Advertisement

ಶಹೀನ್‌ ಚಂಡಮಾರುತದ ಅಬ್ಬರ; ಇಂದಿನಿಂದ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ

01:07 AM Oct 04, 2021 | Team Udayavani |

ಮಸ್ಕತ್‌/ಹೊಸದಿಲ್ಲಿ: ಒಮನ್‌ ಕರಾವಳಿಯತ್ತ ನುಗ್ಗಿಬರುತ್ತಿರುವ “ಶಹೀನ್‌’ ಚಂಡಮಾರುತವು ದಕ್ಷಿಣ ಭಾರತದಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಸುವ ಭೀತಿ ಶುರುವಾಗಿದೆ.

Advertisement

ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ 3 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಒಮನ್‌ನಲ್ಲಿ ಸೈಕ್ಲೋನ್‌ ಅಪ್ಪಳಿಸುವಿಕೆಗೂ ಮುನ್ನ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಒಂದು ಮಗು ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ರುಸಾಯಿಲ್‌ ಕೈಗಾರಿಕಾ ಪ್ರದೇಶದಲ್ಲಿ ಮನೆಯ ಮೇಲೆ ಗುಡ್ಡಜರಿದು ಬಿದ್ದ ಕಾರಣ, ಒಳಗಿದ್ದ ಇಬ್ಬರು ಏಷ್ಯಾದ ಕಾರ್ಮಿಕರು ಅಸುನೀಗಿದ್ದಾರೆ. ಮಗುವೊಂದು ನೀರಿನಲ್ಲಿ ಕೊಚ್ಚಿಹೋಗಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

ಗಂಟೆಗೆ 120 ಕಿ.ಮೀ. ವೇಗ: ಮಸ್ಕತ್‌ನಲ್ಲಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ನಿರಂತರ ಮಳೆಯಿಂದಾಗಿ ದಿಢೀರ್‌ ಪ್ರವಾಹ ಉಂಟಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಒಮನ್‌ನಲ್ಲಿ ಹಲವು ವಿಮಾನಗಳ ಸಂಚಾರದ ಅವಧಿಯನ್ನು ಬದಲಿಸಲಾಗಿದೆ. ಮುಂಬಯಿ, ದಿಲ್ಲಿ, ಕೋಲ್ಕತಾ, ಮನಿಲಾ, ಕೊಲೊಂಬೊ, ಢಾಕಾ ವಿಮಾನಗಳ ಸಂಚಾರದ ಸಮಯವನ್ನು ಬದಲಿಸಲಾಗಿದೆ. ಸಮುದ್ರದ ಬದಿಯಲ್ಲಿರುವ ತಗ್ಗುಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

Advertisement

ಸಿಡಿಲಿಗೆ 4 ಬಲಿ
ಮಧ್ಯಪ್ರದೇಶದ ನಿಮುಚ್‌ ಜಿಲ್ಲೆಯಲ್ಲಿ ಮಳೆ, ಸಿಡಿಲಿನಿಂದಾಗಿ ನಾಲ್ವರು ಅಸುನೀಗಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ, ಬಿಹಾರ, ಪಶ್ಚಿಮಬಂಗಾಲ ಹಾಗೂ ಅಸ್ಸಾಂನಲ್ಲೂ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

ಕೇರಳ, ಕರ್ನಾಟಕ, ತ.ನಾಡಿನಲ್ಲಿ 3 ದಿನ ವರ್ಷಧಾರೆ
ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಂಗಳವಾರದವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅರಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಶಹೀನ್‌ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದಿದೆ. ಮಹಾ ರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಅ.3ರಿಂದ ಅ.6ರ ವರೆಗೆ ಮಳೆಯಾಗಲಿದೆ.

ಆರೆಂಜ್‌ ಅಲರ್ಟ್‌: ಕೇರಳದ ಕಾಸರಗೋಡು ಇಡುಕ್ಕಿ, ಕಲ್ಲಿಕೋಟೆ ಜಿಲ್ಲೆಗಳ ಸಹಿತ ರಾಜ್ಯಾದ್ಯಂತ ಅ.4ರಿಂದ 6ರ ವರೆಗೆ ಆರೆಂಜ್‌ ಅಲರ್ಟ್‌, ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಕೆಲವೆಡೆ ಭೂಕುಸಿತ ಉಂಟಾಗಿದೆ. ಕಲ್ಲಿಕೋಟೆ- ವಯನಾಡ್‌ ರಸ್ತೆಯಲ್ಲಿ ಮಳೆ, ಪ್ರವಾಹ ದಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿದೆ. ತಮಿಳುನಾಡಿ ನಲ್ಲೂ ಭಾರೀ ಮಳೆ ಸುರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next