Advertisement
ವಾಸ್ತವವಾಗಿ ಇದು ರಸ್ತೆಯ ಸಮಸ್ಯೆ. ಬಸ್ ನಿಲ್ದಾಣ ಸನಿಹದಲ್ಲೇ ಇರುವುದರಿಂದ ಬಸ್ ಸಹಿತ ವಾಹನ ಓಡಾಟ ಹೆಚ್ಚು. ಹಾಗೆಂದು ಅಪಾಯ ಸಂಭವಿಸಿದರೆ ನೆಲ್ಲಿಕಟ್ಟೆ ಡಾ| ಕೆ. ಶಿವರಾಮ ಕಾರಂತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದರ ನೇರ ಪರಿಣಾಮ ತಟ್ಟುತ್ತದೆ. ಆದ್ದರಿಂದಲೇ ರಸ್ತೆಯನ್ನು ವಿಸ್ತರಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂಬ ಕೂಗು ಹಲವು ಸಮಯಗಳಿಂದ ಕೇಳಿ ಬರುತ್ತಲೇ ಇದೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಒತ್ತಿಕೊಂಡಂತಿದೆ ಈ ಪ್ರೌಢಶಾಲೆ. 1997ರ ಮೊದಲು ಪ್ರಾಥಮಿಕ ಶಾಲೆಯೂ ಇದರಲ್ಲೇ ಕಾರ್ಯಾಚರಿಸುತ್ತಿತ್ತು. ಬಳಿಕ ಸ್ಥಳಾವಕಾಶದ ಕೊರತೆಯನ್ನು ಮನಗಂಡು, ಪ್ರತ್ಯೇಕ ಜಾಗ ಕೊಡಲಾಯಿತು. ಶಿವರಾಮ ಕಾರಂತ ಪ್ರೌಢಶಾಲೆ ಮಾತ್ರವಲ್ಲ ಕೊಂಬೆಟ್ಟು ಜೂನಿಯರ್ ಕಾಲೇಜು, ರಾಮಕೃಷ್ಣ ಪ್ರೌಢಶಾಲೆ ಸಹಿತ ಹಲವು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಇದೇ ರಸ್ತೆಯಿಂದ ನಡೆದು ಸಾಗುತ್ತಾರೆ. ಬೆಳಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳೇ ತುಂಬಿರುತ್ತಾರೆ. ಇಂತಹ ಸಂದರ್ಭ ಘನ ವಾಹನ ಎದುರು- ಬದುರಾದರೆ ನಡೆದಾಡಲು ಜಾಗವಿಲ್ಲ. ಅಂತಹ ಸಂದರ್ಭ ಅಪಾಯಗಳು ಸಂಭವಿಸಿದರೆ ಯಾರು ಜವಾಬ್ದಾರರು. ಇದು ಸಾರ್ವಜನಿಕರ ಪ್ರಶ್ನೆ. ಶಿವರಾಮ ಕಾರಂತ ಪ್ರೌಢಶಾಲೆಯ ಆಟದ ಮೈದಾನ ಈ ರಸ್ತೆ ಪಕ್ಕದಲ್ಲೇ ಇದೆ. ಒಂದೆಡೆ ಶಾಲಾ ಕಟ್ಟಡ ಇನ್ನೊಂದೆಡೆ ಆವರಣಗೋಡೆ ಇದೆ ಎನ್ನುವುದನ್ನು ಬಿಟ್ಟರೆ ಭದ್ರತೆಯ ಜಾಗವಲ್ಲ.
Related Articles
ಮಂಗಳೂರು, ಕಾಸರಗೋಡು ಕಡೆಯಿಂದ ಆಗಮಿಸುವ ಖಾಸಗಿ, ಸರಕಾರಿ ಬಸ್‌ಗಳು ಇದೇ ರಸ್ತೆಯಾಗಿ ನಿಲ್ದಾಣವನ್ನು ಪ್ರವೇಶಿಸುತ್ತವೆ. ಆದರೆ ಇವುಗಳು ಬಸ್ ನಿಲ್ದಾಣದಿಂದ ಪರ್ಯಾಯ ರಸ್ತೆಯ ಮೂಲಕ ಹೊರ ಹೋಗುತ್ತವೆ.
Advertisement
ಹಾಗೆಂದು ಇತರ ಘನ ವಾಹನ, ಚತುಶ್ಚಕ್ರ, ದ್ವಿಚಕ್ರ ವಾಹನಗಳಿಗೆ ಈ ನಿರ್ಬಂಧವಿಲ್ಲ. ಇವುಗಳು ಇದೇ ರಸ್ತೆಯನ್ನು ದ್ವಿಮುಖ ರಸ್ತೆಯಾಗಿ ಬಳಸಿಕೊಳ್ಳುತ್ತವೆ. ಇದು ಮುಖ್ಯ ರಸ್ತೆಗೆ ಪ್ರಮುಖ ಸಂಪರ್ಕ ರಸ್ತೆ ಆಗಿರುವುದರಿಂದ ಎಲ್ಲ ಹೊತ್ತಿನಲ್ಲೂ ಜನನಿಬಿಡ. ಆದ್ದರಿಂದ ರಸ್ತೆ ವಿಸ್ತರಿಸುವುದು ಅನಿವಾರ್ಯ.ವಿದ್ಯಾರ್ಥಿ, ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಪೂರಕ ವಾತಾವರಣ ಅಗತ್ಯನೆಲ್ಲಿಕಟ್ಟೆ ಪ್ರೌಢಶಾಲೆಯಿಂದ ಮುಂದೆ ಸಾಗುವ ಈ ಹಾದಿ ಇಕ್ಕಟ್ಟಾಗಿದ್ದು, ಅಗಲಗೊಳಿಸಬೇಕೆಂಬ ಇಚ್ಛೆ ನಗರಸಭೆಗೆ ಇದೆ. ಇದಕ್ಕೆ ಪ್ರೌಢಶಾಲೆ ಜಾಗ ನೀಡಬೇಕು. ಮಾತ್ರವಲ್ಲ ಪಿಡಬ್ಲ್ಯುಡಿ ಹಾಗೂ ಶಾಸಕರು ಮುಂದೆ ಬರಬೇಕು. ಇದಕ್ಕೆ ಪೂರಕ ವಾತಾವರಣ ಕಲ್ಪಿಸಿದರೆ ಖಂಡಿತಾ ರಸ್ತೆ ವಿಸ್ತರಿಸುವ ಪ್ರಕ್ರಿಯೆಗೆ ಮುಂದಾಗುತ್ತೇವೆ.
-ಜಯಂತಿ ಬಲಾ°ಡು,
ಅಧ್ಯಕ್ಷೆ, ನಗರಸಭೆ