ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಹೋರಾಟ ಅನೇಕ ತಿಂಗಳುಗಳಿಂದ ನಡೆಯುತ್ತಿದ್ದು, ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಧೋರಣೆ ತಾಳಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಚಿವರಿಗೆ ಮನವಿ ಸಲ್ಲಿಸಿದ ಮುಖಂಡರು ಈ ರೀತಿ ಎಚ್ಚರಿಕೆ ನೀಡಿದರು.
ಶಾಸಕ ಡಾ| ಶಿವರಾಜ ಪಾಟೀಲ್ ಮಾತನಾಡಿ, ಜಿಲ್ಲೆ ಸಾಕಷ್ಟು ವಿಚಾರದಲ್ಲಿ ಅವಕಾಶ ವಂಚಿತವಾಗುತ್ತಿದೆ. ಸಾಕಷ್ಟು ಯೋಜನೆಗಳು ಕೈ ತಪ್ಪುತ್ತಿವೆ. ಟಿಎಲ್ ಬಿಸಿ, ಎನ್‌ಆರ್‌ಬಿಸಿ ಕೊನೆ ಭಾಗದ ರೈತರಿಗೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕ ಎಂದರೆ ಕಲಬುರಗಿ ಎನ್ನುವಂತಾಗಿದೆ. ಉತ್ತರ ಕರ್ನಾಟಕ ಎಂದರೆ ಬೆಳಗಾವಿ, ಹುಬ್ಬಳ್ಳಿ ಧಾರವಾಡ ನೆನಪಾಗುತ್ತದೆ. ಹೀಗಾಗಿ ನಮ್ಮ ಜಿಲ್ಲೆ ಅತಂತ್ರ ಸ್ಥಿತಿಯಲ್ಲಿದೆ ಎಂದು ಸಮಸ್ಯೆ ವಿವರಿಸಿದರು.
ಜಿಲ್ಲೆಗಾಗುತ್ತಿರುವ ಅನ್ಯಾಯದ ಬಗ್ಗೆ ನೋವು ತೋಡಿಕೊಂಡಾಗ ಬೇರೆ ಅರ್ಥ ಕಲ್ಪಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಏಮ್ಸ್ ಜಿಲ್ಲೆಗೆ ಮುಂಜೂರು ಮಾಡಿಸಲು ಶ್ರಮಿಸಬೇಕು ಎಂದರು.
ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಮೂರು ತಿಂಗಳಿಂದಲೂ ನಿರಂತರ ಹೋರಾಟ ನಡೆದಿರುವ ಬಗ್ಗೆ ಸಿಎಂ ಗಮನಕ್ಕೆ ಸೆಳೆಯಲಾಗಿದೆ. ಆ.27ರಂದು ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವರು. ಅವರೊಂದಿಗೆ ಚರ್ಚಿಸಲಾಗುವುದು. ದಯವಿಟ್ಟು ಹೋರಾಟ ಕೈ ಬಿಡಿ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಿ.ಪಂಪಣ್ಣ ನೆರವಿ, ಬಸರಾಜ ಕಳಸ, ಅಶೋಕ ಕುಮಾರ ಸಿ.ಕೆ. ಜೈನ್, ಎಸ್.ಮಾರೆಪ್ಪ ಇದ್ದರು.