ಹುಬ್ಬಳ್ಳಿ: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ವಿದೇಶಿ ಸಂಸ್ಕೃತಿ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ದೇಶದ ಶ್ರೀಮಂತ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅವರ ಜೀವನದಲ್ಲಿ ಅಳವಡಿಸುವ ಕೆಲಸ ಆಗಬೇಕಾಗಿದೆ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಣ್ಣ ಕಡಿವಾಳ ಹೇಳಿದರು.
ರವಿವಾರ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಮಯೂರ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ ಮಯೂರೋತ್ಸವ-2021 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣವೊಂದರಿಂದಲೇ ತಮ್ಮ ಮಕ್ಕಳ ಸರ್ವತೋಮುಖ ಬೆಳ ವಣಿಗೆ ಸಾಧ್ಯ ಎನ್ನುವ ಮನಸ್ಥಿತಿ ತಂದೆ- ತಾಯಿಗಳಲ್ಲಿ ಮೂಡಿದ್ದು, ಕೇವಲ ಅಂಕ ಗಳಿಕೆಗೆ ಮಾತ್ರ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ.
ಇದಕ್ಕೆ ನೀಡಿದ ಅರ್ಧದಷ್ಟು ಒತ್ತನ್ನು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಒತ್ತು ನೀಡುತ್ತಿಲ್ಲ. ಹೀಗಾಗಿ ಅವರ ದೈಹಿಕ ಸ್ಥಿತಿ ಕುಗ್ಗುತ್ತಿದೆ. ಕ್ರೀಡೆ, ನೃತ್ಯ, ಸಂಗೀತ ಸೇರಿದಂತೆ ಕ್ರೀಡಾ ಚಟುವಟಿವಟಿಕೆಗಳತ್ತ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು. ಸಂಗೀತ ಕಲಾವಿದೆ ಪದ್ಮಿನಿ ಓಕ್ ಮಾತನಾಡಿ, ಎಲ್ಲರಲ್ಲೂ ಕಲೆ ಇರುತ್ತದೆ. ಆದರೆ ಕೆಲವರು ಮಾತ್ರ ಇದರಲ್ಲಿ ಉಳಿದು ಮುಂದುವರಿಯುತ್ತಾರೆ. ಸಂಗೀತ ಮತ್ತು ನೃತ್ಯವನ್ನು ಕಲಿಯಬೇಕಾದರೆ ಪೂರ್ವಜನ್ಮದಲ್ಲಿ ಪುಣ್ಯ ಮಾಡಿರಬೇಕು.
ಮಕ್ಕಳಲ್ಲಿ ಇರುವ ಕಲೆ, ಕ್ರೀಡಾಸಕ್ತಿ ಗುರುತಿಸಿ ಅದರಲ್ಲಿ ಬೆಳೆಸುವ ಕೆಲಸ ಪಾಲಕರು, ಪೋಷಕರು ಹಾಗೂ ಶಿಕ್ಷಕರಿಂದ ಆಗಬೇಕು ಎಂದು ಹೇಳಿದರು. ಕನಕದಾಸ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸಂದೀಪ ಬೂದಿಹಾಳ, ಸುಭಾಸಿಂಗ್ ಜಮಾದಾರ ಮಾತನಾಡಿದರು. ಮಯೂರ ಸಮಾನ ಪ್ರಶಸ್ತಿಯನ್ನು ಸಂಗೀತ ಕಲಾವಿದೆ ಪದ್ಮನಿ ಓಕ್ ಅವರಿಗೆ ನೀಡಿ ಗೌರವಿಸಲಾಯಿತು. ಆರ್.ಎನ್.ಎಸ್ ವಿದ್ಯಾನಿಕೇತನ ಪ್ರಾಂಶುಪಾಲರಾದ ಶರ್ಮಿಳಾ ಹೊಸೂರು, ಅಕಾಡೆಮಿ ಅಧ್ಯಕ್ಷೆ ವಿದುಷಿ ಹೇಮಾ ವಾಘಮೋಡೆ, ದಿನೇಶ ವಾಘಮೋಡೆ, ಸತೀಶ ಮುರೂರ ಇದ್ದರು.