Advertisement

ಶೂಟೌಟ್‌ ಪ್ರಕರಣಕ್ಕೆ ರಾಜಕೀಯ ಬಣ್ಣ

11:16 AM Feb 10, 2017 | |

ಬೆಂಗಳೂರು: ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲಿನ ಶೂಟೌಟ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ನಡುವೆ ಪ್ರಕರಣದಲ್ಲಿ ಯಲಹಂಕ ಶಾಸಕ ವಿಶ್ವನಾಥ್‌ ಹೆಸರು ಕೇಳಿ ಬಂದಿದೆ.

Advertisement

ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಮಂತ್ರಿಗಳು ಅಧಿಕಾರಿ ಮಟ್ಟದ ಚರ್ಚೆಗಳನ್ನು ನಡೆಸಿದ್ದಾರೆ. ಆದರೆ, ಶಾಸಕರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಂತೆ ಗೋಚರಿಸುತ್ತಿದೆ.  

ಸದ್ಯ ಪೊಲೀಸರು ತಾವು ವಶಕ್ಕೆ ಪಡೆದಿರುವ ವ್ಯಕ್ತಿಗಳ ಹೆಸರನ್ನು ಪೊಲೀಸರು ಖಚಿತಪಡಿಸಿಲ್ಲ. ಕಡಬರೆಗೆ ಶ್ರೀನಿವಾಸ್‌ ಆಪ್ತ ಕಾಂಗ್ರೆಸ್‌ ಮುಖಂಡ ಟಾಟಾ ರಮೇಶ್‌ ಬೆದರಿಕೆ ಸಂಬಂಧ ಆಡುಗೋಡಿ ರೌಡಿಶೀಟರ್‌ ಲಕ್ಕಸಂದ್ರ ವಿಜಿ, ಬ್ಯಾಟರಾಯನಪುರ ರೌಡಿ ಶೀಟರ್‌ ಕೇಬಲ್‌ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳು ರೌಡಿ ರೋಹಿತ್‌ ಅಲಿಯಾಸ್‌ ಒಂಟೆಯ ಸಹಚರರಾಗಿದ್ದು, ರೋಹಿತ್‌ ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾ ಗಿದೆ. ಬಂಧಿತರಿಂದ ಮಾರಕಾಸ್ತ್ರ ಹಾಗೂ ಪಿಸ್ತೂಲ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್‌ ಮೇಲಿನ ಶೂಟೌಟ್‌ ಪ್ರಕರಣದ ಬಳಿಕ ಆರೋಪಿಗಳು ಗೋವಾಗೆ ತೆರಳಿ ತಲೆ ಮರೆಸಿಕೊಂಡಿದ್ದರು.

ಕಳೆದ ಎರಡು ದಿನಗಳ ಹಿಂದೆ ಬಂಧನಕ್ಕೊಳಗಾಗಿರುವ ರೋಹಿತ್‌ ಮಾಹಿತಿ ಮೇರೆಗೆ ಆರೋಪಿಗಳನ್ನು ಜಿಕೆವಿಕೆ ಬಳಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಬಂಧಿತರಾಗಿರುವ ಸತೀಶ್‌ ಹಾಗೂ ರೌಡಿಗಳಾದ ರೋಹಿತ್‌ ಹಾಗೂ ಸೈಲೆಂಟ್‌ ಸುನೀಲ ನೀಡಿದ ಮಾಹಿತಿ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಶೂಟೌಟ್‌ ಪ್ರಕರಣದ ಸೂತ್ರಧಾರ ಯಾರು ಎಂಬುದರ ಬಗ್ಗೆ ಇನ್ನೂ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. 

Advertisement

ಪೊಲೀಸ್‌ ವಶಕ್ಕೆ: ಇನ್ನು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರೋಹಿತ್‌ ಹಾಗೂ ಸೈಲಂಟ್‌ ಸುನೀಲ್‌ನನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿ ಫೆ.21ರ ವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಬಚ್ಚನ್‌ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಯಲಹಂಕದ ಕೋಗಿಲು ಕ್ರಾಸ್‌ ಬಳಿ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಗಳನ್ನು ಪ್ರಶ್ನಿಸಿದ್ದು, ಅವರಿಂದ ಮಾಹಿತಿ ಪಡೆದಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೂಟೌಟ್‌ನಲ್ಲಿ ವಿಶ್ವನಾಥ್‌ ಪಾತ್ರದ ಬಗ್ಗೆ ಮಾಹಿತಿಯಿಲ್ಲ ಎಂದ ಪರಂ
ಯಲಹಂಕ ಬಳಿ ಕಡಬಗೆರೆ ಶ್ರೀನಿವಾಸ್‌ ಮೇಲೆ ನಡೆದ ಶೂಟ್‌ಔಟ್‌ ಪ್ರಕರಣದಲ್ಲಿ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರ ಪಾತ್ರದ ಬಗ್ಗೆ ಮಾಹಿತಿಯಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಶೂಟ್‌ಔಟ್‌ ಪ್ರಕರಣದ ಹಿನ್ನೆಲೆಯಲ್ಲ ಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾತನಾಡಿದ ಅವರು, “ಶೂಟ್‌ಔಟ್‌ ಪ್ರಕರಣದಲ್ಲಿ ಪೊಲಿಸರು ಸರ್ಚ್‌ ವಾರೆಂಟ್‌ ಪಡೆದು ಆರೋಪಿಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ವಿಶ್ವನಾಥ್‌ ಅವರ ಪಾತ್ರದ ಬಗ್ಗೆ ಮಾಹಿತಿಯಿಲ್ಲ,” ಎಂದರು.

ಮಾದ್ಯಮಗಳ ಎನ್‌ಕೌಂಟರ್‌ಗೆ ನಲುಗಿದ್ದೇನೆ ಎಂದ ವಿಶ್ವನಾಥ್‌ 
ಈ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌, “”ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಎಳೆದು ತರಲಾಗುತ್ತಿದೆ. ಬೇಕಿದ್ದರೇ ನನ್ನನ್ನು ಈಗಲೇ ಮಂಪರು ಪರೀಕ್ಷೆಗೆ ಒಳಪಡಿಸಲಿ. ಪೊಲಿಸರು ನಡೆಸುವ ಎನ್‌ಕೌಂಟರ್‌ಗಿಂತ ಮಾಧ್ಯಮಗಳು ನಡೆಸುತ್ತಿರುವ ಎನ್‌ಕೌಂಟರ್‌ಗೆ ನಲುಗಿ ಹೋಗಿದ್ದೇನೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

ಶಿವಮೊಗ್ಗಕ್ಕೆ ಪೊಲೀಸರ ತಂಡ
ರೌಡಿ ಶೀಟರ್‌ ಕೊರಂಗು ಕೃಷ್ಣನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಹೆಬ್ಬಟು ಮಂಜನ ಇಬ್ಬರು ಸಹಚಚರರನ್ನು ಶಿವಮೊಗ್ಗ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇವರಿಗೂ ಶೂಟೌಟ್‌ ಪ್ರಕರಣಕ್ಕೂ ಸಂಬಂಧವಿರಬಹುದು ಎಂಬ ಹಿನ್ನೆಲೆಯಲ್ಲಿ ಆರೋಪಿ ಗಳನ್ನು ವಿಚಾರಣೆಗೊಳಪಡಿಸಲು ಒಂದು ತಂಡ ಶಿವಮೊಗ್ಗಕ್ಕೆ ತೆರಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next