Advertisement

ಅಕ್ರಮ -ಸಕ್ರಮ ಸ್ಥಳದಲ್ಲಿ ವಸತಿ ಯೋಜನೆಗೆ ಜಾಗ ಸಮತಟ್ಟು

04:14 PM Dec 15, 2017 | Team Udayavani |

ಸುಳ್ಯ : ಅಕ್ರಮ ಸಕ್ರಮದಡಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರೂ ಪೂರ್ಣ ಮಂಜೂರುಗೊಳ್ಳದೆ ಬಾಕಿ ಉಳಿದ ಜಾಗಕ್ಕಾಗಿ ದಶಕಗಳ ಕಾಲ ಹೋರಾಟ ನಡೆಸುತ್ತಿದ್ದ ನಗರ ವ್ಯಾಪ್ತಿಯ ಕುಟುಂಬವೊಂದು ನೆಲೆಸಿದ ಜಾಗದಲ್ಲಿ ನ.ಪಂ.ನ ಬಡ ಕುಟುಂಬದ ವಸತಿ ಯೋಜನೆಗಾಗಿ ಕಾಮಗಾರಿ ನಡೆಸಿದ್ದು, ಈ ಬಗ್ಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿದ್ದಾರೆ.

Advertisement

ಕಸಬಾ ಗ್ರಾಮದ ಶಾಂತಿನಗರ ಕುಕ್ಕಾಜೆಕಾನ ಎಂಬಲ್ಲಿ ಸೀತಮ್ಮ ಎಂಬವರ ಕುಟುಂಬ ನೆಲೆಸಿದೆ. 1992ರಲ್ಲಿ 1.20 ಎಕ್ರೆ ಸ್ಥಳಕ್ಕೆ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ 1998ರಲ್ಲಿ ಮಂಜೂ ರಾತಿಗೆ ಶಿಫಾರಸ್ಸುಗೊಂಡಿತ್ತು. ಆದರೆ ಡಿನೋಟಿಸ್‌ ನೀಡುವಾಗ 20 ಸೆಂಟ್ಸ್‌ ಮಾತ್ರ ಮಂಜೂರುಗೊಂಡಿತ್ತು. ಗುಡ್ಡ ಪ್ರದೇಶವಾಗಿರುವ ಈ ಜಾಗದಲ್ಲಿ ತೆಂಗು ಮತ್ತು ಗೇರು ಕೃಷಿ ಕೈಗೊಂಡಿದ್ದರು. 

ಉಳಿದಂತೆ ಒಂದು ಎಕರೆಯಷ್ಟು ಮಂಜೂರಾತಿಗೊ ಳ್ಳದ ಸ್ಥಳವನ್ನು ಮಂಜೂರು ಗೊಳಿಸುವಂತೆ ಹಲವಾರು ಪ್ರಯತ್ನಗಳನ್ನು ಕುಟುಂಬ ಮುಂದುವರಿಸಿತ್ತು. ಆದರೂ ಮಂಜೂರಾತಿಗೊಳ್ಳದ ಸರಕಾರಿ ಸ್ಥಳದಲ್ಲಿ ನ.ಪಂ. ಇದೀಗ ವಸತಿ ಯೋಜನೆಗಾಗಿ ಜಾಗ ಸಮತಟ್ಟುಗೊಳಿಸುವ ಕಾಮಗಾರಿಗೆ ಮುಂದಾಗಿದೆ. ಆದರೆ, ಪಂಚಾಯತ್‌ನ ಕಾಮಗಾರಿ ಯಿಂದಾಗಿ ತನಗೆ ಅನ್ಯಾಯವಾಗಿದೆ ಎಂದು ಸೀತಮ್ಮ ಅವರ ಮಗ ಗಂಗಾಧರ ಅವರು ನಗರ ಪಂಚಾಯತ್‌ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. 

ಡಿಸಿ ಸೂಚನೆಯಂತೆ ಕ್ರಮ
ಆದರೆ ನಗರ ಪಂಚಾಯತ್‌ ಅಧಿಕಾರಿಗಳು, ಕೃಷಿರಹಿತ ಸರಕಾರಿ ಸ್ಥಳವಾಗಿದ್ದರಿಂದ ಜಿಲ್ಲಾಧಿಕಾರಿಗಳು ವಸತಿ ಯೋಜನೆಗೆ ಉಪಯೋಗಿಸಿಕೊಳ್ಳುವಂತೆ ಸೂಚಿಸಿದ್ದಾರೆ. ನಗರದಲ್ಲಿ ವಸತಿ ರಹಿತರಿಗೆ ನಿವೇಶನಕ್ಕಾಗಿ ಸ್ಥಳದ ಕೊರತೆಯಿರುವುದರಿಂದ ಈ ಸ್ಥಳವನ್ನು ವಶಕ್ಕೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಸೀತಮ್ಮ ಕುಟುಂಬದ ಮನೆ ಸುತ್ತಲಿನ ಸುಮಾರು 40 ಸೆಂಟ್ಸ್‌ ಸ್ಥಳವನ್ನು ಹೊರತುಪಡಿಸಿ ಉಳಿದಂತೆ ನಿವೇಶನಕ್ಕೆ ಸಮತಟ್ಟುಗೊಳಿಸಲು ಮುಂದಾಗಿದ್ದೇವೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಸಭೆಯ ಚರ್ಚೆ
ಕೃಷಿರಹಿತ ಸ್ಥಳವನ್ನು ವಸತಿ ರಹಿತರ ನಿವೇಶನಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಬಂದಿತ್ತು. ಅದರಂತೆ ಪಂಚಾಯತ್‌ ಕ್ರಮಕ್ಕೆ ಮುಂದಾಗಿದೆ. ಇದರ ವಿರುದ್ಧ ಡಿ. 13ರಂದು ಕುಟುಂಬದವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ.
ಹರಿಣಿ ನಾರಾಯಣ, ನ.ಪಂ.
   ಉಪಾಧ್ಯಕ್ಷೆ ಹಾಗೂ ವಾರ್ಡ್‌ ಸದಸ್ಯೆ

Advertisement

ಕೃಷಿ ಹಾಳು
ಹಲವಾರು ವರ್ಷಗಳಿಂದ ತನ್ನ ಸ್ವಾಧೀನದಲ್ಲಿರುವ ಭೂಮಿಯನ್ನು ಮಂಜೂರುಗೊಳಿಸದೇ ಅನ್ಯಾಯವಾಗಿ ನಗರ ಪಂಚಾಯತ್‌ ಯಾವುದೇ ತಿಳಿವಳಿಕೆ ನೀಡದೇ ತಾವು ಕೈಗೊಂಡ ಕೃಷಿ ಹಾಳುಮಾಡಿದೆ.
– ಗಂಗಾಧರ, ಅರ್ಜಿದಾರ

ಭರತ್‌ ಕನ್ನಡ್ಕ

Advertisement

Udayavani is now on Telegram. Click here to join our channel and stay updated with the latest news.

Next