Advertisement

ಇಂದು ದಡ್ಡಲಕಾಡಿನಲ್ಲಿ ನೂತನ ಸರಕಾರಿ ಪ್ರೌಢಶಾಲೆ ಉದ್ಘಾಟನೆ

09:49 PM Oct 05, 2020 | mahesh |

ಮಂಡ್ಯದಲ್ಲಿ ಮುಚ್ಚಲ್ಪಟ್ಟ ಶಾಲೆ ಆರಂಭ  ಹೊಸದಾಗಿ 9ನೇ ತರಗತಿ ಪ್ರಾರಂಭ

Advertisement

ಬಂಟ್ವಾಳ: ಮುಚ್ಚುವ ಹಂತದಲ್ಲಿದ್ದ ದಡ್ಡಲಕಾಡು ಸರಕಾರಿ ಶಾಲೆಯು ವಿದ್ಯಾರ್ಥಿಗಳ ಸಂಖ್ಯೆ ಗಣ ನೀಯ ಏರಿಕೆಯ ಜತೆಗೆ ಖಾಸಗಿ ಶಾಲೆಯ ರೀತಿಯಲ್ಲಿ ಬೆಳೆದು ರಾಜ್ಯಾದ್ಯಂತ ಹೆಸರು ಮಾಡಿದ್ದು, ಇದೀಗ ಮಂಡ್ಯ ಜಿಲ್ಲೆಯಲ್ಲಿ ಮುಚ್ಚಲ್ಪಟ್ಟ ಸರಕಾರಿ ಪ್ರೌಢಶಾಲೆಯು ದಡ್ಡಲಕಾಡಿಗೆ ಸ್ಥಳಾಂತರ(ಶಿಫ್ಟ್‌)ಗೊಂಡು ಅ. 6ರಂದು ಉದ್ಘಾಟನೆಗೊಳ್ಳಲಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ದಡ್ಡಲಕಾಡು ಶಾಲೆಗೆ ಭೇಟಿ ನೀಡಿದ್ದ ರಾಜ್ಯ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಬೇಡಿಕೆಯ ಮೇರೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲೇ ಇಲ್ಲಿಗೆ ಪ್ರೌಢಶಾಲೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ಅದರ ಮಂಜೂರಾತಿ ಪ್ರಕ್ರಿಯೆಗಳು ನಡೆದು, ಬೇರೆಡೆಗೆ ಮುಚ್ಚಲ್ಪಟ್ಟ ಸರಕಾರಿ ಪ್ರೌಢಶಾಲೆಯನ್ನು ಸ್ಥಳಾಂತರಿಸುವ ಅವಕಾಶದಲ್ಲಿ ದಡ್ಡಲಕಾಡು ಶಾಲೆಗೆ ಪ್ರೌಢಶಾಲೆ ಮಂಜೂರಾಗಿತ್ತು.

ಪ್ರಸ್ತುತ ಕೊರೊನಾ ಕಾರಣದಿಂದ ಶೈಕ್ಷಣಿಕ ವರ್ಷ ಆರಂಭಗೊಂಡಿಲ್ಲವಾದರೂ, ಪ್ರೌಢಶಾಲೆಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಡೆದಿದೆ. ಅ. 6ರಂದು ಬೆಳಗ್ಗೆ 9ಕ್ಕೆ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ದಡ್ಡಲಕಾಡು ನೂತನ ಪ್ರೌಢಶಾಲೆಯನ್ನು ಉದ್ಘಾಟಿಸಲಿದ್ದಾರೆ.

ಅನುದಾನಕ್ಕೆ ಅವಕಾಶವಿಲ್ಲ
ಒಂದು ಕಡೆ ಮುಚ್ಚಲ್ಪಟ್ಟ ಸರಕಾರಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಅದಕ್ಕಾಗಿ ಪ್ರತ್ಯೇಕ ಅನುದಾನ ನೀಡಲು ಅವಕಾಶವಿಲ್ಲ. ಅಲ್ಲಿಗೆ ಮಂಜೂರಾಗಿದ್ದ ಸಿಬಂದಿ ಹಾಗೂ ಶಿಕ್ಷಕರ ಹುದ್ದೆಯನ್ನು ಮಾತ್ರ ಇಲ್ಲಿಗೆ ನೀಡಲು ಅವಕಾಶವಿದೆ. ಹೀಗಾಗಿ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ಎಲ್ಲ ಸೌಲಭ್ಯಗಳು ನಮ್ಮಲ್ಲಿ ಇದೆ ಎಂದು ಇಲಾಖೆಯ ಷರತ್ತಿಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮಂಜೂರಾಗಿದೆ.

Advertisement

ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಒಂದೇ ಆವರಣದಲ್ಲಿದ್ದರೂ ಪ್ರತ್ಯೇಕ ಆಡಳಿತದೊಂದಿಗೆ ಮುಂದುವರಿಯಲಿದೆ. ದಡ್ಡಲಕಾಡು ಪ್ರಾಥಮಿಕ ಶಾಲೆಯು ಉನ್ನತೀಕರಿಸಿದ ಶಾಲೆಯಾದ ಕಾರಣ ಪ್ರಸ್ತುತ 8ನೇ ತರಗತಿ ಪ್ರಾಥಮಿಕದಲ್ಲಿದ್ದು, ಮುಂದೆ ಅದು ಪ್ರೌಢಶಾಲೆಗೆ ಸೇರುವ ಸಾಧ್ಯತೆ ಇದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನೂತನ ಪ್ರೌಢಶಾಲೆಗೆ 9ನೇ ತರಗತಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ.

34 ವಿದ್ಯಾರ್ಥಿಗಳ ಸೇರ್ಪಡೆ
ದಡ್ಡಲಕಾಡಿನಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಪ್ರೌಢಶಾಲೆಯ 9ನೇ ತರಗತಿಗೆ ಈಗಾಗಲೇ 34 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ದಡ್ಡಲಕಾಡು ಸರಕಾರಿ ಶಾಲೆಗೆ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದ್ದು, ಈ ವರ್ಷ ಎಲ್ಲ ತರಗತಿಗಳು ಸೇರಿ ಹೆಚ್ಚು ವರಿಯಾಗಿ ಒಟ್ಟು 235 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 785 ದಾಟಿದೆ.

ಶಾಲಾ ಬಸ್‌ ಹಸ್ತಾಂತರ
ನೂತನ ಪ್ರೌಢಶಾಲೆಯ ಉದ್ಘಾಟನೆಯ ಸಂದರ್ಭದಲ್ಲಿ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ನ ದತ್ತು ಸ್ವೀಕಾರ ಯೋಜನೆಯಡಿ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಗೆ ಶಾಲಾ ಬಸ್‌ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಜತೆಗೆ ದಡ್ಡಲಕಾಡು ಶಾಲೆಗೆ ಎರಡು ಬಸ್‌ಗಳ ಹಸ್ತಾಂತರವೂ ನಡೆಯಲಿದೆ ಎಂದು ಟ್ರಸ್ಟ್‌ ತಿಳಿಸಿದೆ.

ವರ್ಗಾವಣೆಯಲ್ಲಿ ಶಿಕ್ಷಕರು
ಮಂಡ್ಯ ಜಿಲ್ಲೆಯಲ್ಲಿ ಮುಚ್ಚಿಹೋಗಿದ್ದ ಪ್ರೌಢಶಾಲೆಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ದಡ್ಡಲಕಾಡಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಪ್ರಸ್ತುತ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದರಲ್ಲಿ ಈ ಪ್ರೌಢಶಾಲೆಗೂ ಶಿಕ್ಷಕರು ಬರುವ ಸಾಧ್ಯತೆ ಇದೆ. ಇಲ್ಲಿನ ಹೊಸದಾಗಿ 9ನೇ ತರಗತಿ ಪ್ರಾರಂಭಗೊಳ್ಳಲಿದೆ.
-ಜ್ಞಾನೇಶ್‌, ಕ್ಷೇತ್ರ
ಶಿಕ್ಷಣಾಧಿಕಾರಿ, ಬಂಟ್ವಾಳ

ಷರತ್ತಿನೊಂದಿಗೆ ಶಾಲೆ
ದಡ್ಡಲಕಾಡು ಶಾಲೆಯಲ್ಲಿ ಸೂಕ್ತ ಕಟ್ಟಡ ವ್ಯವಸ್ಥೆಗಳ ಇದ್ದ ಕಾರಣದಿಂದಲೇ ಪ್ರಸ್ತುತ ಪ್ರೌಢಶಾಲೆ ಮಂಜೂರಾಗಿದೆ. ಶಿಕ್ಷಣ ಇಲಾಖೆ ಈ ಷರತ್ತಿನಿಂದಲೇ ಪ್ರೌಢಶಾಲೆ ಮಂಜೂರಾಗಿದ್ದು, ಮುಚ್ಚಿದ್ದ ಶಾಲೆಯನ್ನು ಸ್ಥಳಾಂತರ ಮಾಡುವಾಗ ಕಟ್ಟಡಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ಹೇಳುತ್ತದೆ.
-ಪ್ರಕಾಶ್‌ ಅಂಚನ್‌, ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ದಡ್ಡಲಕಾಡು.

ದಡ್ಡಲಕಾಡು ಸರಕಾರಿ ಶಾಲೆ.

ಜ ಕಿರಣ್‌ ಸರಪಾಡಿ‌R

Advertisement

Udayavani is now on Telegram. Click here to join our channel and stay updated with the latest news.

Next