Advertisement

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

06:01 PM Nov 27, 2024 | Team Udayavani |

ಗುಜರಾತ್:‌ ಟಿ-20 ಪಂದ್ಯದಲ್ಲಿ ವೇಗದ ಶತಕಗಳಿಸಿ ಭಾರತೀಯ ಬ್ಯಾಟರ್‌ ಒಬ್ಬ ವಿಶ್ವ ದಾಖಲೆ ಬರೆದಿದ್ದಾನೆ.

Advertisement

ಗುಜರಾತ್‌ ತಂಡದ ಉರ್ವಿಲ್ ಪಟೇಲ್ ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಗ್ರೌಂಡ್‌ನಲ್ಲಿ ಬುಧವಾರ (ನ.27 ರಂದು) ತ್ರಿಪುರಾ ವಿರುದ್ಧ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಪಂದ್ಯದಲ್ಲಿ  ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾನೆ.

ಈ ಹಿಂದೆ 2018 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ದೆಹಲಿ ಪರ 32 ಎಸೆತಗಳಲ್ಲಿ ರಿಷಭ್‌ ಪಂತ್‌ ಶತಕ ಸಿಡಿಸಿದ್ದು, ಭಾರತೀಯ ಬ್ಯಾಟರ್‌ ಒಬ್ಬನ ವೇಗದ ಶತಕದ ದಾಖಲೆ ಆಗಿತ್ತು. ಇದೀಗ ಈ ದಾಖಲೆಯನ್ನು ಉರ್ವಿಲ್‌ ಮುರಿದಿದ್ದಾರೆ.

35 ಎಸೆತಗಳಲ್ಲಿ ಔಟಾಗದೆ 113 ರನ್‌ ಸಿಡಿಸಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 12 ಸಿಕ್ಸರ್‌ ಸೇರಿವೆ. 156ರ ಗುರಿಯನ್ನು 58 ಎಸೆತಗಳಲ್ಲಿ ಚೇಸ್‌ ಮಾಡಿ ಪಂದ್ಯವನ್ನು ಗುಜರಾತ್‌ ಗೆದ್ದಿದೆ.

ಪಟೇಲ್ ಟಿ20ಯಲ್ಲಿ ಎರಡನೇ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಎಸ್ಟೋನಿಯಾದ ಸಾಹಿಲ್ ಚೌಹಾನ್ ಸೈಪ್ರಸ್ ದೇಶದ ವಿರುದ್ಧ 27 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅತೀ ವೇಗದ ಟಿ-20 ಶತಕ ಸಿಡಿಸಿದ ದಾಖಲೆ ಸಾಹಿಲ್ ಚೌಹಾನ್ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿ ಉರ್ವಿಲ್‌ ಇದ್ದಾರೆ.

Advertisement

ಟಿ-20 ಮಾತ್ರವಲ್ಲದೆ ಉರ್ವಿಲ್‌ ನವೆಂಬರ್ 2023ರಲ್ಲಿ ಲಿಸ್ಟ್ ಎ (ಏಕದಿನ – ವಿಜಯ್ ಹಜಾರೆ ಟ್ರೋಫಿ) ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಶತಕವನ್ನು ಸಿಡಿಸಿದ್ದರು. ಚಂಡೀಗಢದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ನಡೆದ ಈ ಪಂದ್ಯದಲ್ಲಿ ಗುಜರಾತ್‌ ಪರ ಉರ್ವಿಲ್ ಕೇವಲ 41 ಎಸೆತಗಳಲ್ಲಿ 100 ರನ್ ಗಳಿಸಿದ್ದರು.

2010ರಲ್ಲಿ ಮಹಾರಾಷ್ಟ್ರದ ವಿರುದ್ಧ ಬರೋಡಾ ಪರ ಯೂಸುಫ್ ಪಠಾಣ್ 40 ಎಸೆತಗಳಲ್ಲಿ ಶತಕ ಗಳಿಸಿದ್ದು, ಇದು ಲಿಸ್ಟ್‌ ಎ ಏಕದಿನ ಕ್ರಿಕೆಟ್‌ನ ವೇಗದ ಶತಕವಾಗಿದೆ.

ಯಾರು ಈ ಉರ್ವಿಲ್:‌ ಬರೋಡಾದ ಮೆಹ್ಸಾನಾ ಮೂಲದ ಉರ್ವಿಲ್ 2018 ರಲ್ಲಿ ರಾಜ್‌ಕೋಟ್‌ನಲ್ಲಿ ಮುಂಬೈ ವಿರುದ್ಧದ ಟಿ 20ನಲ್ಲಿ ಬರೋಡಾಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ ಅವರು ಲಿಸ್ಟ್ ಎ ಕ್ರಿಕೆಟ್‌ಗೆ ಪ್ರವೇಶಿಸಿದರು. ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಅವರಿಗೆ 6 ವರ್ಷ ಕಾಯಬೇಕಾಯಿತು.

ಐಪಿಎಲ್‌ ವಿಚಾರಕ್ಕೆ ಬಂದರೆ 2023ರಲ್ಲಿ ಉರ್ವಿಲ್‌ ಅವರನ್ನು ಗುಜರಾತ್ ತಂಡ 20 ಲಕ್ಷಕ್ಕೆ ಖರೀದಿ ಮಾಡಿತ್ತು. ಆದರೆ ಆ ವರ್ಷ ಅವರಿಗೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಗುಜರಾತ್‌ನಿಂದ ರಿಲೀಸ್‌ ಆದ ಬಳಿಕ ಈ ವರ್ಷದ ಐಪಿಎಲ್‌ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿ ಮಾಡಿಲ್ಲ.

ಇದುವರೆಗೆ 44 ಟಿ-20 ಪಂದ್ಯಗಳನ್ನಾಡಿರುವ ಉರ್ವಿಲ್‌ 23.52 ಸರಾಸರಿಯಲ್ಲಿ 988 ರನ್ ಗಳಿಸಿದ್ದಾರೆ. 1 ಶತಕ ನಾಲ್ಕು ಅರ್ಧಶತಕಗಳೊಂದಿಗೆ 164.11 ಸ್ಟ್ರೈಕ್-ರೇಟ್ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next