Advertisement

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

12:52 AM Nov 14, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣ ಪ್ರಕರಣದ ಸಂಬಂಧ ರಾಯಚೂರು ಸಂಸದ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಕುಮಾರ್‌ ನಾಯಕ್‌ ಮತ್ತು ಸಿದ್ದರಾಮಯ್ಯ ಅವರ ಖಾಸಗಿ ಆಪ್ತ ಸಹಾಯಕ ಎನ್ನಲಾದ ಎಸ್‌ಜಿ ದಿನೇಶ್‌ ಕುಮಾರ್‌ ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ.) ತೀವ್ರ ವಿಚಾರಣೆ ನಡೆಸಿದೆ.

Advertisement

ರಾಯಚೂರು ಕಾಂಗ್ರೆಸ್‌ ಸಂಸದರಾಗಿರುವ ಕುಮಾರ್‌ ನಾಯಕ್‌ ಮುಡಾ ಹಗರಣ ನಡೆದ ಸಂದರ್ಭ ಮೈಸೂರು ಡಿಸಿಯಾಗಿದ್ದರು.

ಇನ್ನು ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ ಕುಮಾರ್‌ ಅಲಿಯಾಸ್‌ ಎಸ್‌.ಜಿ. ದಿನೇಶ್‌ ಕುಮಾರ್‌ 2022ರಲ್ಲಿ ಖಾತೆಗಾಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿ ಹಾಕಲಾಗಿದ್ದ ಅರ್ಜಿಗೆ ಸಹಿ ಹಾಕಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಬ್ಬರಿಗೂ ಇ.ಡಿ. ಸಮನ್ಸ್‌ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಬುಧವಾರ ಇ.ಡಿ. ಕಚೇರಿಗೆ ಇಬ್ಬರೂ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಕುಮಾರ್‌ ನಾಯಕ್‌ಗೆ ಇಡಿ ಗ್ರಿಲ್‌
ಕುಮಾರ್‌ ನಾಯಕ್‌ ಅವರನ್ನು ಸುಮಾರು ಆರೂವರೆ ತಾಸುಗಳ ಕಾಲ ವಿಚಾರಣೆ ನಡೆಸಿದ್ದ ಇ.ಡಿ. ಅಧಿಕಾರಿಗಳು ಅಂದು ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಮುಡಾ ನಿವೇಶನದ ಸಂಬಂಧ ನಡೆದಿದ್ದ ಬೆಳವಣಿಗೆಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಕುಮಾರ್‌ ನಾಯಕ್‌ ಮೈಸೂರಿನಲ್ಲಿ 2002ರಿಂದ 2005ರ ವರೆಗೆ 3 ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿದ್ದರು.

ಕುಮಾರ್‌ ನಾಯಕ್‌ ಅವಧಿಯಲ್ಲಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡಲಾಗಿತ್ತು. ಮುಡಾ ನೋಟಿಫೈ ಮಾಡಿ ಜಮೀನು ವಶಕ್ಕೆ ಮುಂದಾಗಿತ್ತು. ಆಗ ಕುಮಾರ್‌ ನಾಯಕ್‌ ಅವರಿಗೆ ಭೂ ಸ್ವಾಧೀನ ಕೈಬಿಡುವಂತೆ ದೇವರಾಜು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಮುಡಾ ಮತ್ತು ತಹಶೀಲ್ದಾರ್‌ಗೆ ಸ್ಥಳ ಪರಿಶೀಲಿಸುವಂತೆ ಕುಮಾರ್‌ ನಾಯಕ್‌ ಸೂಚನೆ ನೀಡಿದ್ದರು. ಸ್ಥಳ ಪರಿಶೀಲನೆ ಮಾಡದೆಯೇ ತಹಶೀಲ್ದಾರ್‌ ವರದಿ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. 2004ರಲ್ಲಿ ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜು ಭೂಮಿಯನ್ನು ಮಾರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ್‌ ನಾಯಕ್‌ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿ ಈ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

Advertisement

ಸಿಎಂ ಖಾಸಗಿ ಆಪ್ತ ಕಾರ್ಯದರ್ಶಿ
ಎಸ್‌.ಜಿ. ದಿನೇಶ್‌ ಕುಮಾರ್‌ ಮೈಸೂರಿನಲ್ಲಿ ಸಿಎಂಗೆ ಸೇರಿದ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಪಾರ್ವತಿ ಪರವಾಗಿ ಅರ್ಜಿ ವಿಲೇವಾರಿ ಮಾಡಿದ್ದರು. ಇವರು ಅರ್ಜಿ ಹಾಕಿ ಪಾರ್ವತಿಯವರ ಹೆಸರಿಗೆ ನಿವೇಶನ ಮಾಡಿಕೊಟ್ಟಿದ್ದರು ಎನ್ನಲಾಗಿದೆ. 2022ರಲ್ಲಿ ಖಾತೆಗಾಗಿ ಪಾರ್ವತಿಯವರ ಹೆಸರಿನಲ್ಲಿ ಹಾಕಲಾಗಿದ್ದ ಅರ್ಜಿಗೆ ಸಹಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು¤. ಇದೀಗ 14 ಸೈಟ್‌ ವಿಚಾರದ ಸಂಬಂಧ ಇಡಿ ಅಧಿಕಾರಿಗಳು ದಿನೇಶ್‌ ಅವರಿಂದ ಹಲವು ಮಾಹಿತಿ ಕಲೆ ಹಾಕಿ ಬೆವರಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಸಿಎಂ ಪತ್ನಿ ಪಾರ್ವತಿ 13 ಸೈಟ್‌ ಕೇಳಿದ್ದರು ಎನ್ನಲಾಗುತ್ತಿದೆ.

ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ
ವಿಚಾರಣೆ ಬಳಿಕ ರಾಯಚೂರು ಸಂಸದ ಕುಮಾರ್‌ ನಾಯಕ್‌ ಸುದ್ದಿಗಾರರ ಜತೆಗೆ ಮಾತನಾಡಿ, ಇ.ಡಿ. ಅಧಿಕಾರಿಗಳು ಸಮನ್ಸ್‌ ನೀಡಿದ್ದ ಹಿನ್ನೆಲೆಯಲ್ಲಿ ಗೌರವದಿಂದ ಬಂದು ಹಾಜರಾಗಿದ್ದೇನೆ. ಇ.ಡಿ. ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೇನೆ. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಯಾವ ಕೆಲಸ ಮಾಡಿದ್ದೆ ಎಂದು ತಿಳಿಸಿದ್ದೆ. ದಾಖಲೆಗಳ ಮೂಲಕ ಯಾವ ಮಾಹಿತಿ ನೀಡಬೇಕೋ ನೀಡಿದ್ದೇನೆ. ಮತ್ತೆ ನನ್ನನ್ನು ವಿಚಾರಣೆಗೆ ಕರೆದರೆ ಹೋಗುತ್ತೇನೆ. ಏನು ಉತ್ತರ ಕೊಡಬೇಕೋ ಕೊಟ್ಟಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next