ದಾವಣಗೆರೆ: ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ತಡೆಗೆ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ನಡೆದ ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಸಿಸಿ ಟಿವಿ, ಕ್ಯಾಮೆರಾ ಅಳವಡಿಸುವುದರಿಂದ ಜನರು ಹಲ್ಲೆ, ದೌರ್ಜನ್ಯ ನಡೆಸಲು ಯೋಚನೆ ಮಾಡುತ್ತಾರೆ.
ಒಂದೊಮ್ಮೆ ಅಹಿತಕರ ಘಟನೆ ನಡೆದಲ್ಲಿ ಸೂಕ್ತ ಸಾಕ್ಷಿ ಸಿಕ್ಕಂತಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು. ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಆದಷ್ಟು ಬೇಗ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಬ್ ಇನ್ಸ್‌ಪೆಕ್ಟರ್ ಹಂತದಲ್ಲಿ ಎರಡು ವಾಟ್ಸಪ್ ಗ್ರೂಪ್ ಸಿದ್ದಪಡಿಸಲಾಗುವುದು.
ಯಾವುದೇ ರೀತಿಯ ಅಹಿತಕರ ಘಟನೆಗಳ ಬಗ್ಗೆ ಪೊಲೀಸ್ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ನಡೆದಿದ್ದನ್ನು ರಾಜೀ ಮೂಲಕ ಅಲ್ಲಲ್ಲೇ ಬಗೆಹರಿಸಿಕೊಳ್ಳುವುದು ಸಹ ಕಂಡು ಬರುತ್ತದೆ.
ಆಸ್ಪತ್ರೆ ಸಿಬ್ಬಂದಿ, ವೈದ್ಯರು ದೂರು ನೀಡಿದ್ದಲ್ಲಿ, ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಮುಂದೆ ಹಲ್ಲೆ, ದೌರ್ಜನ್ಯಕ್ಕೆ ಮುಂದಾಗುವುದಿಲ್ಲ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಬ ಮಾತನಾಡಿ, ಈಚೆಗೆ ಜನರಲ್ಲಿ ತಾಳ್ಮೆಯೇ ಇಲ್ಲದಂತಾಗಿದೆ.
ಸ್ವಲ್ಪ ತಡವಾದರೂ ವೈದ್ಯರು, ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾರೆ. ಒಮ್ಮೊಮ್ಮೆ ಹಲ್ಲೆ, ದೌರ್ಜನ್ಯಕ್ಕೂ ಮುಂದಾಗುತ್ತಾರೆ ಎಂದರು. ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್.ಡಿ. ನೀಲಾಂಬಿಕೆ ಮಾತನಾಡಿ, ಜನರು ಅನೇಕ ಸಂದರ್ಭದಲ್ಲಿ ನಿಯಮ ಪಾಲನೆ ಮಾಡುವುದೇ ಇಲ್ಲ.
ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದರು. ಎಸ್.ಎಸ್. ಆಸ್ಪತ್ರೆಯ ಡಾ| ಎನ್.ಕೆ. ಕಾಳಪ್ಪನವರ್, ಡಾ| ಶ್ರೀಶೈಲ ಎಂ. ಬ್ಯಾಡಗಿ, ಡಾ| ಚಂದ್ರಶೇಖರ್ ಇತರರು ಇದ್ದರು. ಗ್ರಾಮಾಂತರ ಡಿಎಸ್ಪಿ ಬಿ.ಎಸ್. ನೇಮಗೌಡ ನಿರೂಪಿಸಿದರು.