ಕಿಕ್ಕೇರಿ: ಬೇಸಿಗೆ ಬಂತೆಂದರೆ ಜೀವ ಸಂಕುಲಕ್ಕೆ ಬೇಕಾದ ಕೆರೆಕಟ್ಟೆಯ ನೀರನ್ನು, ಕೆರೆಕಟ್ಟೆ ಪಾತ್ರದ ಜಮೀನಿನವರು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆರೆ ಬತ್ತಲು ಆರಂಭಿಸುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣಿಪಕ್ಷಿಗಳು ಆಹಾರಕ್ಕಿಂತ ನೀರಿಗಾಗಿ ಹುಡುಕಾಟ ದೊಡ್ಡ ಸಮಸ್ಯೆವಾಗಿದೆ. ತಾಲೂಕಿನ ದೊಡ್ಡಕೆರೆಯಾದ ಅಮಾನಿಕೆರೆಯಲ್ಲಿ ಹೂಳು ಹೆಚ್ಚಾದ ಕಾರಣ ನೀರಿನ ಸಂಗ್ರಹದ ಸಾಮರ್ಥ್ಯ ಕುಸಿದಿದೆ. ಒತ್ತುವರಿ ಕಾಟದಿಂದ ಈಗಾಗಲೇ ಸಾಕಷ್ಟು ಕೆರೆ ಪಾತ್ರ ಕಿರಿದಾಗಿದೆ. ಹಿಂದಿದ್ದ ದಕ್ಷ ಅಧಿಕಾರಿ ಡಾ.ಎಚ್.ಎಲ್. ನಾಗರಾಜು ತಹಶೀಲ್ದಾರ್ ಆಗಿದ್ದಾಗ ಕೆರೆ ಒತ್ತುವರಿಗಾಗಿ ಶ್ರಮಿಸಿದ್ದರು. ವರ್ಗಾವಣೆ ನಂತರ ಕೆರೆ ಒತ್ತುವರಿ ತೆರವಾಗಿಲ್ಲ. ಹೀಗಾಗಿ ನೀರಿನ ಸಾಂದ್ರತೆ ಕಳೆದುಕೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬಿಸಿಲಿಗೆ ಜೀವಿಗಳು ತತ್ತರ: ಕೆರೆಯಲ್ಲಿ ನೀರು ತುಂಬಿದ್ದರೆ ಮಾತ್ರ, ಇಲ್ಲಿನ ರೈತರ ಬದುಕು ಹಸನು ಕಾಣಬಹುದಾಗಿದೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲಿಗೆ ಪ್ರಾಣಿಪಕ್ಷಿಗಳು ತತ್ತರಿಸುತ್ತಿವೆ. ನೀರಿನ ಜೋಪಾನ ಮಾಡಿಕೊಳ್ಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗಮನಹರಿಸದಿದ್ದರೆ, ಬೇಸಿಗೆ ಮುಗಿಯುವು ದರೊಳಗೆ ಸಂಪೂರ್ಣ ಕೆರೆ ಬರಿದಾಗುವ ಜೊತೆಗೆ ಪ್ರಾಣಿಪಕ್ಷಿಗಳ ಜೀವಕ್ಕೆ ಕುತ್ತು ಕಾಡಲಿದೆ. ಅಕ್ರಮವಾಗಿ ಕೆರೆ ನೀರಿನ ಬಳಕೆ ವರ್ಷಪೂರ್ಣ ಕೆರೆದಂಡೆಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕಂಡು ಕಾಣದಂತೆ ಕಣ್ಣುಮುಚ್ಚಿಕೊಂಡಿರುವುದೇ ಇಂತಹ ಅಕ್ರಮ ಕಾರಣ ಎನ್ನುವುದು ನಾಗರಿಕರ ನಿವೇದನೆಯಾಗಿದೆ.
ಅಧಿಕಾರಿಗಳು ಮೌನ: ಕಿಕ್ಕೇರಮ್ಮನ ಗುಡಿಯ ರಸ್ತೆಯಿಂದ ಶ್ರವಣಬೆಳಗೂಳಕ್ಕೆ ಹೋಗುವ ರಸ್ತೆಯ ಬೂನಹಳ್ಳಿ ತಿರುವು, ಮಾದಿಹಳ್ಳಿ, ಸೊಳ್ಳೇಪುರ, ಬ್ರಹ್ಮೇಶ್ವರ ದೇಗುಲ ಕೆರೆ ದಂಡೆಯಲ್ಲಿ ಅಕ್ರಮವಾಗಿ ಪಂಪ್ ಮೂಲಕ ನೀರಿನ ಬಳಕೆ ಎಗ್ಗಿಲ್ಲದೆ ಸಾಗುತ್ತಿದೆ. ಪ್ರಭಾವಿ ವ್ಯಕ್ತಿಗಳ ಕೃತ್ಯಕ್ಕೆ ಅಧಿಕಾರಿಗಳು ಮೌನವಾಗಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಕಳೆದ ಎರಡು ವರ್ಷದಿಂದ ನಾಮಕಾವಸ್ಥೆಗೆ ಅಧಿಕಾರಿಗಳು ಅಕ್ರಮ ಮೋಟಾರ್ ಅಳವಡಿಸಿ ಕೊಂಡಿರುವ ರೈತರ ಪಂಪುಸೆಟ್ ವಶಪಡಿಸಿಕೊ ಳ್ಳುವುದು, ನಂತರ ಒಂದೆರಡು ದಿನಗಳ ನಂತರ ಎಂದಿನಂತೆ ನಡೆಯುವುದು ಯಥಾಸ್ಥಿತಿಯಂ ತಾಗಿದೆ ಎಂಬ ದೂರುಗಳು ಕೇಳಿಬರುತ್ತಿದೆ.
ಕೆರೆಯಲ್ಲಿ ಜಾನುವಾರುಗಳಿಗೂ ಕುಡಿಯಲು ನೀರು ಬಿಡದೆ ಅಕ್ರಮವಾಗಿ ಅಳವಡಿಸಿಕೊಂಡಿರುವ ಮೋಟಾರ್‌ಗಳನ್ನು ಕೂಡಲೇ ಅಧಿಕಾರಿಗಳು ವಶಪಡಿಸಿಕೊಂಡು, ಕ್ರಮ ಕೈಗೊಳ್ಳಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.
ಕೆರೆಯ ನೀರು ಬಳಸಿಕೊಳ್ಳುತ್ತಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಯಂತ್ರಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಗುರುಪ್ರಸಾದ್, ಎಇಇ, ಕಾವೇರಿ ನೀರಾವರಿ ನಿಗಮ