ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗಿರುವುದರಿಂದ ರಾಜ್ಯಕ್ಕೆ ಅಗತ್ಯವಿರುವಷ್ಟು ಕಲ್ಲಿದ್ದಲು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಶನಿವಾರ ನವದೆಹಲಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಅಗತ್ಯವಿರುವ 14 ರೇಕ್ ಕಲ್ಲಿದ್ದಲ್ಲನ್ನು ಸರಬರಾಜು ಮಾಡುವಂತೆ ಮನವಿ ಮಾಡಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ತಕ್ಷಣ ಸ್ಪಂದಿಸಿ, ಮಹಾರಾಷ್ಟ್ರದ ಎಂಸಿಎಲ್‌ನಿಂದ 12 ರೇಕ್ ಕಲ್ಲಿದ್ದಲು ಸರಬರಾಜು ಮಾಡಲು ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಬಾರಂಜಿ ಮತ್ತು ಒರಿಸ್ಸಾದ ಮಂದಾಕಿನಿಯಲ್ಲಿ ರಾಜ್ಯಕ್ಕೆ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಅವಕಾಶ ದೊರೆತಿದ್ದು, ಇದು ಅರಣ್ಯ ವಿಚಾರ ಆಗಿರುವುದರಿಂದ ಅಲ್ಲಿ ರಾಜ್ಯ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 451 ಹೊಸ ಪ್ರಕರಣ | 1455 ಸೋಂಕಿತರು ಗುಣಮುಖ
ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಿದ್ದೇವೆ. ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದು, ಕೇಂದ್ರಕ್ಕೆ ಪತ್ರ ಬರೆದು ಅರಣ್ಯ ಇಲಾಖೆಯ ಅನುಮತಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.