Advertisement

ಅಪಾಯದಂಚಿನಲ್ಲಿ ಓವರ್‌ಹೆಡ್‌ ಟ್ಯಾಂಕ್ 

11:06 AM Jul 07, 2018 | |

ಎಕ್ಕಾರು : ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ಅರಸು ಪದವು -ಮುಚ್ಚಾರು ರಸ್ತೆಯ ಬದಿ ಯಲ್ಲಿ 2 ವರ್ಷದ ಹಿಂದೆ ನಿರ್ಮಾಣಗೊಂಡ ಓವರ್‌ ಹೆಡ್‌ ಟ್ಯಾಂಕ್‌ನ ಬದಿಯ ಗುಡ್ಡದ ಮಣ್ಣು ಜರಿದ ಕಾರಣ ಟ್ಯಾಂಕ್‌ ಕುಸಿತದಂಚಿನಲ್ಲಿದೆ. ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಲ್ಲಿ ಈ 1ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಬಡಗ ಎಕ್ಕಾರು ಮುಚ್ಚಾರು ರಸ್ತೆಯ ಪಕ್ಕದಲ್ಲಿದ್ದು ಮಳೆಗೆ ಗುಡ್ಡದ ಮಣ್ಣು ಜರಿದು ಹೋಗಿದೆ.

Advertisement

ನೀರು ಸರಬರಾಜು ಇಲ್ಲ!
ಬಡಗ ಎಕ್ಕಾರು ಗ್ರಾಮದ ಜನರಿಗೆ ಈ ಟ್ಯಾಂಕ್‌ನಿಂದ ಕುಡಿಯುವ ನೀರು ಸರಬ ರಾಜು ಮಾಡಲು ಈ ಟ್ಯಾಂಕ್‌ ನಿರ್ಮಾಣಗೊಂಡಿದೆ. ಆದರೆ 2 ವರ್ಷ ಆದರೂ ಈ ಟ್ಯಾಂಕ್‌ಗೆ ಇನ್ನೂ ನೀರು ಸರಬರಾಜು ಆಗಿಲ್ಲ. ಮಳವೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಮರವೂರು ಸಿದ್ದಾರ್ಥನಗರದಲ್ಲಿ 3ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌, ಬಜಪೆ ತಾರಿಕಂಬÛದಲ್ಲಿ 2ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌, ಮೂಡುಶೆಡ್ಡೆ, ಕೆಂಜಾರು ಹಾಗೂ ಬಡಗ ಎಕ್ಕಾರಿನಲ್ಲಿ ತಲಾ 1ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕನ್ನು ನಿರ್ಮಿಸಲಾಗಿತ್ತು. ಅರಸು ಪದವಿನಲ್ಲಿ 1ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗಿದ್ದರೂ, ಅದು ಎತ್ತರ ಪ್ರದೇಶವಾದ ಕಾರಣ ಅಲ್ಲಿ ಟ್ಯಾಂಕ್‌ ಗೆ ನೀರು ತುಂಬಲು ಕಷ್ಟವಾದ ಕಾರಣ ಕೆಳಗೆ ಮುಚ್ಚಾರು ರಸ್ತೆಯ ಬದಿಯಲ್ಲಿ ಇನ್ನೊಂದು ಟ್ಯಾಂಕಿ ನಿರ್ಮಿಸಲಾಗಿತ್ತು. 

ಪಿಲ್ಲರ್‌ಗಳು ಕುಸಿಯುವ ಭೀತಿ
ಮಳೆಗೆ ರಸ್ತೆಯಿಂದ ಎತ್ತರದಲ್ಲಿದ್ದ ಟ್ಯಾಂಕಿಯ ಸಮೀಪದ ಮಣ್ಣು ಜರಿದು ಬಿದ್ದಿದೆ. ರಸ್ತೆ ಬದಿಯಿಂದ ಸುಮಾರು 15 ಅಡಿ ಎತ್ತರದಲ್ಲಿರುವ ಕಾರಣ ಈ ಟ್ಯಾಂಕ್‌ ಸಮೀಪದಲ್ಲಿರುವ ಮಣ್ಣು ಇನ್ನೂ ಜರಿದು ಬೀಳಬಹುದು. ಇದರಿಂದ ಟ್ಯಾಂಕ್‌ನ ಪಿಲ್ಲರ್‌ಗಳು ಕುಸಿಯುವ ಸ್ಥಿತಿ ನಿರ್ಮಾಣವಾಗಬಹುದು. ಪಂಚಾಯತ್‌ ಹಾಗೂ ಬಹು ಗ್ರಾಮ ಕುಡಿಯುವ ನೀರು ಸಮಿತಿ ಈ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ ಇದು ರಸ್ತೆಗೂ ಅಪಾಯವಾಗುವ ಸಂಭವ ಇದೆ.

ಸೂಕ್ತ ಕ್ರಮ
ಟ್ಯಾಂಕ್‌ ಪಕ್ಕದಲ್ಲಿ ಮಣ್ಣು ಕುಸಿದ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಬಗ್ಗೆ ಎಕ್ಕಾರು ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ತಿಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
– ಪ್ರಭಾಕರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ಅಪಾಯವಿಲ್ಲ
ರಸ್ತೆಯ ಚರಂಡಿ ತೆಗೆಯುವ ಸಂದರ್ಭದಲ್ಲಿ ಗುಡ್ಡದ ಮಣ್ಣು ಸ್ವಲ್ಪ ಕುಸಿದಿದೆ. ಇದರಿಂದ ಟ್ಯಾಂಕಿಗೆ ಯಾವ ಅಪಾಯವಿಲ್ಲ. ಈ ತನಕ ಟ್ಯಾಂಕ್‌ಗೆ ನೀರು ಸರಬರಾಜು ಆಗಿಲ್ಲ.
-ಸುರೇಶ್‌ ಶೆಟ್ಟಿ
ಎಕ್ಕಾರು ಗ್ರಾಮ ಪಂಚಾಯತ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next