ಮೈಸೂರು: ನಗರದ ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ನೇಮಕಾತಿ ವೇಳೆ ನಡೆಸಿದ್ದ ಅಕ್ರಮದ ತನಿಖೆ ಪೂರ್ಣಗೊಂಡಿದ್ದು, ಏಕಕಾಲಕ್ಕೆ 103 ಮಂದಿಯನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ನಡೆದಿದೆ.
2018ರಲ್ಲಿ ಮೈಸೂರು ಕೇಂದ್ರದ ವಿವಿಧ ವಿಭಾಗಗಳ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ವೇಳೆ ಅಕ್ರಮ ನಡೆದಿರುವ ಬಗ್ಗೆ ಸುಳಿವು ಪಡೆದ ಮೇಲಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ ವೇಳೆ ಪ್ರಕರಣದ ಆಳ ತೀವ್ರವಾಗಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ವರದಿ ನೀಡಿದ್ದರು. ಸದರಿ ವರದಿ ಆಧಾರದ ಮೇಲೆ 2018ರ ನೋಟಿಫಿಕೇಷನ್ ಅನ್ವಯ ನೇಮಕಗೊಂಡಿದ್ದ 103 ಮಂದಿಯನ್ನೂ ವಜಾಗೊಳಿಸಿ ಬಿಎಆರ್‌ಸಿ ಕ್ರಮ ಕೈಗೊಂಡಿದೆ.
ಘಟನೆ ವಿವಿರ: ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಯುವ ಲಿಖೀತ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಅಗಿದ್ದು, ಈ ಹಿಂದೆ ಕೆಲಸ ಮಾಡುತ್ತಿದ್ದ ಕೆಲವರೇ ಈ ಕೃತ್ಯ ಎಸಗಿದ್ದರು ಎಂದು ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಬಹುತೇಕ ಹುದ್ದೆಗಳಿಗೆ ಹಾಲಿ ಕೆಲಸಗಾರರ ಮಕ್ಕಳು, ಸೊಸೆಯಂದಿರು, ಸಂಬಂಧಿಕರನ್ನೇ ನೇಮಕ ಮಾಡಿಕೊಂಡಿ ದ್ದುದು ಅಕ್ರಮ ನಡೆದಿರುವುದಕ್ಕೆ ಪುಷ್ಟಿ ನೀಡಿತ್ತು. ಅಕ್ರಮದ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು ಸಿಬಿಐಗೆ ಪ್ರಕರಣವನ್ನು ವಹಿಸಿದ್ದಲ್ಲದೆ, ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನೂ ತಿಳಿಸಿದ್ದರು.
ಅಂತೆಯೇ ಅಂದು ಕೆಲವರ ಮನೆ ಮೇಲೆ ದಾಳಿ ನಡೆಸಿದ ಸಿಬಿಐ, ಪ್ರಶ್ನೆಪತ್ರಿಕೆ ಸೇರಿದಂತೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ತನಿಖೆಗೆ ಇಳಿದಿತ್ತು. ಇದೀಗ ಸಿಬಿಐ ನೀಡಿದ ವರದಿ ಆಧರಿಸಿ 103 ಮಂದಿಯನ್ನು ಕೆಲಸದಿಂದ ವಜಾ ಮಾಡಿರುವುದು ಒಂದೆಡೆಯಾದರೆ, ಈ ಹಗರಣದ ಹಿಂದಿದ್ದಾರೆ ಎನ್ನಲಾದ ಫೈರ್ಮನ್ ಕೃಷ್ಣಪ್ಪ, ಸೈಂಟಿಫಿಕ್ ಅಸಿಸ್ಟೆಂಟ್ ಮಾಧವನ್ ಎಂಬವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಮಾತ್ರವಲ್ಲ, ಆಡಳಿತಾಧಿಕಾರಿ ಟಿ.ಕೆ.ಬೋಸ್, ಸಹಾಯಕ ಆಡಳಿತಾಧಿಕಾರಿ ಶ್ರೀಪಾಲ್ ಅವರನ್ನು ಮೈಸೂರು ಕೇಂದ್ರದಿಂದ ಪನಿಷ್ಮೆಂಟ್ ಟ್ರಾನ್ಸ್‌ಫರ್ ಮಾಡಲಾಗಿದೆ. ಉಳಿದಂತೆ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಬಿ.ಲತಾ ಅವರ ವಿರುದ್ಧ ಚಾರ್ಜ್ ಶೀಟ್ ಹಾಕಲಾ ಗಿದ್ದರೆ, ವಿಜಿಲೆನ್ಸ್ ಅಧಿಕಾರಿಯಾಗಿದ್ದ ಅಂಗೂರ್ ಅಗರ್ವಾಲ್ ಅವರನ್ನು ಸದರಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ.