ಕನಕಗಿರಿ: ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಮರಳು ಸಾಗಾಟ ಮುಂದುವರಿದಿದ್ದು, ಇದೆಲ್ಲ ಮಾಹಿತಿ ಇದ್ದರೂ ಅ ಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ಸಮೀಪದ ನವಲಿ ಗ್ರಾಮದ ಪಿಯು ಕಾಲೇಜು ಹಾಗೂ ಉದ್ದಿಹಾಳ್ ರಸ್ತೆ ಬದಿ ಸೇರಿದಂತೆ ಗ್ರಾಮದ ಹಲವಾರು ಸ್ಥಳಗಳಲ್ಲಿ ಮರಳನ್ನು ಅಗೆಯಲಾಗುತ್ತಿದೆ. ಅಷ್ಟೇ ಅಲ್ಲ ವಿವಿಧ ತಾಲೂಕು, ಜಿಲ್ಲೆಗಳಿಗೆ ರಫ್ತು ಮಾಡಲಾಗುತ್ತಿದೆ. ಬುನ್ನಟ್ಟಿ, ಯತ್ನಟ್ಟಿ, ಗೂಡದೂರು, ಮಲ್ಲಿಗೆವಾಡ, ಹೀರೆಖೇಡ ಗ್ರಾಮಗಳ ಮೂಲಕ ಮರಳು ಸಾಗಿಸಲಾಗುತ್ತಿದೆ. ವಾಹನಗಳ ಸಾಮರ್ಥ್ಯಕ್ಕೂ ಮೀರಿ ಮರಳು ಸಾಗಿಸುತ್ತಿರುವುದರಿಂದ ಡಾಂಬರ್ ರಸ್ತೆಯ ಕೆಳಗಿರುವ ಬಿಂಚಿ ಕಲ್ಲುಗಳು ಕಿತ್ತು ಹೋಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆಯಲ್ಲದೇ ರಸ್ತೆ ತೀರಾ ಹದಗೆಟ್ಟಿವೆ.
ಕೆಸರಿನ ಗದ್ದೆಗಳಂತಾದ ಡಾಂಬರ್ ರಸ್ತೆಗಳು: ಈಚನಾಳ, ನವಲಿ, ಉದ್ಯಾಳ್ ಗ್ರಾಮಗಳಲ್ಲಿ ಒಂದು ದಿನಕ್ಕೆ 25 ರಿಂದ 30 ಟ್ರಾಕ್ಟರ್, ಟಿಪ್ಪರ್ ಗಳ ಮೂಲಕ ಹಗಲು ರಾತ್ರಿಯೆನ್ನದೆ ಮರಳು ರವಾನಿಸಲಾಗುತ್ತಿದೆ. ಇಲ್ಲಿನ ಪ್ರಮುಖ ಡಾಂಬರ್ ರಸ್ತೆಗಳು ಹದಗೆಟ್ಟು ರಸ್ತೆ ಮೇಲೆಲ್ಲ ನೀರು ಶೇಖರಣೆಗೊಂಡು ಕೆಸರಿನ ಗದ್ದೆಗಳಂತಾಗಿವೆ. ದ್ವಿಚಕ್ರ ಹಾಗೂ ವಿವಿಧ ವಾಹನ ಸವಾರರು ಜೀವದ ಹಂಗುದೊರೆದು ವಾಹನ ಚಲಿಸುವ ವಾತಾವರಣ ನಿರ್ಮಾಣವಾಗಿದೆ.
ಹಿಂದೆ ನವಲಿ ಗ್ರಾಮದಲ್ಲಿ ಮರಳು ಸಾಗಾಟ ವೇಳೆ ಮರಳು ಅಗೆಯುವಾಗ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಮೂರು ಜನರು ಮೃತಪಟ್ಟಿರುವ ಸಂಗತಿ ಅಧಿಕಾರಿಗಳ ಗಮನಕ್ಕಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಅಕ್ರಮ ಮರಳು ಸಾಗಾಟದಿಂದ ಗ್ರಾಮದ ಡಾಂಬರ್ ರಸ್ತೆಗಳು ಹದಗೆಟ್ಟಿವೆ. ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಮರಳು ಸಾಗಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ಎಸ್‌ಎಫ್‌ಐ ಸಂಘಟನೆ ಸೇರಿದಂತೆ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. –
ಶಿವಕುಮಾರ್, ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ, ಈಚನಾಳ ಗ್ರಾಮಸ್ಥ
ತಾಲೂಕಿನ ವಿವಿಧೆಡೆ ಅಕ್ರಮ ಮರಳು ಸಾಗಿಸುವವರ ವಿರುದ್ಧ ದೂರು ದಾಖಲಿಸಲಾಗಿದ್ದು, ದಂಡ ವಿಧಿಸಲಾಗಿದೆ. ವಿವಿಧ ಗ್ರಾಮಗಳಲ್ಲಿ ಮರಳು ಸಾಗಿಸುವವರನ್ನು ಗಮನಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. –
ಧನಂಜಯ್ ಮಾಲಗಿತ್ತಿ, ತಹಶೀಲ್ದಾರ್.
-ಮಹೆಬೂಬ ಎಚ್.ಗಂಗಾವತಿ