ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ನಂಜರಾಯಪಟ್ಟಣ, ಹೊಸಪಟ್ಟಣ, ವಾಲ್ನೂರು, ತ್ಯಾಗತ್ತೂರು ಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕಾಗಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದ ಕಾಡಾನೆಗಳ ಹಿಂಡು ಬೇಲಿಯನ್ನೇ ಮುರಿದು ಗ್ರಾಮಕ್ಕೆ ಲಗ್ಗೆ ಇಡುತ್ತಿವೆ.
ಸೋಲಾರ್ ಬೇಲಿ ಮತ್ತು ಕಂದಕಗಳು ಕಾಡಾನೆಗಳು ನಾಡಿಗೆ ನುಗ್ಗುವುದನ್ನು ತಡೆಯುವಲ್ಲಿ ವಿಫಲವಾದ ಬೆನ್ನಲ್ಲೇ ರೈಲ್ವೆ ಕಂಬಿಗಳ ಬೇಲಿಯನ್ನು ನಿರ್ಮಿಸಲಾಯಿತ್ತಾದರೂ ಈ ತಂತ್ರಗಾರಿಕೆ ಕೂಡ ಈಗ ನಿಷ್ಪ್ರಯೋಜಕವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿದ ರೈಲ್ವೆ ಕಂಬಿಯ ಬೇಲಿಗಳನ್ನು ಮುರಿದು ಒಳನುಗ್ಗುತ್ತಿರುವ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಫಸಲು ನಾಶ ಮಾಡುತ್ತಿವೆ.
ಹೊಸ ಪಟ್ಟಣ ಗ್ರಾಮ ವ್ಯಾಪ್ತಿಯ ತೋಟ ಮತ್ತು ಗದ್ದೆಗಳು ಕಾಡಾನೆಗಳಿಂದ ನಾಶವಾಗಿದೆ. ಹಿಂಡು ಹಿಂಡಾಗಿ ಕಾಡಾನೆಗಳು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಾಶವಾದ ಬೆಳೆಗೆ ಯಾವುದೇ ಪರಿಹಾರ ಕೂಡ ಸಿಗುತ್ತಿಲ್ಲ. ರೈಲ್ವೆ ಕಂಬಿಗಳ ಬೇಲಿ ಮುರಿದು ಹೋಗಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರದ ಭರವಸೆ ನೀಡುತ್ತಿದ್ದಾರೆಯೇ ಹೊರತು ಇಲ್ಲಿಯವರೆಗೆ ಯಾವುದೇ ಯೋಜನೆಗಳು ಸಾಕಾರಗೊಂಡಿಲ್ಲ. ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರುತ್ತಲೇ ಇದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.