ಉಡುಪಿ: ಜಾನಪದ ಕಲೆ ಹಾಗೂ ಕ್ರೀಡೆಯ ಸೊಬಗು, ಸಹಜತೆ, ಆತ್ಮೀಯತೆ ಯಾವುದೇ ಕಲೆಗಳಲ್ಲಿ ನೋಡಲು ಸಾಧ್ಯವಿಲ್ಲ. ಇದು ಎಂದಿಗೂ ಶಾಶ್ವತವಾಗಿರುತ್ತದೆ. ಈ ಮಣ್ಣಿನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಣ್ಣಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ, ತಾಲೂಕು ಘಟಕ ವತಿಯಿಂದ ಮಂಗಳವಾರ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವದಿಸಿ, ಜಾನಪದವು ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ ಎಂದರು.
ಜನಪದ ವಿದ್ವಾಂಸ ಡಾ| ಗಣನಾಥ್ ಎಕ್ಕಾರು ಮಾತನಾಡಿ, ಪ್ರಕೃತಿ, ಕೃಷಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸದಿದ್ದರೆ ಜಾನಪದವು ಅಪಾಯದಂಚಿಗೆ ತಲುಪಬಹುದು. ಪ್ರಕೃತಿ ಮತ್ತು ಸಂಸ್ಕೃತಿಯ ಅವಿನಾಭಾವ ಸಂಬಂಧದ ಕುರಿತು ಚರ್ಚಿಸಿ ಅಭಿವೃದ್ಧಿಯ ಚಿಂತನೆ ರೂಪಿಸಬೇಕಿದೆ. ಜಾನಪದ ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೊಸ ಸ್ವರೂಪ ಪಡೆಯುತ್ತದೆ. ಕಾಲಕಾಲಕ್ಕೆ ಜಾನಪದ ಕಲೆಯ ದಾಖಲೀಕರಣ ಅಗತ್ಯವಿದೆ ಎಂದು ಸಲಹೆ ನೀಡಿದರು.
ಪರಿಷತ್‌ನ ರಾಜ್ಯಾಧ್ಯಕ್ಷ ಡಾ| ಎಸ್. ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ, ತುಳು ಪಾಡªನ ಕಲಾವಿದ ಅಪ್ಪಿ ಕೃಷ್ಣ ಪಾಣ, ಪಾಣರಾಟದ ಕಲಾವಿದ ನಾಗರಾಜ್ ಪಾಣ, ಜನಪದ ಕಲಾವಿದ ಶಂಕರ್‌ದಾಸ್, ಸಂಪ್ರದಾಯ ಹಾಡುಗಳ ಗಾಯಕಿ ಜಾಹ್ನವಿ,ಹೌಂದರಾಯನ ವಾಲ್ಗ ಕಲಾವಿದ ಸತೀಶ್ ಕಾಂಚನ್, ಯಕ್ಷಗಾನ ಕಲಾವಿದೆ ಜ್ಯೋತಿ ಮಾಧವ ಪ್ರಭು, ಪರಿಷತ್ತಿನ ತಾಲೂಕು ಅಧ್ಯಕ್ಷ ಮಾಯಾ ಕಾಮತ್, ಜಂಟಿ ಕಾರ್ಯದರ್ಶಿ ಮೊಹಮ್ಮದ್ ಫಾರುಕ್, ಪ್ರ. ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಖಜಾಂಚಿ ಚಂದ್ರ ಹಂಗಾರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಪರಿಷತ್ ಜಿಲ್ಲಾಧ್ಯಕ್ಷ ಡಾ| ಗಣೇಶ್ ಗಂಗೊಳ್ಳಿ ಪ್ರಸ್ತಾವನೆಗೈದರು. ಎನ್. ಆರ್. ದಾಮೋದರ ಶರ್ಮ ನಿರೂಪಿಸಿದರು.