ಮೈಸೂರು: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವವರು ದಾಖಲೆಗಳಿದ್ದರೆ ಹಾಜರುಪಡಿಸಲಿ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯ ನಂತರ ಇದೇ ಮೊದಲ ಬಾರಿಗೆ ಅಭಿವೃದ್ಧಿ ಕಾಣುತ್ತಿದೆ. ಮೈಸೂರಿನಲ್ಲಿ ಎಲ್ಲಿ ನೋಡಿದರೂ ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳು ಕಾಣುತ್ತವೆ.
ಸುಮಾರು 5000 ಕೋಟಿ ವೆಚ್ಚದಲ್ಲಿ ಕಾಲಮಿತಿಯೊಳಗೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಮೈಸೂರಿನ ಅಭಿವೃದ್ಧಿಗೂ ಶಿವಮೊಗ್ಗ, ಶಿಕಾರಿಪುರ ಅಭಿವೃದ್ಧಿಯನ್ನೂ ಹೋಗಿ ನೋಡಿ ಬನ್ನಿ ಎಂದ ಅವರು, ಬಿಜೆಪಿಯವರು ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಹಾಗೂ ರಾಜಕೀಯ ಪ್ರೇರಿತವಾದವು ಅವರ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದರು.
ರಸ್ತೆ ಅಭೀವೃದ್ಧಿಗೆ ಶೀಘ್ರ ಅನುಮತಿ: ಲೋಕೋಪಯೋಗಿ ಇಲಾಖೆಯಲ್ಲೇ 35 ರಿಂದ 40 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಾಗಿದೆ. ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಶೇ.80ರಷ್ಟು ಭೂ ಸ್ವಾಧೀನ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜಕೀಯ ದೃಷ್ಟಿಯಿಂದ ನೋಡದೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಅನುಮತಿ ನೀಡಲಿ ಎಂದರು.
ರಾಜೀ ಆಗಲ್ಲ: ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೂ ನೈಸ್ ಹಗರಣಗಳಿಗೂ ಸಂಬಂಧವಿಲ್ಲ. ರಾಜಕೀಯವೇ ಬೇರೆ, ನೈಸ್ ರಸ್ತೆಯ ಫ್ರೆàಂ ಅಗ್ರಿಮೆಂಟೇ ಬೇರೆ. ಫ್ರೆàಂ ಅಗ್ರಿಮೆಂಟ್ ಉಲ್ಲಂಘನೆಯಾಗಿದ್ದರೆ ಅಪರಾಧ. ಸುಪ್ರೀಂಕೋರ್ಟ್‌ನಲ್ಲಿ ವ್ಯಾಜ್ಯ ಇದೆ ನೋಡೋಣ ಎಂದರು.
ಕಿಂಗ್ ಮೇಕರ್ ಆಗಬಾರದಾ: ನಾನು ನಿಂತು ಗೆಲ್ಲುವುದಕ್ಕಿಂತ ಇನ್ನೊಬ್ಬರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಕಿಂಗ್ ಮೇಕರ್ ಆಗಬಾರದಾ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲೆಕ್ಷನ್‌ಗೆ ನಿಲ್ಲುವುದಕ್ಕಿಂತ ಮುಖ್ಯವಾಗಿ ಕೋಮುವಾದ ಮತ್ತು ಮೂಲಭೂತವಾದದ ವಿರುದ್ಧ ಹೋರಾಡಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.