ಚಿಂಚೋಳಿ: ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದರೆ ಆರ್ಯ ಈಡಿಗ ಸಮಾಜದ ಕುಲ ಕಸುಬು ನೀರಾ ಮಾರಾಟವನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಜಾತ್ಯತೀತ ಜನತಾದಳ ರಾಜ್ಯ ಉಪಾಧ್ಯಕ್ಷ ಹಾಗೂ ಸೊರಬ ಶಾಸಕ ಮಧುಬಂಗಾರಪ್ಪ ಭರವಸೆ ನೀಡಿದರು.
ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದಲ್ಲಿ ತಾಲೂಕು ಆರ್ಯ ಈಡಿಗ ಸಮಾವೇಶ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ವಿಚಾರಗಳು ಹಾಗೂ ಅವರ ಸಂದೇಶಗಳು ನಮಗೆ ಸ್ಫೂರ್ತಿದಾಯಕವಾಗಿವೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಅಂದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲಿದೆ ಎಂದರು.
ಆಳಂದ ತಾಲೂಕಿನ ಮಾಜಿ ಶಾಸಕ ಸುಭಾಶ ಗುತ್ತೇದಾರ ಮಾತನಾಡಿ, ನಮ್ಮ ಕುಲ ಕಸುಬನ್ನು ನಿಲ್ಲಿಸಿರುವುದರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕುಲ ಕಸುಬು ಮತ್ತೆ ಪ್ರಾರಂಭ ಮಾಡಬೇಕಾಗಿದೆ ಎಂದರು.
ಮಾಜಿ ಸಚಿವ ಸುನೀಲ ವಲ್ಯಾಪುರೆ, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ, ಬಸ್ಸಯ್ಯ ಗುತ್ತೇದಾರ, ಅರಣಕಲ್ ಜಿಪಂ ಸದಸ್ಯ ರಾಜೇಶ ಗುತ್ತೇದಾರ, ರಾಮಚಂದ್ರ ಜಾಧವ್ ಮಾತನಾಡಿದರು.ಬೆಂಗಳೂರಿನ ಚಿಂತಕರಾದ ನಿಕೇತನ್‌ರಾಜ್ ಮೌರ್ಯ ಬ್ರಹ್ಮಶ್ರೀ ನಾರಾಯಣ
ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭರತನೂರ ಮಠದ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ತಾಪಂ ಅಧ್ಯಕ್ಷ ರೇಣುಕಾ ಚವ್ಹಾಣ, ಜಗದೇವ ಗುತ್ತೇದಾರ, ಸಿದ್ದಯ್ಯ ಗೌಡ ಮಿರಿಯಾಣ, ಎಪಿಎಂಸಿ ನಿರ್ದೇಶಕ ಅಜೀತ ಪಾಟೀಲ, ಸುರೇಶ ಐನಾಪುರ, ಬಾಬಯ್ಯ ಗುತ್ತೇದಾರ, ಶಾಂತಕುಮಾರ ಗುತ್ತೇದಾರ, ಬಾಲಗೌಡ ಮಿರಿಯಾಣ, ಅಶೋಕ ಕುಡಹಳ್ಳಿ ಇದ್ದರು. ತಾಲೂಕು ಆರ್ಯ
ಈಡಿಗ ಸಮಾಜದ ಅಧ್ಯಕ್ಷ ಚಂದ್ರಶೇಖರ ಗುತ್ತೇದಾರ ಗಾರಂಪಳ್ಳಿ ಸ್ವಾಗತಿಸಿದರು, ಭೀಮಯ್ಯ ನಿರೂಪಿಸಿದರು, ಅಶೋಕ ಗುತ್ತೇದಾರ ವಂದಿಸಿದರು.