Advertisement

Fainjal cyclone ದ.ಕ. ಜಿಲ್ಲೆ: ಅಬ್ಬರದ ಮಳೆ; ಹಲವೆಡೆ ಹಾನಿ

01:11 AM Dec 04, 2024 | Team Udayavani |

ಮಂಗಳೂರು: ಫೈಂಜಾಲ್‌ ಚಂಡಮಾರುತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನದವರೆಗೆ ಭಾರೀ ಮಳೆ ಯಾಗಿದ್ದು, ಬಳಿಕ ಮಳೆಯ ತೀವ್ರತೆ ಕಡಿಮೆಯಾಗಿದೆ. ಭಾರೀ ಮಳೆಗೆ ಜಿಲ್ಲೆಯ ಹಲವು ಕಡೆ ಹಾನಿ ಉಂಟಾಗಿದೆ.

Advertisement

ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲೆಯ ಅಂಗನ ವಾಡಿ, ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ರುವ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ಆವರಣ ಗೋಡೆ ಜರಿದು ಬಿದ್ದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ನಗರದ ಕೊಡಿಯಾಲಬೈಲಿನ ಟಿಎಂಎ ಪೈ ಸಭಾಂಗಣದ ಹಿಂಭಾಗದ ಪ್ರದೇಶ, ಭಗವತಿ ನಗರ ರಸ್ತೆ¤, ಕೊಡಿಯಾಲಗುತ್ತು ರಸ್ತೆ, ಕೊಟ್ಟಾರ, ಕೊಟ್ಟಾರ ಚೌಕಿ, ಮಾಲೆಮಾರ್‌ ಸಹಿತ ಹಲವು ಕಡೆ ಕೃತಕ ನೆರೆ ಸೃಷ್ಟಿಯಾಗಿ ಸಮಸ್ಯೆ ಉಂಟಾಗಿದೆ. ಬಿಜೈ, ಕೊಟ್ಟಾರಚೌಕಿ, ಕರಂಗಲಪಾಡಿ, ಜಪ್ಪು ಸಹಿತ ಹಲವು ಕಡೆ ಮನೆಗಳಿಗೆ ಹಾನಿ ಉಂಟಾಗಿದೆ.

ಕೊಡಿಯಾಲಗುತ್ತು ರಾಜಕಾಲುವೆಯೊಂದರ ತಡೆಗೋಡೆ ಜರಿದಿದೆ.

ಭೂಕುಸಿತ ಉಂಟಾದ ಪರಿಣಾಮ ಬಜ್ಪೆ-ಅದ್ಯಪಾಡಿಯ ಸಂಪರ್ಕ ಕಡಿತವಾಗಿದೆ. ಬಂಟ್ವಾಳ ತಾಲೂಕಿನ ಅರಳ ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್‌ಗಳಲ್ಲಿರುವ ಬಲೆ ಬೀಸುವ ದೋಣಿಗಳು ಸೋಮವಾರ ರಾತ್ರಿ ಗಾಳಿ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ಕೂಳೂರು ರಾ. ಹೆದ್ದಾರಿಯಲ್ಲಿ ಗ್ಯಾಸ್‌ಲೈನ್‌ ಸಂಪರ್ಕಕ್ಕೆ ಅಗೆದಿದ್ದ ಹೊಂಡದಲ್ಲಿ ನೀರು ತುಂಬಿ ಅಪಾಯ ಸೂಚಿಸುತ್ತಿತ್ತು.

Advertisement

ತೀರದಲ್ಲಿ ಕಟ್ಟೆಚ್ಚರ
ಇನ್ನೆರಡು ದಿನಗಳವರೆಗೆ ಮಳೆ ಸುರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು ಸಮುದ್ರ ತೀರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಪೆರಾಜೆ:ಆಟೋನಿಲ್ದಾಣಕ್ಕೆ ಹಾನಿ
ಅರಂತೋಡು: ಸುರಿದ ಗಾಳಿ ಮಳೆಗೆ ಪೆರಾಜೆಯ ಜಂಕ್ಷನ್‌ನಲ್ಲಿ ಇರುವ ಆಟೋ ನಿಲ್ದಾಣಕ್ಕೆ ಹಾನಿಯಾಗಿದೆ. ಇದರಿಂದ ರಿಕ್ಷಾಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುವಂತಾಗಿದೆ.

ದಾಖಲೆ ಮಳೆ
ಬಜಪೆಯ ವಿಮಾನ ನಿಲ್ದಾಣದಲ್ಲಿ ಕಳೆದ 24 ಗಂಟೆಯಲ್ಲಿ 156 ಮಿ.ಮೀ. ಮಳೆಯಾಗಿದ್ದು, ದಾಖಲೆಯಾಗಿದೆ.

ಗಾಳಿ ಮಳೆಗೆ ತೀವ್ರ ಹಾನಿ
ಮೂಡುಬಿದಿರೆ: ಪಾಲಡ್ಕ ಗ್ರಾ. ಪಂ. ವ್ಯಾಪ್ತಿಯಲ್ಲಿ ಸೋಮವಾರ ಸುರಿದ ಭಾರೀ ಗಾಳಿ ಮಳೆಗೆ 1ನೇ ವಾರ್ಡಿನ ರಾಮಮೋಹನ ನಗರ ಕಾಲನಿಯ ಲೀಲಾ ಶೆಟ್ಟಿ ಅವರ ಮನೆಗೆ ಬೃಹತ್‌ ಗಾತ್ರದ ಮರವೊಂದು ಉರುಳಿ ಬಿದ್ದು ಮನೆಗೆ ತೀವ್ರ ಹಾನಿಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮರವನ್ನು ತೆರವು ಮಾಡಲು ಸಹಕರಿಸಿದರು. ಕಡಂದಲೆ ಗ್ರಾಮ ಪಂ. ವ್ಯಾಪ್ತಿಯ ಹೊನ್ನಮ್ಮ ಗೌಡ್ತಿ ಅವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಮನೆಗೆ ಹಾಗೂ ಮನೆಯ ವಿದ್ಯುತ್‌ ಉಪಕರಣಗಳಿಗೆ ಹಾನಿ ಆಗಿದೆ.

ಮನೆಯ ಗೋಡೆ ಕುಸಿತ
ಪುಂಜಾಲಕಟ್ಟೆ: ಸೋಮವಾರ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಕಂಡದಬೆಟ್ಟು ಎನ್ನುವಲ್ಲಿ ರಾಧಾ ಅವರ ಮನೆಯ ಗೋಡೆ ಜರಿದು ಬಿದ್ದು ಮನೆ ಭಾಗಶಃ ಹಾನಿಯುಂಟಾದ ಘಟನೆ ಸಂಭವಿಸಿದೆ. ಹಂಚಿನ ಛಾವಣಿ ಸಹಿತ ಕಲ್ಲಿನ ಇಟ್ಟಿಗೆಯ ಗೋಡೆ ಕುಸಿದು ಬಿದ್ದಿದೆ. ಯಾರಿಗೂ ಅಪಾಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next