ಬೀದರ್: ಹೈ-ಕ ವಿಮೋಚನೆಗಾಗಿ ರಜಾಕಾರರ ಕ್ರೌರ್ಯದಿಂದಾಗಿ ಹತ್ಯಾಕಾಂಡದ ಘಟನೆಗೆ ಸಾಕ್ಷಿಯಾಗಿದ್ದ ಜಿಲ್ಲೆಯ ಗೋರ್ಟಾ (ಬಿ) ಗ್ರಾಮದಲ್ಲಿ ರವಿವಾರ ಭಾರತವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿ ಮತ್ತು ಹುತಾತ್ಮರ ಸ್ಮಾರಕ ಲೋಕಾರ್ಪಣೆಗೊಂಡಿತು. ಎಂಟು ವರ್ಷದ ಹಿಂದೆ ಶಂಕು ಸ್ಥಾಪನೆ ನೆರವೇರಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದರು.
ಭಾರತ ಸ್ವಾತಂತ್ರ ನಂತರವೂ ಹೈದ್ರಾಬಾದ ನಿಜಾಮ ಆಡಳಿತಕ್ಕೆ ಸೇರಿದ ಈಗಿನ ಕ.ಕ ಭಾಗ 13 ತಿಂಗಳ ಸಂಘರ್ಷದ ಬಳಿಕ ನಿಜಾಮರಿಂದ ಮುಕ್ತಿ ಪಡೆದಿತ್ತು. ಆ ವೇಳೆ ಗೋರ್ಟಾದಲ್ಲಿ 200ಕ್ಕೂ ಹೆಚ್ಚು ಜನರ ಹತ್ಯೆಯಿಂದ 2ನೇ ಜಲಿಯನ್ ವಾಲಾಬಾಗ್ ಎನಿಸಿಕೊಂಡಿತು. ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲರ ದಿಟ್ಟ ನಿರ್ಧಾರದಿಂದ ಈ ಭಾಗ ಸ್ವಾತಂತ್ರ್ಯಗೊಂಡಿತ್ತು. ಹಾಗಾಗಿ ಹತ್ಯಾಕಾಂಡದಲ್ಲಿ ಮಡಿದವರ ಸ್ಮರಣೆಗಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ಮತ್ತು ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ ಸರ್ದಾರ್ ಪಟೇಲ್ ಪ್ರತಿಮೆ ಸ್ಥಾಪನೆ ಸ್ಥಾಪಿಸಿದೆ.
ಗೋರ್ಟಾ (ಬಿ)ದ ಹೊರವಲಯದ 2 ಎಕರೆ ಪ್ರದೇಶದಲ್ಲಿ 35 ಅಡಿ ಎತ್ತರದ ಸ್ಮಾರಕ, 11 ಅಡಿ ಎತ್ತರದ ಪಟೇಲ್ ಪ್ರತಿಮೆ ಮತ್ತು 103 ಅಡಿ ದ್ವಜ ಸ್ತಂಭ ಸ್ಥಾಪಿಸಲಾಗಿದೆ. ಮೋರ್ಚಾದ ಕನಸಿನ ಯೋಜನೆಗೆ 2014ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಆಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಲೋಕಾರ್ಪಣೆ ಮಾಡಿದರು. ನಿಜಾಮ್ ಆಡಳಿತದಿಂದ ಮುಕ್ತಿಗಾಗಿ ವೀರ ಮರಣವನ್ನಪ್ಪಿದ್ದವರಿಗೆ ಗೌರವ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಜೀವನದ ಮಹತ್ವಪೂರ್ಣ ದಿನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಎರಡಡಿ ಎತ್ತರದ ರಾಷ್ಟ್ರ ಧ್ವಜ ಹಾರಾಟಕ್ಕಾಗಿ ರಜಾಕಾರರು ಕ್ರೌರ್ಯ ಮೆರೆದಿದ್ದ ಜಾಗದಲ್ಲಿ ಇಂದು 103 ಅಡಿ ಎತ್ತರದ ಧ್ವಜ ಹಾರಿಸಲಾಗಿದೆ. ಸರ್ದಾರ್ ಪಟೇಲ್‌ರು ದಿಟ್ಟ ನಿರ್ಧಾರದಿಂದ ಹೈದ್ರಾಬಾದ್ ಪ್ರಾಂತ್ಯ ಸ್ವಾತಂತ್ರ್ಯದ ಗಾಳಿ ಉಸಿರಾಡಬೇಕಾಯಿತು. ವಿಮೋಚನೆಯ ಇತಿಹಾಸವನ್ನು ತಿಳಿಪಡಿಸುವ ದಿಸೆಯಲ್ಲಿ ಯುವ ಮೋರ್ಚಾ ಪುತ್ಥಳಿ ಮತ್ತು ಸ್ಮಾರಕ ನಿರ್ಮಾಣ ಕಾರ್ಯ ಮಾಡಿದೆ. ಆದರೆ, ಕಾಂಗ್ರೆಸ್ ಮತ ಬ್ಯಾಂಕ್ ಆಸೆಗೆ ಹುತಾತ್ಮರನ್ನು ಸ್ಮರಿಸುವ ಯಾವುದೇ ಕೆಲಸ ಮಾಡಲಿಲ್ಲ ಎಂದು ಹರಿಹಾಯ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವ ಪ್ರಭು ಚವ್ಹಾಣ, ಹೈದ್ರಾಬಾದ್ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ, ಮುಖಂಡ ಇಟಿಲಾ ರಾಜೇಂದ್ರ, ಕೇಶವ ಕಾರ್ಯ ಸಂವರ್ಧನ ಸಮಿತಿ ಪ್ರಮುಖ ಮಾರುತಿರಾವ್, ಸಂಸದ ಉಮೇಶ ಜಾಧವ, ಶಾಸಕರಾದ ಶರಣು ಸಲಗರ, ಅವಿನಾಶ ಜಾಧವ, ಎನ್. ರವಿಕುಮಾರ, ತುಳಸಿ ಮುನಿರಾಜು, ರಘುನಾಥ ಮಲ್ಕಾಪುರೆ, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಮತ್ತಿತರರು ವೇದಿಕೆಯಲ್ಲಿದ್ದರು.