Advertisement
ರಂಗದಲ್ಲಿ ರಾಜನಾಗಿ ಒಡ್ಡೋಲಗದಲ್ಲಿ ಮೆರೆದ ಅವರ ಮನೆಯಲ್ಲೀಗ ಮೌನದ ಒಡ್ಡೋಲಗ ನಡೆಯುತ್ತಿದೆ. ಕಲಿಯಬೇಕೆಂಬ ಹಂಬಲದ ಮಗಳು ಉದ್ಯೋಗ ಹುಡುಕಾಟದಲ್ಲಿದ್ದಾರೆ. ಮನೆಗಾಗಿ ಮಾಡಿದ ಸಾಲದ ಕಂತು ಮನೆಯಷ್ಟೇ ದೊಡ್ಡ ಗಾತ್ರದಲ್ಲಿದೆ.ಕಳೆದ ವರ್ಷ ಜು.31ರಂದು ವಾಮದಪದವು ಸಮೀಪ ಚಿಕ್ಕಮೇಳದಲ್ಲಿ ವಿಶ್ರಾಂತಿಯಲ್ಲಿದ್ದ ಶೆಟ್ಟರು ಚಿರವಿಶ್ರಾಂತಿಗೆ
ಜಾರಿದ್ದರು. ಅನಿರೀಕ್ಷಿತ ಆಘಾತದಿಂದ ಅವರ ಕುಟುಂಬ ಕಂಗಾಲಾಗಿದೆ. ಬೆಳ್ತಂಗಡಿ ಯಿಂದ ಕಿಲ್ಲೂರಿಗೆ ಹೋಗುವ
ರಸ್ತೆಯಲ್ಲಿ ಸಿಗುವ ನಾವೂರು ಎಂಬಲ್ಲಿನ ಶೆಟ್ಟರ ಮನೆಗೆ ಉದಯವಾಣಿ ಪ್ರತಿನಿಧಿ ತೆರಳಿದಾಗ ಅವರ ಕನಸಿನ ಮನೆಯಲ್ಲಿ ನೀರವ ಆವರಿಸಿತ್ತು. ಪತ್ನಿ ಯಶೋದಾ ಶೆಟ್ಟಿ, ಇಲ್ಲಿನ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ ಪುತ್ರಿ ಶ್ರೀರಕ್ಷಾ ಅವರ ಕಣ್ಣಾಲಿಗಳಲ್ಲಿ ಶೆಟ್ಟರ ನೆನಪುಗಳ ಮೆಲುಕು ಹಾಕಿದಾಗ ಕಣ್ಣುಗಳಲ್ಲಿ ನೀರು ಬಸಿದು ಮೌನದ ಕಟ್ಟೆಯೊಡೆದಿತ್ತು. ಗೃಹಪ್ರವೇಶಕ್ಕೆ ಮುನ್ನ
ಸುಣ್ಣ ಬಳಿದ, ಬಣ್ಣವಿನ್ನೂ ಬಳಿಯ ಬೇಕಿದ್ದ ಈ ಮನೆಯ ಗೃಹಪ್ರವೇಶ ಇನ್ನೆರಡು ತಿಂಗಳಲ್ಲಿ ನಡೆಯಬೇಕಿತ್ತು. ಉದ್ಯೋಗಕ್ಕೆಂದು ಮೂರು ತಿಂಗಳ ಹಿಂದೆ ವಿದೇಶಕ್ಕೆ ಹೋಗಿದ್ದ ಪುತ್ರ ಶ್ರೀಜಿತ್ ಶೆಟ್ಟಿ (21) ಅವರ ಅನುಕೂಲವಾಗುವ ದಿನಕ್ಕಾಗಿ ಹುಡುಕಾಟದಲ್ಲಿದ್ದರು. ರಂಗಸ್ಥಳವೇ ಅನ್ನದ ಬಟ್ಟಲು, ಹೆಜ್ಜೆಗಾರಿಕೆಯೇ ಅನ್ನದ ಅಗಳು, ಮಾತುಗಾರಿಕೆಯೇ ಮೇಲೋಗರವಾಗಿದ್ದ ಅವರಿಗೆ ಯಕ್ಷಗಾನ ಬಿಟ್ಟರೆ ಬೇರೆ ಜೀವನೋಪಾಯ ಇರಲಿಲ್ಲ. 32
ವರ್ಷಗಳ ಯಕ್ಷ ತಿರುಗಾಟದಲ್ಲಿ ಅಷ್ಟೋ ಇಷ್ಟೋ ದುಡಿದುದರ ಜತೆಗೆ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು. ಮಕ್ಕಳನ್ನು ಓದಿಸಿದ್ದರು. ಮಗ ಉದ್ಯೋಗ ನಿಮಿತ್ತ ಸೌದಿಗೆ ಹೋದ ಕಾರಣ ಈ ವರ್ಷದಿಂದ ಮೇಳದ ತಿರುಗಾಟಕ್ಕೆ
ವಿಶ್ರಾಂತಿ ಬಯಸಿದ್ದರು. ಮಳೆಗಾಲದಲ್ಲಿ ಚಿಕ್ಕಮೇಳದ ತಿರುಗಾಟ ನಡೆಸುತ್ತಿದ್ದಾಗ ವಿಧಿ ತನ್ನ ಕರಾಳ ಹಸ್ತವನ್ನು ಹಣೆಬರಹದ ಮೇಲೆ ಆಡಿಸಿಬಿಟ್ಟಿತು.
Related Articles
ನಾವೂರಿನ ಪೆಲತ್ತಕಟ್ಟೆ ಎಂಬಲ್ಲಿ ದಿ| ಕೃಷ್ಣಶೆಟ್ಟಿ – ಲಕ್ಷ್ಮೀ ಶೆಡ್ತಿ ದಂಪತಿಯ ಮೂವರು ಮಕ್ಕಳ ಪೈಕಿ ಹಿರಿಯವನಾಗಿ
ಜನಿಸಿದ ಗಂಗಾಧರ ಅವರು ನಾವೂರು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಯಕ್ಷಗಾನದೆಡೆಗೆ ಆಕರ್ಷಿತರಾಗಿ ಧರ್ಮಸ್ಥಳ ಯಕ್ಷಗಾನ ಲಲಿತಕಲಾ ಕೇಂದ್ರದಲ್ಲಿ ಕೆ. ಗೋವಿಂದ ಭಟ್ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಯಕ್ಷಗಾನದ ನಾಟ್ಯ ಕಲಿತರು. ತನ್ನ ಸೋದರ ಸಂಬಂಧಿ ಕಲಾವಿದ ಬೆಳ್ಳಾರೆ ವಿಶ್ವನಾಥ ರೈಯವರ ಒತ್ತಾಸೆಯಿಂದ ಮೇಳದ ತಿರುಗಾಟ ಆರಂಭಿಸಿ ಕದ್ರಿ (3), ಬಪ್ಪನಾಡು (3), ಅರುವ (2), ಕುಂಬ್ಳೆ (3), ಕುಂಟಾರು (1), ಮಂಗಳಾದೇವಿ (4), ಬಾಚಕೆರೆ (ಅತಿಥಿ ಕಲಾವಿದರಾಗಿ) ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿ, ಬಳಿಕ ಬಪ್ಪನಾಡು ಮೇಳದ ತಿರುಗಾಟದಲ್ಲಿದ್ದರು.
Advertisement
ವೇಷಗಳುಮೂಲತಃ ಪುಂಡುವೇಷಧಾರಿ ಯಾಗಿದ್ದ ಶೆಟ್ಟರು, ಅಭಿಮನ್ಯು, ಕುಶ, ಬಭ್ರುವಾಹನ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧಿ
ಗಳಿಸಿದ್ದರು. ಅಯ್ಯಪ್ಪ, ದೇವೇಂದ್ರ, ಅರ್ಜುನ, ಕರ್ಣ, ಹಂಸಧ್ವಜ, ದಾರಿಕಾಸುರ, ವಿಷ್ಣು, ಮಧು ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ತುಳು ಯಕ್ಷಗಾನ ರಂಗದಲ್ಲಿ ಪೆರುಮಳೆ ಬಲ್ಲಾಳ, ಮಲ್ಲಯ್ಯ ಬುದ್ಧಿವಂತ, ಕಾಂತಬಾರೆ, ಶಂಕರಾಳ್ವ, ಕೋಟಿ, ದೇವುಪೂಂಜ ಪಾತ್ರಗಳನ್ನು ಭಾವಪ್ರಧಾನವಾಗಿ, ಮನೋಜ್ಞವಾಗಿ
ನಿರ್ವಹಿಸುವುದರಲ್ಲಿ ನಿಷ್ಣಾತರಾಗಿದ್ದರು ಎಂದು ಯಕ್ಷಗಾನ ಕಲಾವಿದ, ಸಂಘಟಕ ಮೂಡಬಿದಿರೆ ಶಾಂತಾರಾಮ ಕುಡ್ವ
ಸ್ಮರಿಸುತ್ತಾರೆ. ಕಲಿಕೆಗೆ ಬೇಕಿದೆ ನೆರವು
ಸ್ವಸಹಾಯ ಸಂಘಗಳ ಮೂಲಕ ಮನೆ ಕಟ್ಟಲು ಸಾಲ ತೆಗೆದ ಶೆಟ್ಟರು ವಾರಕ್ಕೆ 2,000 ರೂ. ಪಾವತಿಗೆ ಕಷ್ಟ ಎಂದು ನಾವೂರು ಸಿಎ ಬ್ಯಾಂಕಿನಲ್ಲಿ ಸಾಲ ಪಡೆದು ಮನೆ ಕಟ್ಟಿಸಿದ್ದರು. ಈಗ ಮೂರು ತಿಂಗಳಿಗೆ 35 ಸಾವಿರ ರೂ. ಸಾಲದ ಕಂತು ಬರುತ್ತಿದೆ. ಪುತ್ರಿಯ ಬಿಕಾಂ ಪದವಿ ಅಂತಿಮ ಹಂತದಲ್ಲಿದ್ದು, ಎಂಕಾಂ ಅಥವಾ ಸಿಎ ಮಾಡುವ ಉತ್ಸಾಹದಲ್ಲಿದ್ದಾರೆ. ಮಗನಿಗೂ ಊರಿಗೆ ಕಳುಹಿಸುವಷ್ಟು ದೊಡ್ಡ ಸಂಬಳದ ಕೆಲಸ ಇಲ್ಲ. ಐಟಿಐ ಮಾಡಿ ವಿದೇಶಕ್ಕೆ ಹೋಗಿ ಪೈಂಟ್ ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ. ನಾನು ಸ್ಥಳೀಯ ಶಾಲೆಯಲ್ಲಿ 2,100 ರೂ. ಸಂಬಳಕ್ಕೆ ಬಿಸಿಯೂಟ ಕಾರ್ಯಕರ್ತೆ ಯಾಗಿದ್ದೇನೆ. ಮನೆಗಾಗಿ ಸಾಲ ಮಾಡಬಾರದು ಎಂದೇ ಚಿಕ್ಕಮೇಳದ ತಿರುಗಾಟ ಮಾಡಿದರು. ರಾತ್ರಿ, ಹಗಲು ಯಕ್ಷಗಾನವೆಂದೇ ಜೀವನ ತೇಯ್ದರು ವಿನಾ ಕನಸಿನ ಮನೆಯಲ್ಲಿ ಬಾಳುವ ಯೋಗ ಅವರಿಗಿಲ್ಲವಾಯ್ತು ಎಂದು ಯಶೋದಾ ಹೇಳುತ್ತಿದ್ದರೆ ಒತ್ತರಿಸಿ ಬರುತ್ತಿದ್ದ ಕಣ್ಣೀರಿಗೆ ಆಸರೆಯಾದುದು ಮಗಳ ಕೈ ಬೆರಳುಗಳು. ಶ್ರೀರಕ್ಷಾ ಅವರ ಶಿಕ್ಷಣದ ಕನಸಿಗೆ ಆಸರೆಯಾಗುವವರಿಗೆ: ಯಶೋದಾ, ಸಿಂಡಿಕೇಟ್ ಬ್ಯಾಂಕ್, ಬಂಗಾಡಿ ಶಾಖೆ, ಅಕೌಂಟ್ ನಂಬರ್: 01982200048918. ಐಎಫ್‌ಎಸ್‌ಸಿ : ಎಸ್‌ವೈಎನ್‌ಬಿ0000198. ಮೊ: 9902593707. ಲಕ್ಷ್ಮೀ ಮಚ್ಚಿನ