ಇಸ್ಲಾಮಾಬಾದ್: ಬಹಿರಂಗ ಸಭೆಯಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿರುವ ಆರೋಪದಡಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಶೀಘ್ರವೇ ಖಾನ್ ಬಂಧನವಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದುಗೆ ಮೊಟ್ಟೆ ಎಸೆದಿದ್ದು ಯಾರು ? ಡಿಕೆಶಿ ಬಣವೋ, ಪರಮೇಶ್ವರ್ ಬಣವೋ: ಸುನಿಲ್ ಪ್ರಶ್ನೆ
ಪಾಕಿಸ್ತಾನ ಸರ್ಕಾರ ಇಮ್ರಾನ್ ಖಾನ್ ಬಂಧಿಸಲು ಸಂಚು ರೂಪಿಸಿದ್ದು, ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಬೇಕು ಎಂದು ಕರೆ ಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಇತ್ತೀಚೆಗೆ ಪಿಟಿಐ ಪಕ್ಷದ ರಾಲಿಯಲ್ಲಿ ಇಮ್ರಾನ್ ಖಾನ್ ಭಾಷಣದ ವೇಳೆ ನ್ಯಾಯಾಧೀಶರು ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಮಾರ್ಗಾಲ್ಲಾ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪ್ರಚೋದನಕಾರಿ ಭಾಷಣ ಮಾಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದೂರು ದಾಖಲಾಗಿರುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ ದಟ್ಟವಾಗಿದ್ದು, ಪಿಟಿಐ ಕಾರ್ಯಕರ್ತರು, ಬೆಂಬಲಿಗರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿರುವುದಾಗಿ ವರದಿ ವಿವರಿಸಿದೆ.