Advertisement

ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಅಕ್ರಮ: ಎಸಿಬಿ ದಾಳಿ

10:22 AM Sep 09, 2020 | Suhan S |

ಬೆಂಗಳೂರು: ಮಂಡೂರಿನಲ್ಲಿ ಉದ್ದೇಶಿತ ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಯೋಜನೆಯ ಅಕ್ರಮ ಆರೋಪ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಗೆತ್ತಿಕೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪಾಲಿಕೆಯ ಮಾಜಿ ಅಧಿಕಾರಿಗಳು ಹಾಗೂ ಯೋಜನೆ ಟೆಂಡರ್‌ ಪಡೆದಿದ್ದ ಕಂಪನಿಗೆ ಮಂಗಳವಾರ ಶಾಕ್‌ ನೀಡಿದೆ.

Advertisement

ಯೋಜನೆ ಟೆಂಡರ್‌ ಪಡೆದು ಅಕ್ರಮನಡೆಸಿದ್ದ ಮೆ.ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಪ್ರೈ.ಲಿ ಸಂಸ್ಥೆ ಹಾಗೂ ಪಾಲಿಕೆಯ ನಿವೃತ್ತ ಇಬ್ಬರು ಎಂಜಿನಿಯರ್‌ಗಳ ನಿವಾಸಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಶ್ರೀನಿವಾಸ ಗಾಯತ್ರಿ ಕಂಪನಿಯ ನಿರ್ದೇಶಕ ರಮೇಶ್‌ ಬಿಂಗಿ ಅವರ ಬನಶಂಕರಿಯ ಎಸ್‌ಬಿಎಂ ಕಾಲೋನಿಯಲ್ಲಿನ ನಿವಾಸ, ಬನಶಂಕರಿಯ ಮೂರನೇ ಹಂತದ ಕಂಪನಿಯ ಕಚೇರಿ ಪಾಲಿಕೆಯ ನಿವೃತ್ತ ಸಹಾಯಕ ಎಂಜಿನಿಯರ್‌ ಶಿವಲಿಂಗೇಗೌಡ ಅವರ ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪಾಲಿಕೆಯ ನಿವೃತ್ತ ಸಹಾಯಕ ಎಂಜಿನಿಯರ್‌ ಚೆನ್ನಕೇಶವ ಎಚ್‌.ಆರ್‌ ಮೈಸೂರಿನ ವಿಜಯನಗರದಲ್ಲಿನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಅಪಾರ ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಏನು? : ಬಿದರಹಳ್ಳಿ ಹೋಬಳಿಯ ಮಂಡೂರು ಗ್ರಾಮದಲ್ಲಿ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆಯ ಟೆಂಡರ್‌ನ್ನು 2005ರಲ್ಲಿ ಮೆ.ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಪ್ರೈ.ಲಿ ಸಂಸ್ಥೆ ಪಡೆದು ಕೊಂಡಿತ್ತು. ಯೋಜನೆಗೆ ಬಿಬಿಎಂಪಿ 35 ಎಕರೆ ಜಮೀನನ್ನು ಕಂಪನಿಗೆ ನೀಡಿತ್ತು. ಜತೆಗೆ, ಬಿಬಿಎಂಪಿಯ ಒಪ್ಪಂದದಂತೆ 2006ರಲ್ಲಿ ಯೋಜನೆ ಮುಗಿಸಿಕೊಡಬೇಕಿದ್ದರೂ ಕಂಪನಿ ಪೂರ್ಣಗೊಳಿಸಿರಲಿಲ್ಲ.

ಬಿಬಿಎಂಪಿ ನೀಡುತ್ತಿದ್ದ ಘನತ್ಯಾಜ್ಯ ವೈಜ್ಞಾನಿಕವಾಗಿ ಸಂಸ್ಕರಿಸದೆ ಕಂಪನಿ ನೇರವಾಗಿ ಭೂಮಿಗೆ ಬಿಡುತ್ತಿದ್ದರಿಂದ ಮಂಡೂರು ಸುತ್ತಮುತ್ತ ಪರಿಸರ ಮಾಲಿನ್ಯ ಉಂಟಾಗಿತ್ತು. ಜತೆಗೆ, ಸುತ್ತ  ಮುತ್ತಲ ಪ್ರದೇಶದಲ್ಲಿ ಅಂತರ್ಜಲ ಸಹ ಕೆಟ್ಟುಹೋಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಪಾಲಿಕೆ ಆಂತರಿಕ ತನಿಖೆ ನಡೆಸಿದಾಗ ಕಂಪನಿ ಪಾಲಿಕೆ ವತಿಯಿಂದ ಪಡೆದಿದ್ದ ಜಮೀನು ಬ್ಯಾಂಕ್‌ಗಳಲ್ಲಿ ಅಡವಿಟ್ಟು 52.75 ಕೋಟಿ ರೂ. ಸಾಲ ಪಡೆದಿತ್ತು. ಜತೆಗೆ,ಸಂಸ್ಕರಣ ಮಾಡದ ಘನತ್ಯಾಜ್ಯಕ್ಕೂ ಪಾಲಿಕೆಯಿಂದ ಹಣ ಬಿಡುಗಡೆ ಆಗಿದ್ದು ಕಂಪನಿ 4.61 ಕೋಟಿ ರೂ. ಟಿಪ್ಪಿಂಗ್‌ ಶುಲ್ಕ ಪಡೆದಿರುವುದು ಕಂಡು ಬಂದಿತ್ತು. ಈ ಎಲ್ಲ ಅಕ್ರಮಗಳ ಕಾರಣದಿಂದ 2014ರಲ್ಲಿ ಕಂಪನಿಗೆ ಜತೆಗೆ ಆಗಿದ್ದ ಒಪ್ಪಂದನ್ನು ಪಾಲಿಕೆ ರದ್ದುಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next