ಬೆಂಗಳೂರು: ದಲಿತ ಸಂರಕ್ಷಕ ಸಮಿತಿ ಸಂಘಟನೆ ಹೆಸರಿನಲ್ಲಿ ಮೀಟರ್ ಬಡ್ಡಿಗೆ ಹಣ ನೀಡಿ ಅಮಾಯಕರಿಗೆ ಕಿರುಕುಳ ನೀಡುತ್ತಿದಲ್ಲದೆ, ನಿರ್ಮಾಣ ಹಂತದ ಕಟ್ಟಡದ ಬಿಲ್ಡರ್ ಮತ್ತು ಇಂಜಿನಿಯರ್‌ಗಳಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಾಲಕೃಷ್ಣ ಕೆ.ವಿ ಅಲಿಯಾಸ್ ಲಯನ್ ಬಾಲಕೃಷ್ಣ ಹಾಗೂ ಹುಬ್ಬಳ್ಳಿಯ ದಾದಾಪೀರ್ ಹಲಗೇರಿ ಮೊಹಮ್ಮದ್ ಇಸಾಕ್ ಬಂಧಿತರು. ಆರೋಪಿಗಳ ಪೈಕಿ ಬಾಲಕೃಷ್ಣ ದಲಿತ ಸಂರಕ್ಷಕ ಸಮಿತಿ ಹೆಸರಿನ ಸಂಘಟನೆ ಸ್ಥಾಪಿಸಿಕೊಂಡಿದ್ದು, ಮನೆಯಲ್ಲೇ ಕಚೇರಿ ಹೊಂದಿದ್ದಾನೆ.
ಈ ಮೂಲಕ ಬಡ್ಡಿ ವ್ಯವಹಾರ ನಡೆಸುತ್ತ, ಸಾರ್ವಜನಿಕರಿಗೆ ಅಧಿಕ ಬಡ್ಡಿಗೆ ಹಣ ಕೊಟ್ಟಿದ್ದ. ಈ ಮಧ್ಯೆ 2014ರಲ್ಲಿ ರಾಜು ಎಂಬುವರಿಗೆ ಬಿಡಿಎ ನಿವೇಶನ ಕೊಡಿಸುವುದಾಗಿ ಹೇಳಿ 5 ಲಕ್ಷ ರೂ. ಪಡೆದು, ನಿವೇಶನ ಕೊಡಿಸದೆ ವಂಚಿಸಿದ್ದ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಗಂಭೀರ ಸ್ವರೂಪವಾದರಿಂದ ಪ್ರಕರಣವನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದರು.
ಇದೀಗ ಪ್ರಕರಣದ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು, ಅ.23ರಂದು ಇಂದಿರಾನಗರದ ಎ.ನಾರಾಯಣಪುರದಲ್ಲಿರುವ ಬಾಲಕೃಷ್ಣ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ 1.28 ಲಕ್ಷ ರೂ. ನಗದು, ಏರ್‌ಗನ್ ಮತ್ತು ಏರ್ ಪಿಸ್ತೂಲ್, ಹಲವು ಚೆಕ್‌ಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈತನ ವಿಚಾರಣೆ ವೇಳೆ ಕೆಲ ಮಹತ್ವದ ವಿಚಾರ ಬೆಳಕಿಗೆ ಬಂದಿದ್ದು, ಹುಬಳ್ಳಿಯ ದಾದಾಪೀರ್ ಬಗ್ಗೆ ಹೇಳಿದ್ದ ಎಂದು ಪೊಲೀಸರು ಹೇಳಿದರು.
ಆರ್‌ಟಿಐ ದುರ್ಬಳಕೆ: ಆರೋಪಿ ಬಾಲಕೃಷ್ಣ ತನ್ನ ಸಹಚರನಾದ ಹುಬ್ಬಳ್ಳಿಯ ದಾದಾಪೀರ್ ಹಲಗೇರಿ ಜತೆ ಸೇರಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಮೂಲಕ ಮಾಹಿತಿ ಪಡೆಯುತ್ತಿದ್ದರು. ಬಳಿಕ ಕಟ್ಟಡಕ್ಕೆ ಸಂಬಂಧಪಟ್ಟ ಎಂಜಿನಿಯರ್ ಮತ್ತು ಮಾಲೀಕರಿಗೆ ಬೆದರಿಸಿ, ಹಣ ಸುಲಿಗೆ ಮಾಡುತ್ತಿದ್ದರು ಎಂದು ತಿಳಿದು ಬಂದಿತ್ತು. ಈ ಹಿನ್ನೆಯಲ್ಲಿ ನ.3ರಂದು ದಾದಾಪೀರ್‌ನನ್ನು ಬಂಧಿಸಲಾಗಿದೆ ಎಂದು ಸಿಸಿಪಿ ಪೊಲೀಸರು ಹೇಳಿದರು.