Advertisement

ಬೇಬಿಬೆಟ್ಟದ ಭಾರಿ ದನಗಳ ಜಾತ್ರೆಗೆ ಚಾಲನೆ

07:45 AM Mar 05, 2019 | |

ಪಾಂಡವಪುರ: ಪುರಾಣ ಪ್ರಸಿದ್ಧ ತಾಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವಕ್ಕೆ  ಮಹಾ ಶಿವರಾತ್ರಿ ಹಬ್ಬದಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಚಾಲನೆ ನೀಡಿದರು.

Advertisement

ಬೇಬಿ ಗ್ರಾಮದ ಶ್ರೀ ತ್ರಿನೇತ್ರ ಸ್ವಾಮೀಜಿ, ಬೇಬಿಬೆಟ್ಟದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರ ಸಮ್ಮುಖದಲ್ಲಿ ಸಚಿವ ಸಿ.ಎಸ್‌.ಪುಟ್ಟರಾಜು ಜಾತ್ರಾ ಮಹೋತ್ಸೋವದಲ್ಲಿ ಪ್ರತ್ಯೇಕವಾಗಿ ಆಯೋಜಿಸಿದ್ಧ ಕೃಷಿ, ಆರೋಗ್ಯ, ತೋಟಗಾರಿಕೆ, ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ಧ  ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ರಾಸುಗಳ ಮೆರವಣಿಗೆ: ಪ್ರಸಿದ್ಧ ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ರಾಸುಗಳನ್ನು ಕಟ್ಟಲಾಗಿದ್ದು, ರೈತರು ತಮ್ಮ ರಾಸುಗಳನ್ನು ಮೆರವಣಿಗೆ ಮೂಲಕ ಜಾತ್ರೆಗೆ ಕರೆತಂದರು. ಬೇಬಿಬೆಟ್ಟದ ವಿಶಾಲ ಆವರಣದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಹಳ್ಳಿಕಾರ್‌ ನಾಟಿ ಎತ್ತು ಒಳಗೊಂಡಂತೆ ವಿವಿಧ ತಳಿಯ ಎತ್ತುಗಳು ಮಾರಾಟ ಹಾಗೂ ಪ್ರದರ್ಶನಕ್ಕೆ ಸಿದ್ಧಗೊಂಡಿದ್ದವು.

ರಾಸುಗಳ ಖರೀದಿ ಜೋರು: ರೈತರು ತಾವೇ ಹುಲ್ಲನ್ನು ಸಂಗ್ರಹಿಸಿಕೊಂಡಿದ್ದಾರೆ. ಆದರೆ ರಾಸುಗಳಿಗೆ ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಉತ್ತಮ ರಾಸುಗಳನ್ನು ಖರೀದಿಸಲು ರೈತರು ಜಾತ್ರೆಗೆ ಆಗಮಿಸಿ ರಾಸುಗಳನ್ನು ಖರೀದಿಸು ಭರಾಟೆ ಜೋರಾಗಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಬೇಬಿಬೆಟ್ಟದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಬೇಬಿಬೆಟ್ಟದ ಮೇಲಿರುವ ಶ್ರೀ ಸಿದ್ಧಲಿಂಗೇ ಶ್ವರಸ್ವಾಮಿ ದೇವಸ್ಥಾನಕ್ಕೆ ಭಕ್ತಾದಿಗಳು ನೂರಾರು ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದರು. 

Advertisement

ದೇವರ ದರ್ಶನ ಪಡೆದ ಭಕ್ತರು: ಉಪವಿಭಾಗಾಧಿಕಾರಿ ವಿ.ಆರ್‌.ಶೈಲಜಾ, ತಹಶೀಲ್ದಾರ್‌ ಪ್ರಮೋದ ಎಲ್‌.ಪಾಟೀಲ್‌ ಬೇಬಿಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವರ ದರ್ಶನ ಪಡೆದು ಪುನೀತರಾದರು. ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವದ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು  ವಹಿಸಿಕೊಂಡು ವಿಶೇಷವಾಗಿ ಜಾತ್ರಾ ಮಹೋತ್ಸವವನ್ನು ನಡೆಸಲು ಮುಂದಾಗಿದ್ದಾರೆ. 

ಬೇಬಿಬೆಟ್ಟದ ಭಾರಿ ದನಗಳ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಐದು ಸಾವಿರಕ್ಕೂ ಹೆಚ್ಚು ಎತ್ತುಗಳು ಆಗಮಿಸಲಿವೆ. ಸಾವಿರಾರು ಜೋಡಿ ಎತ್ತುಗಳನ್ನು ರೈತರು ಖರೀದಿಸುವರು. ಈ ಜಾತ್ರೆಯಲ್ಲಿ ರಾಸುಗಳ ದರ್ಬಾರು ಪ್ರಮುಖ ಅಂಶವಾಗಿದೆ. ಒಂದು ಉತ್ತಮ ಜೋಡಿ ಎತ್ತು ಕನಿಷ್ಠ  50 ಸಾವಿರ ರೂ.ಗಳಿಂದ ಗರಿಷ್ಠ 5 ಲಕ್ಷ ರೂ. ತನಕ ಮಾರಾಟವಾಗುತ್ತವೆ. 

ಜಾತ್ರೆಗೆ ಆಗಮಿಸುವ ರೈತರಿಗೆ ಜಾತ್ರಾ ಸಮಿತಿ ವತಿಯಿಂದ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಉಪವಿಭಾಗಾಧಿಕಾರಿ ವಿ.ಆರ್‌.ಶೈಲಜಾ ಅವರಿಗೆ ಹೆಚ್ಚು ಜವಾಬ್ದಾರಿ ನೀಡಲಾಗಿದೆ. ಜಾತ್ರೆಗಾಗಿ ವಿವಿಧ ಸ್ಥಳಗಳಿಂದ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ತಮ ರಾಸುಗಳಿಗೆ ಜಾತ್ರಾ ಸಮಿತಿ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಜಾತ್ರಾ ಸಮಿತಿ ಪ್ರಕಟಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next