ಮೈಸೂರು: ಸೌರಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಪ್ರತಿ ಮನೆಗೆ ಕನಿಷ್ಠ 200 ರೂ.ವಿದ್ಯುತ್ ಬಿಲ್ ಉಳಿತಾಯವಾಗುವ ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಹಣ ಉಳಿತಾಯವಾಗಲಿದ್ದು, ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದು ಕರ್ನಾಟಕ ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಕುಂದಾಪುರ ಆಮಾಸೆಬೈಲು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದರು. ಸೆಲ್ಕೋ ಫೌಂಡೇಷನ್ ವತಿಯಿಂದ ನೀಡಲಾದ 7ನೇ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕುಗ್ರಾಮವಾಗಿರುವ ಅಮಾಸೆಬೈಲು ಗ್ರಾಮದಲ್ಲಿ ಇಂದು ಸೌರ ವಿದ್ಯುತ್ ಬಳಕೆ ಇಲ್ಲದ ಮನೆಗಳಿಲ್ಲ. ಜೊತೆಗೆ ಸುತ್ತಮುತ್ತಲಿನ ಗ್ರಾಮಗಳವರೂ ಸೌರ ವಿದ್ಯುತ್ ಬಳಕೆಗೆ ಮುಂದಾಗಿದ್ದಾರೆ. ಆಮಾಸೆಬೈಲು ಗ್ರಾಮದಲ್ಲಿ ಸೌರ ವಿದ್ಯುತ್ ದೀಪ ತರುವ ಯೋಜನೆ ಅಷ್ಟು ಸುಲಭವಾಗಿರಲಿಲ್ಲ. ಹಣಕಾಸಿನ ಸಮಸ್ಯೆ ಎದುರಾಗಿತ್ತು. ಆದರೆ, ಟ್ರಸ್ಟಿಗಳ ಸಹಕಾರ, ರಾಜ್ಯ ಸರ್ಕಾರದ ಅನುದಾನದ ನೆರವಿನಿಂದ ಯೋಜನೆ ಕಾರ್ಯಗತವಾಗಿದೆ ಎಂದು ತಿಳಿಸಿದರು. ಸೌರ ವಿದ್ಯುತ್‌ದೀಪ ಇಂದು ಎಲ್ಲಾ ಗ್ರಾಮಗಳಿಗೂ ಅಗತ್ಯವಿದೆ. ವಿದ್ಯುತ್ ದೀಪ ಇದ್ದರೂ ಸೂರ್ಯನ ಕಿರಣದ ದೀಪ ಇದ್ದರೆ ಉತ್ತಮ ಎಂದರು.
ಸಾಯುವ ತನಕ ಸೇವೆ: ನನಗೆ ವಯಸ್ಸಾಗಿರುವ ಕಾರಣ ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ. ನೆಮ್ಮದಿಯಾಗಿ ಮನೆಯಲ್ಲಿ ಇರೀ ಅಂಥ ನನ್ನ ಪತ್ನಿ ಸೇರಿದಂತೆ ಅನೇಕರು ಹೇಳ್ತಾರೆ. ಆದರೆ, ಸಾಯುವ ತನಕ ಸೇವೆ ಮಾಡ್ತೀನಿ. ಸಾವು ಯಾವಾಗ ಬರುತ್ತದೋ ಅಂಥ ಗೊತ್ತಿಲ್ಲ. ಬದುಕಬೇಕು ಅಂದುಕೊಂಡರೆ ಅದು ಸಾಧ್ಯವಿಲ್ಲ. ಹೀಗಾಗಿ, ಇದ್ದಷ್ಟು ದಿನ ಸೇವೆ ಮಾಡಬೇಕು ಎಂಬುದು ನನ್ನ ಮನದಾಳವಾಗಿದೆ ಎಂದು ಹೇಳಿದರು.
ಅಹಮದಾಬಾದ್ ಮಹಿಳಾ ಹೌಸಿಂಗ್ ಸೇವಾ ಟ್ರಸ್ಟ್ ನಿರ್ದೇಶಕಿ ಬಿಜಲ್ ಬ್ರಹ್ಮಭಟ್ ತಮ್ಮ ಅನಿಸಿಕೆ ಹಂಚಿಕೊಂಡರು. ಸೆಲ್ಕೋ ಮುಖ್ಯಸ್ಥ ಎಚ್.ಹರೀಶ ಹಂದೆ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆಗೆ ಕೊಡುತ್ತಿರುವ ಅನುದಾನವನ್ನು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕೊಡುತ್ತಿಲ್ಲ. ಗನ್ ಹಿಡಿದು ಯುದ್ಧ ಮಾಡಿ ಒಬ್ಬರನ್ನು ಕೊಂದಾಗ ಸಂತೋಷ ಪಡುತ್ತೇವೆ. ಆದರೆ, ನಮ್ಮೊಳಗೆ ಇರುವ ಬಡತನ ನಿರ್ಮೂಲನೆ ಬಗ್ಗೆ ಚಿಂತನೆ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅನುದಾನ ಕೊರತೆ: ದೇಶದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಶೇ.11ರಷ್ಟು ಅನುದಾನ ಮೀಸಲಿಟ್ಟರೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಕೇವಲ ಶೇ.2ರಷ್ಟು ಅನುದಾನ ಕೊಡಲಾಗುತ್ತಿದೆ. ಈ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಅನುದಾನ ದೊರೆತರೆ ಸಾಕಷ್ಟು ಸಮಸ್ಯೆ ನಿವಾರಣೆಯಾಗಲಿದೆ. ಜೊತೆಗೆ ವಿದ್ಯುತ್ ಇಲ್ಲದ ಗ್ರಾಮಗಳಿಗೆ ಸೌರ ವಿದ್ಯುತ್ ಅಳವಡಿಕೆಗೆ ಸರ್ಕಾರ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.
ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಚೆನ್ನೈನಲ್ಲಿ ಇಂದು ನೀರಿನ ಸಮಸ್ಯೆ ಉಂಟಾಗಿ ರೈಲುಗಳಲ್ಲಿ, ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಾವು ಸೌರಶಕ್ತಿ ಮಹತ್ವ ಅರಿಯದೆ ಇದ್ದರೆ ಕಷ್ಟವಾದೀತು. ನಾವು ನೀರು ಮತ್ತು ಬೆಳಕಿನ ಮಹತ್ವ ಗೊತ್ತಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸೆಲ್ಕೋ ಫೌಂಡೇಶನ್ ನಿರ್ದೇಶಕ ಕೆ.ಎಸ್.ಶ್ರೀನಿವಾಸ್, ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಮೋಹನ್ ಹೆಗ್ಡೆ ಇನ್ನಿತರರು ಸಮಾರಂಭದಲ್ಲಿ ಹಾಜರಿದ್ದರು.