಿ, ಅಂದರೆ ಜೂನ್‌ ತಿಂಗಳಲ್ಲಿ ಭಾರತ ಹಾಗೂ ಚೀನಿ ಸೇನೆಯ ನಡುವೆ ಗಾಲ್ವಾನ್‌ ಪ್ರದೇಶದಲ್ಲಿ ಘರ್ಷಣೆ ಉಂಟಾಗಿತ್ತು. ಚೀನದ ದುಷ್ಟ ತಂತ್ರವನ್ನು ಎದುರಿಸುತ್ತಲೇ, ಅಂದು ಭಾರತದ 20 ಸೈನಿಕರು ವೀರಮರಣವನ್ನಪ್ಪಿದ್ದರು. ಭಾರತೀಯ ಸೇನೆಯ ಪ್ರತ್ಯುತ್ತರಕ್ಕೆ ಚೀನದ ಪಿಎಲ್‌ಎ ಸೈನ್ಯಕ್ಕೂ ಅಪಾರ ಪೆಟ್ಟು ಬಿದ್ದಿತ್ತು. ರಕ್ಷಣ ಪರಿಣತರ ಪ್ರಕಾರ ಏನಿಲ್ಲವೆಂದರೂ 40ಕ್ಕೂ ಹೆಚ್ಚು ಚೀನಿ ಸೈನಿಕರು ಅಂದು ಭಾರತದ ಪ್ರತಿದಾಳಿಗೆ ನೆಲಕ್ಕುರುಳಿದ್ದರು. ಆದರೆ, ಚೀನ ಮಾತ್ರ ತನ್ನ ಎಷ್ಟು ಸೈನಿಕರು ಸತ್ತರು ಎನ್ನುವುದನ್ನು ಮುಚ್ಚಿಟ್ಟಿದೆ. ಘರ್ಷಣೆಗೆ ಭಾರತವೇ ಕಾರಣ ಎಂದು ನಮ್ಮತ್ತಲೇ ಬೆರಳು ತೋರಿಸಲೂ ಪ್ರಯತ್ನಿಸುತ್ತಾ ಬಂದಿದೆ.

Advertisement

ಈಗ ಅಮೆರಿಕದ ಪ್ರಮುಖ ಭದ್ರತಾ ಸಮಿತಿಯೊಂದು ಅಮೆರಿಕನ್‌ ಕಾಂಗ್ರೆಸ್‌ಗೆ ಸಲ್ಲಿಸಿರುವ ತನ್ನ ವಾರ್ಷಿಕ ವರದಿಯಲ್ಲಿ, “”ಗಾಲ್ವಾನ್‌ ಘರ್ಷಣೆಯು ಚೀನಿ ಸರಕಾರದ ವ್ಯವಸ್ಥಿತ ಸಂಚು” ಎಂದಿದೆ. ಅಲ್ಲದೇ ಘರ್ಷಣೆಯಲ್ಲಿ ಎಷ್ಟು ಭಾರತೀಯ ಯೋಧರು ಸಾಯಬಹುದು ಎನ್ನುವುದನ್ನೂ ಚೀನ ಯೋಚಿಸಿರಬಹುದು ಎನ್ನುತ್ತದೆ ಈ ವರದಿ.

ಆದಾಗ್ಯೂ ಚೀನದ ದುರ್ಬುದ್ಧಿಯ ಅರಿವಿರುವ ಭಾರತಕ್ಕೆ ಈ ವರದಿ ಅಚ್ಚರಿಯೇನೂ ತರಿಸುತ್ತಿಲ್ಲ. ಭಾರತದ ರಕ್ಷಣ ಪರಿಣತರು ಕೂಡ ಗಾಲ್ವಾನ್‌ ಕಣಿವೆಯ ಘರ್ಷಣೆ ನಡೆಸಲು ಚೀನ ಸಂಚು ರೂಪಿಸಿತ್ತು ಎನ್ನುವುದನ್ನು ಹೇಳುತ್ತಲೇ ಬಂದಿದ್ದಾರೆ. ವಿಸ್ತರಣಾವಾದಿ ಆಕಾಂಕ್ಷೆಯ ಚೀನ ತನ್ನ ದುರುದ್ದೇಶಪೂರಿತ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಎಂಥ ಕೆಳಮಟ್ಟಕ್ಕೂ ಇಳಿಯಬಲ್ಲದು ಎನ್ನುವುದನ್ನು ಜಗತ್ತು ನೋಡುತ್ತಲೇ ಬಂದಿದೆ. ಕೇವಲ ತನ್ನ ಸೇನೆಯ ಮೂಲಕವಷ್ಟೇ ಅಲ್ಲದೇ, ಇನ್ನಿತರ ತಂತ್ರಗಳ ಮೂಲಕವೂ ನೆರೆ ರಾಷ್ಟ್ರಗಳಿಗೆ ಯಾವೆಲ್ಲ ರೀತಿಯಲ್ಲಿ ತೊಂದರೆ ಕೊಡಬಹುದು ಎನ್ನುವ ಮಾರ್ಗವನ್ನು ಚೀನ ಹುಡುಕುತ್ತಲೇ ಇರುತ್ತದೆ. ಈಗದು ಭಾರತ ಮತ್ತು ಬಾಂಗ್ಲಾದೇಶಗಳ ಆಕ್ಷೇಪಗಳನ್ನೂ ಬದಿಗೊತ್ತಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿಕೊಂಡಿದೆ. ಜಲವಿದ್ಯುತ್‌ ಉತ್ಪಾದನೆಗಾಗಿ ಈ ಯೋಜನೆ ಎಂದು ಚೀನ ಹೇಳುವುದು ಬರೀ ನೆಪ ಮಾತ್ರ. ತನ್ನ ಬರಡುಪ್ರದೇಶಗಳಿಗೆ ನೀರು ತುಂಬಿಸುವುದು ಮತ್ತು ಕೆಳಪಾತ್ರದ ನದಿಗಳನ್ನು ಬತ್ತಿಸುವ ದುರುದ್ದೇಶವೂ ಇದರ ಹಿಂದೆ ಢಾಳಾಗಿ ಕಾಣಿಸುತ್ತಿದೆ. ಈ ವಿಚಾರದಲ್ಲಿ ಅದು ಅಂತಾರಾಷ್ಟ್ರೀಯ ಜಲಒಪ್ಪಂದವನ್ನೂ ಉಲ್ಲಂ ಸಿದೆ. ಭಾರತ ಹಾಗೂ ಬಾಂಗ್ಲಾದೇಶದ ಜೀವವೈವಿಧ್ಯಕ್ಕೆ, ಕೃಷಿಗೆ ಮಾರಕವಾಗಬಲ್ಲ ಅದರ ಈ ಯೋಜನೆಯನ್ನು ತಡೆಯಲೇಬೇಕಾದ ಅಗತ್ಯ ವಿಶ್ವಸಮುದಾಯದ ಎದುರಿದೆ.

ಆದಾಗ್ಯೂ ಭಾರತವನ್ನು ಹೇಗೆ ಎದುರಿಸಬೇಕೆನ್ನುವುದು ಚೀನಕ್ಕೆ ಈಗ ತಿಳಿಯುತ್ತಿಲ್ಲ ಎನ್ನುವುದೂ ಸ್ಪಷ್ಟವಾಗುತ್ತಿದೆ. ಚೀನದ ಘೋಷಣೆಯ ಅನಂತರ ಈಗ ಭಾರತವೂ ಅರುಣಾಚಲ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದೆ. ಏಕೆಂದರೆ ಚೀನದೊಂದಿಗೆ ಬಿಕ್ಕಟ್ಟುಗಳು ಮಾತುಕತೆಯಿಂದ ಬಗೆಹರಿಯುವುದಿಲ್ಲ ಎನ್ನುವುದು ಭಾರತಕ್ಕೆ ಚೆನ್ನಾಗಿ ಅರಿವಿದೆ. ಭಾರತದ ಮನೋಧೋರಣೆ ಈಗ ಏಟಿಗೆ ದುಪ್ಪಟ್ಟು ಶಕ್ತಿಯಿಂದ ಎದುರೇಟು ನೀಡುವಷ್ಟು ಗಟ್ಟಿಯಾಗಿ ಬದಲಾಗಿರುವುದೇ ಶ್ಲಾಘನೀಯ ಸಂಗತಿ. ಭಾರತದ ಈ ರೀತಿಯ ಪ್ರತ್ಯುತ್ತರಗಳೇ ಚೀನಕ್ಕೆ ಪಾಠವಾಗಬಲ್ಲವು.

Advertisement

Udayavani is now on Telegram. Click here to join our channel and stay updated with the latest news.

Next