Advertisement
ಇಂದಿನ ಕಾಲಘಟ್ಟದಲ್ಲಿ ಇಂಜಿನಿಯರಿಂಗ್ ಓದುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಶಾಲಾಕಾಲೇಜು ಶಿಕ್ಷಣ ಮುಗಿದ ಮೇಲೆ, ಇಂಜಿನಿಯರಿಂಗ್ ಓದುವುದು ಕೂಡ ಕಡ್ಡಾಯವಾದಂತೆ ಕಂಡುಬರುತ್ತಿದೆ. ಕೆಲವರು ಕೇವಲ ಡಿಗ್ರಿಗೋಸ್ಕರ ಇಂಜಿನಿಯರಿಂಗ್ ಸೇರಿಕೊಂಡರೆ, ಹಲವಾರು ಮಂದಿ ಮೆಡಿಕಲ್ ಸೀಟ್ ಸಿಕ್ಕಿಲ್ಲವೆಂದು ಇಂಜಿನಿಯರ್ ಆಗಲು ಹೊರಟಿರುತ್ತಾರೆ. ಇನ್ನು ಸುಮಾರಷ್ಟು ಜನರಿಗೆ ಪಿಯುಸಿ ಮುಗಿದ ಮೇಲೆ ಏನು ಮಾಡುವುದು ಎಂದು ತೋಚದೆ ಇಂಜಿನಿಯರಿಂಗ್ ಕಾಲೇಜು ಬಾಗಿಲು ತಟ್ಟಿದರೆ, ಮನೆಯಲ್ಲಿ ಅಪ್ಪ-ಅಮ್ಮ, “ಇಂಜಿನಿಯರ್ ಆಗು, ಒಳ್ಳೆ ಸಂಬಳ ಬರುತ್ತೆ’ ಅಂತ ಹೇಳಿದ್ದಕ್ಕೆ “ಇಂಜಿನಿಯರ್ ಆಗಲು ಹೊರಟಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಇಷ್ಟೆಲ್ಲದರ ಮಧ್ಯೆ ನಾನು ದೊಡ್ಡ ಇಂಜಿನಿಯರ್ ಆಗಬೇಕು, ವಿಶ್ವೇಶ್ವರಯ್ಯ ನನ್ನ ರೋಲ್‌ಮಾಡೆಲ್’ ಅಂತ ಇಂಜಿನಿಯರಿಂಗ್ ಸೇರಿಕೊಂಡಿರುವ ವಿದ್ಯಾರ್ಥಿ ಸಮೂಹ ಒಂದಿದೆ.
Related Articles
Advertisement
ಇಂಜಿನಿಯರಿಂಗ್ ನಮಗೇನೂ ಕಲಿಸದಿದ್ದರೂ ನಮ್ಮೊಳಗಿನ ಒಬ್ಬ ಕಲಾವಿದ, ಬರಹಗಾರ, ಕ್ರೀಡಾಪಟು, ಸಂಗೀತಗಾರನನ್ನು ಪರಿಚಯಿಸಿ ಕೊಡುತ್ತದೆ. ಇದೇ ಕಾರಣಕ್ಕೆ ಅದೆಷ್ಟೋ ಮಂದಿ ಇಂಜಿನಿಯರಿಂಗ್ ಸೇರಿಕೊಳ್ಳುತ್ತಾರೆ ಎಂಬುವುದನ್ನು ಕೇಳುವುದಕ್ಕೆ ಆಶ್ಚರ್ಯವೆನ್ನಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿಯೂ ನಮ್ಮದೇ ಹವಾ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿನ ಸಹಸ್ರಾರು ಟ್ರೋಲ್ ಪೇಜ್‌ಗಳಿವೆ, ಅದರಲ್ಲಿ ಎರಡರಲ್ಲಿ ಒಂದು ಪೇಜ್ ಅಡ್ಮಿನ್ ಇಂಜಿನಿಯರ್ ಆಗಿರುತ್ತಾನೆ ಹಾಗೂ ಆ ಪೇಜ್‌ಗಳ ಮೂರರಲ್ಲಿ ಒಂದು ಪೋಸ್ಟ್ ಇಂಜಿನಿಯರ್‌ನನ್ನು ಟ್ರೋಲ್ ಮಾಡುವುದೇ ಆಗಿರುತ್ತದೆ. ಆದರೂ ಯಾವುದೇ ಬೇಸರ, ಮುಜುಗರವಿಲ್ಲದೆ ಆ ಎಲ್ಲ ಪೋಸ್ಟ್‌ಗಳನ್ನು ಶೇರ್, ಲೈಕ್ ಮಾಡಿ ಆನಂದಿಸುವುದರಲ್ಲಿ ಸಿಗುವ ಖುಷಿ ಮತ್ತೆಲ್ಲೂ ಸಿಗದು.
ಬೆಂಗಳೂರಿನ ಯಾವುದೇ ದಿಕ್ಕಿನಲ್ಲಿ ನಿಂತು ಕಲ್ಲು ಎಸೆದರೂ ಅದು ಇಂಜಿನಿಯರರ ತಲೆಗೆ ಬೀಳುತ್ತದೆ ಎಂಬ ಮಾತು ಸುಳ್ಳಲ್ಲ. ನಮ್ಮ ತಲೆಗೂ ಒಂದು ದಿನ ಕಲ್ಲು ಬೀಳಲಿ ಎಂಬಂತೆ ಮತ್ತಷ್ಟು ಇಂಜಿನಿಯರ್ಗಳು ತಯಾರಾಗುತ್ತಿರುವ ಮಾತು ಕೂಡ ನಿಜ. ಇಂಜಿನಿಯರ್‌ಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಹೆಚ್ಚು ಹೆಚ್ಚು ಮಂದಿ ಕಲಾವಿದ, ನೃತ್ಯಗಾರ ಇತ್ಯಾದಿಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾದರೆ, ಇಂಜಿನಿಯರಿಂಗ್ ಗತಿ ಏನು ಎಂದು ಹೇಳುವುದು ಕಷ್ಟ .
ಶಶಾಂಕ ಹೆಗಡೆ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು