Advertisement

ಆಹಾರ ಪೋಲು ತಡೆಯಲು ಫ‌ುಡ್‌ ಬ್ಯಾಂಕ್‌

12:25 PM Apr 12, 2017 | |

ಬೆಂಗಳೂರು: ದೇಶದೆಲ್ಲೆಡೆ ಆಹಾರ ವ್ಯರ್ಥ ಕುರಿತು ಚರ್ಚೆಗಳು ನಡೆಯುತ್ತಿದ್ದು, ರಾಜಧಾನಿಯಲ್ಲೂ ನೂರಾರು ಕೋಟಿ ರೂ. ಮೌಲ್ಯದ ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರುವುದು ಹಲವು ಸಮೀಕ್ಷೆಗಳಿಂದ ಬೆಳಕಿಗೆ ಬಂದಿದೆ. 

Advertisement

ಆಹಾರ ಪೋಲಾಗುತ್ತಿರುವುದನ್ನು ತಡೆಯುವ ಸದಾಶಯವನ್ನಿಟ್ಟುಕೊಂಡು ನಗರದಲ್ಲಿ  “ಬೆಂಗಳೂರು ಫ‌ುಡ್‌ ಬ್ಯಾಂಕ್‌’ ಹೆಸರಿನ ಸ್ವಯಂ ಸೇವಾ ಸಂಸ್ಥೆಯೊಂದು ಕೆಲಸ ಮಾಡುತ್ತಿದೆ. ಆಹಾರ ವಸ್ತುಗಳು ಮತ್ತು ಪದಾರ್ಥಗಳನ್ನು ಬಿಸಾಡಬೇಡಿ. ನೀವು ಬಿಸಾಡಬೇಕೆಂದಿರುವ ಆಹಾರವನ್ನು ಅಗತ್ಯವಿರುವ ಜನರಿಗೆ ತಲುಪಿಸಲು ನಾವಿದ್ದೇವೆ ಎಂಬ ಸಂದೇಶದೊಂದಿಗೆ ಈ ಸಂಸ್ಥೆ ಕೆಲಸ ಮಾಡುತ್ತಿದೆ. 

2014ರಲ್ಲಿ ಹುಟ್ಟಿಕೊಂಡ ಬೆಂಗಳೂರು ಫ‌ುಡ್‌ ಬ್ಯಾಂಕ್‌ ಸ್ವತಃ ಒಂದು ಸ್ವಯಂ ಸೇವಾ ಸಂಸ್ಥೆ ಆಗಿದ್ದು, ರಾಜಧಾನಿಯ 64 ಎನ್‌ಜಿಓಗಳಿಗೆ “ಆಹಾರ’ದ ನೆರವಿನ ಹಸ್ತ ನೀಡುತ್ತಿದೆ. ಅನಾಥ ಮಕ್ಕಳು, ವೃದ್ಧರು, ಬೀದಿ ಬದಿ ವಾಸಿಗಳ, ನಿರ್ಗತಿಕರು, ವಿಕಲಚೇತನ ಮಕ್ಕಳ ಸೇವೆಯಲ್ಲಿ ತೊಡಗಿರುವ ಈ 64 ಎನ್‌ಜಿಓಗಳಿಗೆ ಬೆಂಗಳೂರು ಫ‌ುಡ್‌ ಬ್ಯಾಂಕ್‌ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ಸುಮಾರು 15 ಸಾವಿರ ಮಂದಿಗೆ ಅನುಕೂಲವಾಗುತ್ತಿದೆ ಎಂದು ಬೆಂಗಳೂರು ಫ‌ುಡ್‌ ಕ್ಲಬ್‌ನ ಕಾರ್ಯನಿರ್ವಹಣಾ ನಿರ್ದೇಶಕಿ ಮೆಹರ್‌ ಎಸ್‌. ದಾಸುಂದಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಸದ್ಯ ಕಾರ್ಪೊರೇಟ್‌ ಸಂಸ್ಥೆಗಳು, ದಾನಿಗಳು, ಸ್ವಯಂಸೇವಾ ಸಂಸ್ಥೆಗಳಿಂದ ಬೇಯಿಸದ (ಅನ್‌ಕುಕ್ಡ್) ಆಹಾರ ಪದಾರ್ಥಗಳನ್ನು ಉದಾಹರಣೆಗೆ: ಅಕ್ಕಿ, ಬೇಳೆಕಾಳು, ಸಕ್ಕರೆ, ಬಿಸ್ಕೆಟ್‌, ತರಕಾರಿ, ಕಾಯಿಪಲ್ಲೆ, ಸೊಪ್ಪು ಇತ್ಯಾದಿಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ಸಂಗ್ರಹಿಸುವ ಬೆಂಗಳೂರು ಫ‌ುಡ್‌ ಬ್ಯಾಂಕ್‌ ಅಗತ್ಯವಿರುವ ಎನ್‌ಜಿಓಗಳಿಗೆ ತಲುಪಿಸುತ್ತದೆ. ಸಂಗ್ರಹಿಸುವ ಎಲ್ಲ ಆಹಾರ ಪದಾರ್ಥಗಳನ್ನು 3 ದಿನಗಳೊಳಗೆ ಸಂಬಂಧಪಟ್ಟ ಎನ್‌ಜಿಓಗೆ ಕೊಡಲಾಗುತ್ತದೆ. ಈ ಅವಧಿಯಲ್ಲಿ ಆಹಾರ ಪದಾರ್ಥಗಳು ಕೊಳೆತು ಹೋಗದಂತೆ, ಸೇವಿಸುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸಲಾಗುತ್ತದೆ. 

ನಮಗೆ ಈಗ ಸಿಗುತ್ತಿರುವ ಆಹಾರ ಪದಾಥಗಳಿಂದ ಎಲ್ಲ 64 ಎನ್‌ಜಿಓಗಳ 15 ಸಾವಿರ ಮಂದಿಗೆ ಪ್ರತಿ ದಿನ ಅಥವಾ ಪ್ರತಿ ತಿಂಗಳು ಆಹಾರ ಪದಾರ್ಥ ಪೂರೈಸಲು ಸಾಧ್ಯವಿಲ್ಲ. ಆದರೆ, ಪ್ರತಿ ತಿಂಗಳು ಸರಾಸರಿ 15ರಿಂದ 16 ಎನ್‌ಜಿಓಗಳನ್ನು ಕಾರ್ಪೋರೇಟ್‌ ಸಂಸ್ಥೆಗಳು, ದಾನಿಗಳು ಅಥವಾ ದೊಡ್ಡ ಎನ್‌ಜಿಓಗಳು ದತ್ತುಪಡೆದುಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ನಾವು ಮಧ್ಯವರ್ತಿಗಳಾಗಿ ಕೆಲಸ ಮಾಡಿ ಅವರು ನೀಡುವ ಆಹಾರ ಪದಾರ್ಥಗಳನ್ನು ದತ್ತುಪಡೆದುಕೊಂಡು ಸಂಸ್ಥೆಗೆ ಪೂರೈಸುತ್ತೇವೆ ಎಂದು ಫ‌ುಡ್‌ ಬ್ಯಾಂಕ್‌ ಪ್ರತಿನಿಧಿಗಳು ಹೇಳುತ್ತಾರೆ. 

Advertisement

ಅನ್‌ಕುಕ್ಡ್ ಫ‌ುಡ್‌ಗೆ ಮಾತ್ರ ಸೀಮಿತ: ನಮ್ಮ ಸಂಸ್ಥೆ ಸದ್ಯ ಅನ್‌ಕುಕ್ಡ್ (ಬೇಯಿಸದ) ಆಹಾರ ಪದಾರ್ಥಗಳಿಗೆ ಮಾತ್ರ ಸಿಮೀತವಾಗಿದೆ. ಏಕೆಂದರೆ, ತಯಾರಿಸಿದ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಕೆಲವೊಂದು ಗಂಟೆಗಳು ಅಥವಾ ಒಂದು ದಿನದ ಮಟ್ಟಿಗೆ ಕೆಡದೇ ಇರುವಂತಹ ಸಿದ್ದಪಡಿಸಿದ ಅನೇಕ ಆಹಾರ ಪದಾರ್ಥಗಳು ಹೊಟೇಲ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಬಾಕಿ ಉಳಿದು ಬಿಡುತ್ತವೆ.

ಅಂತಹ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ತಮ್ಮಲ್ಲೇ ಸಂಗ್ರಹಿಸಿಟ್ಟು ನಮಗೆ ಕೊಡಿ ಎಂದು ಹೊಟೇಲ್‌ಗ‌ಳಿಗೆ ಮನವಿ ಮಾಡಲಾಗುತ್ತದೆ. ಆದರೆ, ಇಲ್ಲಿವರೆಗೆ ಯಾವುದೇ ಹೋಟೆಲ್‌ನವರು ಸ್ಪಂದಿಸಿಲ್ಲ. ನಮ್ಮಲ್ಲಿ ವ್ಯವಸ್ಥೆ ಆದಾಗ ತಯಾರಿಸಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅಗತ್ಯವಿರುವ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. 

ತ್ಯಾಜ್ಯ ಪ್ರಮಾಣದಲ್ಲಿ ಆಹಾರದ ಪಾಲು ಶೇ.68
ಬೆಂಗಳೂರು ನಿವಾಸಿಗಳ ಸಮುದಾಯವೊಂದು ಕಳೆದ ಎರಡು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯೊಂದರಲ್ಲಿ, ನಗರದ ತ್ಯಾಜ್ಯದಲ್ಲಿ ಶೇ 68ರಷ್ಟು ಆಹಾರ ಪದಾರ್ಥವೇ ಆಗಿದೆ. ನಗರದಲ್ಲಿ ಆಹಾರ ಪದಾರ್ಥಗಳು ಪೋಲಾಗುವ ಪ್ರಮಾಣ ಹೆಚ್ಚಿದೆ ಎಂದು ಈ ಸಮೀಕ್ಷೆ ಹೇಳಿತ್ತು.

ರಾಜಧಾನಿಯಲ್ಲಿ 900 ಟನ್‌ ಫ‌ುಡ್‌ ವೇಸ್ಟ್‌
ಬೆಂಗಳೂರು ಕೃಷಿ ವಿವಿಯ ಅಧ್ಯಾಪಕರ ತಂಡವೊಂದು 2012ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ ವರ್ಷಕ್ಕೆ ಬರೊಬ್ಬರಿ 339 ಕೋಟಿ ರೂ. ಮೊತ್ತದ 943 ಟನ್‌ ಆಹಾರ ವೇಸ್ಟ್‌ ಆಗುತ್ತದೆ. ಸಮೀಕ್ಷೆ ಹೇಳಿರುವಂತೆ ಪ್ರತಿ ವರ್ಷ ಬೆಂಗಳೂರಿನ ಅಂದಾಜು 500ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಲ್ಲಿ 84 ಸಾವಿರ ಮದುವೆಗಳು ನಡೆಯುತ್ತವೆ. ಇದರಲ್ಲಿ 943 ಟನ್‌ನಷ್ಟು ಒಳ್ಳೆಯ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೋಲು ಮಾಡಲಾಗುತ್ತದೆ. 

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next