Advertisement

5450 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ

06:05 AM Jan 14, 2018 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ಅವಧಿಯಲ್ಲಿ 5,450 ಕೋಟಿ ರೂ.ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಈ ಕುರಿತು ದಾಖಲೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಮೂಲಕವೇ 2014-15 ರಿಂದ 2016-17 ನೇ ಸಾಲಿನಲ್ಲಿ 60,56,440 ಮೆಟ್ರಿಕ್‌ ಕಬ್ಬಿಣದ ಟನ್‌ ಅದಿರು ಅಕ್ರಮವಾಗಿ ಸಾಗಾಟವಾಗಿದೆ ಎಂದು ದೂರಿದ್ದಾರೆ.

ಶನಿವಾರ ಜೆಪಿ ನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇದೊಂದು ಬೃಹತ್‌ ಹಗರಣವಾಗಿದ್ದು ಈ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಮೈಸೂರು ಮಿನರಲ್ಸ… ಲಿಮಿಟೆಡ್‌ ಮೂಲಕ ಗಣಿಗಾರಿಕೆ ಗುತ್ತಿಗೆ ಪಡೆದಿರುವ ಕಂಪೆನಿಗಳು ಒಪ್ಪಂದದ ಪ್ರಕಾರ ವರ್ಷಕ್ಕೆ 30 ಲಕ್ಷ ಟನ್‌ ಅದಿರು ತೆಗೆಯಲು ಅನುಮತಿ ಪಡೆದಿವೆ. ಆದರೆ, 3 ವರ್ಷದಲ್ಲಿ ಹೆಚ್ಚುವರಿಯಾಗಿ 60,56,440 ಟನ್‌ ಅದಿರು ತೆಗೆದು ಸಾಗಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಎಂಎಂಎಲ್‌ ಅಧಿಕಾರಿಗಳ ತಂಡವೇ ಆಂತರಿಕವಾಗಿ ನಡೆಸಿರುವ ತನಿಖೆಯಿಂದ ಈ ಅಂಶ ಬಯಲಿಗೆ ಬಂದಿದೆ. 2017ರ ಏಪ್ರಿಲ್‌ನಲ್ಲಿ ಸಲ್ಲಿಸಿರುವ ಅಧಿಕಾರಿಗಳ ವರದಿ ಪ್ರಕಾರವೇ 2014 ರಿಂದ 2015ರ ಅವಧಿಯಲ್ಲಿ 2,062 ಕೋಟಿ ರೂ. ಮೌಲ್ಯದ ಅದಿರು ಅಕ್ರಮವಾಗಿ ಸಾಗಣೆಯಾಗಿದೆ. ತನಿಖಾ ವರದಿ ಪ್ರತಿ ಪಡೆದುಕೊಂಡಿದ್ದೇನೆ. ಅದರಲ್ಲಿರುವ ಪ್ರಮುಖ 14 ಪುಟಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದೇನೆ ಎಂದು ಹೇಳಿದರು.

Advertisement

2014-15 ರಿಂದ 2016-17 ರವರೆಗೆ ಅಧಿಕೃತವಾಗಿ ಇಂಡಿಯನ್‌ ಬ್ಯೂರೋ ಆಫ್ ಮೈನ್ಸ್‌ಗೆ ನೀಡಿರುವ ವರದಿ ಪ್ರಕಾರ ಗಣಿಗಾರಿಕೆ ಮಾಡಿದ ಅದಿರಿನ ಪ್ರಮಾಣ 60,56,440 ಮೆಟ್ರಿಕ್‌ ಟನ್‌. ಇದಕ್ಕೆ ಮೂರು ಪಟ್ಟು ಸೇರಿಸಿ ಪ್ರತಿ ಟನ್‌ಗೆ 3 ಸಾವಿರ ರೂ.ಗಳಂತೆ ಲೆಕ್ಕ ಹಾಕಿದರೆ 5,450 ಕೋಟಿರೂ. ಆಗುತ್ತದೆ ಎಂದರು. ಮೈಸೂರು ಮಿನರಲ್ಸ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ನನ್ನೊಡನೆ ಮೌಖೀಕವಾಗಿ ಹಗರಣದ ಬಗ್ಗೆ ಚರ್ಚಿಸಿದ್ದಾರೆ. ಅವರ ಸುರಕ್ಷತೆ ದೃಷ್ಟಿಯಿಂದ ಹೆಸರನ್ನು ಬಹಿರಂಗಪಡಿಸಲು ಆಗುವುದಿಲ್ಲ. ಒಂದು ಪರ್ಮಿಟ್‌ನಲ್ಲಿ ಮೂರು ಬಾರಿ ಸಾಗಣೆ ಮಾಡಲಾಗಿದೆ ಎಂದು ಹೇಳಿದರು.

ಎಂಎಂಎಲ್‌ಗೆ ಕಳೆದ ನಾಲ್ಕು ವರ್ಷಗಳಲ್ಲಿ 9 ಜನ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾಯಿಸಲಾಗಿದೆ.ಖಡಕ್‌ ಅಧಿಕಾರಿ ಮುನಿಷ್‌ ಮೌದ್ಗಿಲ್‌ ಅವರನ್ನು ಒಂದೇ ತಿಂಗಳಲ್ಲಿ ಎಂಡಿ ಹುದ್ದೆಯಿಂದ ವರ್ಗಾವಣೆ ಮಾಡಲಾಯಿತು. ಸಭ್ಯ ಮಹಿಳಾ ಅಧಿಕಾರಿ ಹೇಮಲತಾ ಅವರನ್ನು ಮೂರೇ ತಿಂಗಳಲ್ಲಿ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಿದರು.

ಈ ಮಟ್ಟದ ಅಕ್ರಮ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಆಡಳಿತ ನಡೆಸುವವರ ರಕ್ಷಣೆ ಇಲ್ಲದೆ ನಡೆಯಲು ಸಾಧ್ಯವಿಲ್ಲ. ಹೆಚ್ಚು ರನ್‌ ಆಫ್ ಮೈನ್ಸ್‌ ಗಣಿಗಾರಿಕೆ ಮಾಡಿದ್ದರೂ ಮೇಲಧಿಕಾರಿಗಳ ನಿರ್ದೇಶನದಂತೆ ಹಿಂದಿನ ವರ್ಷಗಳಿಗೆ ಹೊಂದಾಣಿಕೆ ಮಾಡಲು ಕಡಿಮೆ ವರದಿ ಮಾಡಿರುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಯಡಿಯೂರಪ್ಪಚೆಕ್‌ನಲ್ಲಿ ಹಣ ಪಡೆದ ಕಾರಣಕ್ಕೆ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಈಗ ಸರ್ಕಾರದವರು ತಾವು ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದ ಈ ಅಕ್ರಮಗಳನ್ನು ಮಾಡಿಸಿದ್ದಾರೆ ಎಂದು ಹೇಳಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿಲ್ಲ. ಹೀಗಾಗಿ, ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದರು. ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತನಿಖೆಗೆ ಆದೇಶಿಸಬೇಕು, ಯಾವ ರೀತಿಯ ತನಿಖೆ ಎಂಬುದನ್ನು ಅವರೇ ತೀರ್ಮಾನಿಸಲಿ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇಪದೆ ನನ್ನನ್ನು ಹಿಟ್‌ಅಂಡ್‌ ರನ್‌ ಎಂದು ಟೀಕಿಸುತ್ತಿದ್ದಾರೆ. ಕಿಕ್‌ಬ್ಯಾಕ್‌ ಪಡೆದು ಸುಮ್ಮನಾಗಿದ್ದೇನೆ ಎಂದು ಬಿಜೆಪಿ ಬೆಂಬಲಿಗರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಣಕುತ್ತಿದ್ದಾರೆ. ಹೀಗಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿದ್ದೇನೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದು ನಾನೇ, ಈಗಿನ ಸರ್ಕಾರದ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತಿರುವುದು ನಾನೇ.
–  ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next