ಪಡುಬಿದ್ರಿ: ಉಡುಪಿ ಜಿಲ್ಲೆಯ ಪಲಿಮಾರು ಗ್ರಾಮದ ಅವರಾಲು ಕೊಪ್ಪಲು ಎಂಬಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕಾ ಪ್ರದೇಶಕ್ಕೆ ಪಡುಬಿದ್ರಿ ಪಿಎಸ್‌ಐ ಪುರುಷೋತ್ತಮ್ ಹಾಗೂ ಸಿಬಂದಿಗಳು ಗುರುವಾರದಂದು ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಮರಳುಗಾರಿಕೆಗಾಗಿ ದಂಧೆಕೋರರು ರಾತ್ರಿಯ ವೇಳೆ ಬಳಸಿಕೊಳ್ಳಲು ಉಡುಪಿ ಜಿಲ್ಲೆಯ ಶಾಂಭವಿ ನದಿ ದಂಡೆಯಲ್ಲಿ ಇಟ್ಟಿದ್ದ ದೊಡ್ಡ ದೋಣಿಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಣ್ಣುಮುಚ್ಚಾಲೆ ಆಟವಾಡುವ ದಂಧೆಕೋರರು:
ಈ ಕುರಿತಾಗಿ ಪೊಲೀಸರು ದಾಳಿಯಾಗಬಹುದೆಂಬ ಮುನ್ಸೂಚನೆಯನ್ನು ಅರಿತಿರುವ ದಂಧೆಕೋರರು ತಾತ್ಕಾಲಿಕವಾಗಿ ತಮ್ಮ ಕಾನೂನು ಬಾಹಿರ ಚಟುವಟಿಕೆಯನ್ನು ನಿಲ್ಲಿಸಿದ್ದರೂ, ಕಣ್ಣುಮುಚ್ಚಾಲೆಯಂತೆ ಶಾಂಭವಿ ಹೊಳೆಯ ಆಚೆಯ ದ.ಕ., ಗಡಿಭಾಗದಿಂದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುವ ಇವರು ಸಮಯ ಸಾಧಿಸಿ ತಮ್ಮ ದಂಧೆಯನ್ನು ಮುಂದುವರಿಸುತ್ತಲೇ ಬಂದಿದ್ದಾರೆ ಎಂದು ಪೊಲೀಸ್ ಮಾಹಿತಿಗಳು ತಿಳಿಸಿವೆ.
ಕಂಚಿನಡ್ಕದ ನಿಜಾಮುದ್ದೀನ್, ಅವರಾಲು ಮಟ್ಟುವಿನ ರೋಹಿತ್ ಹಾಗೂ ಪ್ರಶಾಂತ್ ಎಂಬವರು ಈ ಅಕ್ರಮ ದಂಧೆಯನ್ನು ನಡೆಸುತ್ತಿರುವರು. ರಾತ್ರಿಯ ವೇಳೆ ಇಲ್ಲಿನ ನದೀಪಾತ್ರದಿಂದ ಅಗೆದು ತೆಗೆಯುತ್ತಿರುವ ಮರಳನ್ನು ಉಡುಪಿ ಜಿಲ್ಲೆಯ ಭಾಗದಿಂದ ದ. ಕ. ಜಿಲ್ಲೆಯ ಬಾಂದೊಟ್ಟು ಎಂಬಲ್ಲಿ ಶೇಖರಿಸಿಡಲಾಗುತ್ತಿರುವ ಕುರಿತಾಗಿ ಸ್ಥಳೀಯರು ನೀಡಿದ ಮಾಹಿತಿಯೂ ಸೇರಿದಂತೆ ಎಲ್ಲಾ ವಿವರಗಳ ಕುರಿತಾಗಿ ವರದಿಯನ್ನು ಸಿದ್ಧಪಡಿಸಿ ಪಡುಬಿದ್ರಿ ಪೊಲೀಸರು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಿರುವುದಾಗಿ ಪಿಎಸ್‌ಐ ಪುರುಷೋತ್ತಮ್ ಮಾಹಿತಿಯಿತ್ತಿದ್ದಾರೆ.