Advertisement

ನಗರದಲ್ಲಿ ಹೆಚ್ಚುತ್ತಿದೆ ವಿದ್ಯುತ್‌ ಶಾಕ್‌ ಅಪಾಯಕಾರಿ ಸ್ಥಳ 

09:56 AM Oct 01, 2018 | Team Udayavani |

ಮಹಾನಗರ: ನಗರದ ಹಲವು ಕಡೆ ಪ್ರಮುಖ ರಸ್ತೆಗಳ ಬದಿಯಲ್ಲಿಯೇ ಅಪಾಯದ ರೀತಿ ಜೋತು ಬಿದ್ದಿರುವ ವಿದ್ಯುತ್‌ ವಯರ್‌ಗಳು; ಶಾಲಾ ಮಕ್ಕಳು, ಹಿರಿಯ ನಾಗರಿಕರು ನಡೆದಾಡುವ ಫ‌ುಟ್‌ಪಾತ್‌ಗೆ ಹೊಂದಿಕೊಂಡೇ ಯಾವುದೇ ಸುರಕ್ಷಾ ಕ್ರಮಗಳನ್ನು ಅಳವಡಿಸದೆ ಬಾಯ್ದೆರೆದುಕೊಂಡಿರುವ ಟ್ರಾನ್ಸ್‌ಫಾರ್ಮರ್‌ಗಳು, ಈ ನಡುವೆ ರಸ್ತೆ ವಿಭಜಕಗಳ ಮೇಲೆಯೇ ಅಲ್ಲಲ್ಲಿ ತುಂಡಾಗಿ- ಟೇಪ್‌ ಸುತ್ತಿಟ್ಟು ರಸ್ತೆಗೆ ಚಾಚಿಕೊಂಡಿರುವ ಬೀದಿದೀಪಗಳ ಸಂಪರ್ಕ ವ್ಯವಸ್ಥೆ…!

Advertisement

ಇದು ಸ್ಮಾರ್ಟ್‌ಸಿಟಿಯಾಗಿ ಬದಲಾಗುತ್ತಿರುವ ನಗರದ ಹಲವು ಜನನಿಬಿಡ ಪ್ರದೇಶಗಳಲ್ಲಿ ಸದ್ಯ ಕಂಡುಬರುತ್ತಿರುವ ವಿದ್ಯುತ್‌ ಸಂಪರ್ಕದ ವಾಸ್ತವ ಚಿತ್ರಣ. ನಗರ ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ ಈಗ ಯಾರು ಊಹಿಸದ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಇದರಿಂದ ನಗರದ ಜನಸಂಖ್ಯೆ ಹೇಗೆ ಹೆಚ್ಚಾಗುತ್ತಿದೆಯೋ ಅದೇ ರೀತಿ ಇಲ್ಲಿನ ರಸ್ತೆಗಳ ಸಂಖ್ಯೆ, ವಾಹನ, ಕಟ್ಟಡಗಳು ಹೀಗೆ ನಗರಕ್ಕೆ ಪೂರಕವಾಗಿರುವ ಪ್ರತಿಯೊಂದರ ಸಂಖ್ಯೆಯೂ ಜಾಸ್ತಿಯಾಗುತ್ತಿವೆ. ಎಲ್ಲ ರಸ್ತೆ, ಬಡಾವಣೆ, ಗಲ್ಲಿಯಲ್ಲಿಯೂ ಜನಸಂದಣಿ ಜಾಸ್ತಿಯಾಗಿದೆ. ಫುಟ್‌ಪಾತ್‌ ಬದಿಯಲ್ಲಿ ವಿದ್ಯುತ್‌ನ ವಯರ್‌ ಸಂಪರ್ಕ ಕಡಿದುಕೊಂಡು ಬಿದ್ದಿದ್ದರೆ ಅದರಿಂದಾಗುವ ಅಪಾಯವೂ ಹೆಚ್ಚಿದೆ. ಅದರಲ್ಲಿಯೂ ಮಕ್ಕಳು, ಹಿರಿಯ ನಾಗರಿಕರು, ಅಸಕ್ತರು ಸಂಚರಿಸುವ ಜಾಗದಲ್ಲಿ ಈ ರೀತಿ ವಿದ್ಯುತ್‌ ಸಂಪರ್ಕಗಳು ಅಪಾಯದ ಸ್ಥಿತಿಯಲ್ಲಿದ್ದರೆ, ಆ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ತುರ್ತಾಗಿ ಗಮನಹರಿಸಿ ಅದನ್ನು ಸರಿಪಡಿಸುವ ಕೆಲಸ ಮಾಡಬೇಕಾದ ಅನಿವಾರ್ಯವಿದೆ.

ಉರ್ವಸ್ಟೋರ್‌, ಕಂಕನಾಡಿ, ಪಿವಿಎಸ್‌ ವೃತ್ತ, ಕೊಡಿಯಾಲಬೈಲ್‌, ಮಣ್ಣಗುಡ್ಡೆ, ಬಲ್ಲಾಳ್‌ಬಾಗ್‌ ಸಹಿತ ನಗರದ ಅನೇಕ ಕಡೆಗಳಲ್ಲಿ ಹೆಚ್ಚಿನ ಟ್ರಾನ್ಸ್‌ಫಾರ್ಮರ್‌ ಗಳು ಮತ್ತು ಎಲ್‌ಟಿಡಿಗಳು ಕೈಗೆ ತಾಗುವಂತಿದೆ. ಅನೇಕ ಕಡೆ ಸ್ಕಿನ್‌ ತೆಗೆದಂತಹ ವಿದ್ಯುತ್‌ ವಯರ್‌ ಗಳು ಹೊರಗಡೆ ಇದ್ದು, ಇದು ಸ್ಥಳೀಯರನ್ನು ಚಿಂತೆಗೀಡುಮಾಡಿದೆ. ನಗರದ ಹೆಚ್ಚಿನ ಟ್ರಾನ್ಸ್‌ಫಾರ್ಮರ್‌ಗಳಿಗೆ ತಂತಿ ಬೇಲಿ ಅಳವಡಿಸಿಲ್ಲ.

ಕೊಡಿಯಾಲ್‌ಗ‌ುತ್ತು ಸಮೀಪದ ವಿಶಾಲ್‌ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆಯ ಕಾಂಪೌಂಡ್‌ ಗೆ ಹೊಂದಿಕೊಂಡಂತೆ ಬೀದಿ ದೀಪದ ವಿದ್ಯುತ್‌ ಕಂಬವಿದೆ. ಈ ಕಂಬದಲ್ಲಿ ಕೇಬಲ್‌ ವಯರ್‌, ಪೆಟ್ಟಿಗೆ ಸಹಿತ ಮಣ್ಣಿನಡಿಯಿಂದ ಕೇಬಲ್‌ ಇದೆ. ಈ ವಿದ್ಯುತ್‌ ಕಂಬದ ಸುಮಾರು ಮೂರು ಅಡಿ ಎತ್ತರದಲ್ಲಿ ಸ್ಕಿನ್‌ ತೆಗೆದಂಥ ವಿದ್ಯುತ್‌ ವಯರ್‌ ಅನ್ನು ಹಾಗೆಯೇ ಬಿಡಲಾಗಿದ್ದು, ಆಸ್ಪತ್ರೆಗೆ ಬರುವ ಮಂದಿಗೆ ಅಪಾಯವನ್ನೊಡ್ಡುತ್ತಿದೆ. ಮೇಯರ್‌ ಬಂಗ್ಲೆ ಪಕ್ಕದಲ್ಲಿಯೇ ಇರುವ ಟ್ರಾನ್ಸ್‌ಫಾರ್ಮರ್‌ ಕಂಬದ ಮೀಟರ್‌ ಬಾಕ್ಸ್‌ ಮತ್ತು ವಿದ್ಯುತ್‌ ಸರಬರಾಜು ಪೆಟ್ಟಿಗೆಯ ಬಾಗಿಲು ಕೆಲವು ತಿಂಗಳಿನಿಂದಲೇ ತೆರೆದಿದೆ.

ಸುತ್ತಮುತ್ತಲು ಜನವಸತಿ ಪ್ರದೇಶವಾಗಿದ್ದು, ಪಕ್ಕದಲ್ಲಿಯೇ ಬಯಲು ಕ್ರೀಡಾಂಗಣವಿದೆ. ಸಂಜೆ ವೇಳೆಗೆ ಮಕ್ಕಳು ಆಟವಾಡಲು ಇದೇ ಕ್ರೀಡಾಂಗಣಕ್ಕೆ ಬರುತ್ತಿದ್ದು, ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ನಗರದ ಚಿಲಿಂಬಿ ಬಳಿ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವಂತಹ ವಿದ್ಯುತ್‌ ಕಂಬದಲ್ಲಿ ಅಳವಡಿಸಲಾಗಿದ್ದ ಮೀಟರ್‌ ಬಾಕ್ಸ್‌ ಬಳಿ ಸ್ಕಿನ್‌ ತೆಗೆದ ವಯರ್‌ ಸಾರ್ವಜನಿಕರಿಗೆ ಕೈಗೆಟಕುವಂತಿದ್ದು, ಈ ಮೀಟರ್‌ ಬಾಕ್ಸ್‌ಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಮಣ್ಣಗುಡ್ಡೆ ಬಳಿ ಇರುವ ಫುಟ್‌ಬಾಲ್‌ ಕ್ರೀಡಾಂಗಣ ಎದುರು ಇರುವ ವಿದ್ಯುತ್‌ ಕಂಬದಲ್ಲಿ ವಯರ್‌ ಹೊರಚಾಚಿದೆ. ಅಲ್ಲೇ ಪಕ್ಕದಲ್ಲಿ ಕ್ರೀಡಾಂಗಣಕ್ಕೆ ನೆಟ್‌ ಕೂಡ ಹಾಕಲಾಗಿದೆ.

ಟ್ರಾನ್ಸ್‌ಫಾರ್ಮರ್‌ ಕೆಳಗೆ ಬಟ್ಟೆ ವ್ಯಾಪಾರ 
ನಗರದ ಜನನಿಬಿಡ ಪ್ರದೇಶವಾದ ಸ್ಟೇಟ್‌ಬ್ಯಾಂಕ್‌ನಲ್ಲಿನ ರಾವ್‌ ಆ್ಯಂಡ್‌ ರಾವ್‌ ವೃತ್ತದ ಬಳಿ ಇರುವಂತಹ ಟ್ರಾನ್ಸ್‌ಫಾರ್ಮರ್‌ ಕೆಳಗೆ ಬೀದಿ ಬದಿಯಲ್ಲಿ ಕೆಲ ಮಂದಿ ಬಟ್ಟೆ ಮಾರುತ್ತಿದ್ದು, ಕೆಲವೊಂದು ಬಟ್ಟೆಗಳನ್ನು ಟ್ರಾನ್ಸ್‌ಫಾರ್ಮರ್‌ ಕಂಬಕ್ಕೆ ಜೋಡಿಸಿಡಲಾಗಿದೆ. ಇದರಿಂದಾಗಿ ಯಾವುದೇ ಸಮಯದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ.

ಶಿಥಿಲಾವಸ್ಥೆಯಲ್ಲಿ ವಿದ್ಯುತ್‌ ಕಂಬಗಳು
ನಗರದ ವಿವಿಧೆಡೆ ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಯಲ್ಲಿ ಇವೆ. ಒಂದೇ ವಿದ್ಯುತ್‌ ಕಂಬಕ್ಕೆ ಕೇಬಲ್‌ ವಯರ್‌, ಪೆಟ್ಟಿಗೆ ಸಹಿತ ಇನ್ನಿತರ ಪರಿಕರಗಳನ್ನು ಅಳವಡಿಸಲಾಗಿದ್ದು, ಕೆಲವೊಂದು ವಿದ್ಯುತ್‌ ಕಂಬಗಳು ತುಕ್ಕು ಹಿಡಿದಿವೆ. ಮೆಸ್ಕಾಂ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ಯೋಜನ ಪಟ್ಟಿ ಕಳುಹಿಸಿದ್ದೇವೆ
ನಗರದಲ್ಲಿ ಬೀದಿ ದೀಪಗಳ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದೆ. ಕೆಲವೊಂದು ಕಡೆ ಬೀದಿ ದೀಪ ಕಂಬದ ಕೆಳಗಿರುವ ಪೆಟ್ಟಿಗೆ ತೆರೆದಿದೆ. ಆಯಾ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಕಾಮಗಾರಿಗೆಂದು ಯೋಜನ ವೆಚ್ಚದ ಪಟ್ಟಿಯನ್ನು ಕಮಿಷನರ್‌ಗೆ ಕಳುಹಿಸಿದ್ದೇವೆ. ಅನುಮತಿ ಬಂದ ಕೂಡಲೇ ದುರಸ್ತಿ ಕಾಮಗಾರಿ ಪ್ರಾರಂಭಿಸುತ್ತೇವೆ.
– ದೇವರಾಜ್‌,
ಸಹಾಯಕ ಕಾರ್ಯನಿರ್ವಾಹಕ
ಅಭಿಯಂತರ, ಪಾಲಿಕೆ

ಕ್ರಮ ಕೈಗೊಳ್ಳಲಾಗುವುದು
ನಗರದ ಯಾವ ಪ್ರದೇಶಗಳಲ್ಲಿ ಟ್ರಾನ್ಸ್‌ಫಾರ್ಮರ್‌ ಮತ್ತು ಎಲ್‌ಟಿಡಿ ಪೆಟ್ಟಿಗೆಗಳಲ್ಲಿ ವಿದ್ಯುತ್‌ ವಯರ್‌ಗಳು ಕೈಗೆಟಕುವಂತಿದೆ ಎಂಬುವುದನ್ನು ಪತ್ತೆ ಮಾಡಿ, ಯಾವುದೇ ಅನಾಹುತ ಸಂಭವಿಸದಂತೆ ಮೇಲ್ಭಾಗಕ್ಕೆ ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.
– ಮಂಜಪ್ಪ, 
ಕಾರ್ಯನಿರ್ವಾಹಕ ಅಭಿಯಂತರ, ಮೆಸ್ಕಾಂ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next